ಅಯೋಧ್ಯೆ ನಂತರ ಕಾಶಿ, ಮಥುರಾ ದೇವಸ್ಥಾನಗಳ ‘ವಿಮೋಚನೆ’ಗೆ ಅಭಿಯಾನ: ಅಖಿಲ ಭಾರತೀಯ ಅಖಾರ ಪರಿಷದ್

Update: 2020-09-09 12:52 GMT

ಹೊಸದಿಲ್ಲಿ: ಅಯೋಧ್ಯೆ ವಿವಾದದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದು ಒಂದು ವರ್ಷದ ನಂತರ ಅಲ್ಲಿ ರಾಮ ಮಂದಿರಕ್ಕೆ ಭೂಮಿಪೂಜೆ ನಡೆದಿರುವ ಬೆನ್ನಲ್ಲೇ ಕೆಲ ಸಂಘಟನೆಗಳು ಕಾಶಿ ಮತ್ತು ಮಥುರಾ ದೇವಸ್ಥಾನಗಳಿಗೂ ‘ವಿಮೋಚನೆ'  ಒದಗಿಸುವ ಕುರಿತಂತೆ ಮಾತನಾಡಲಾರಂಭಿಸಿವೆ.

ಕಾಶಿಯ ವಿಶ್ವನಾಥ ದೇವಸ್ಥಾನದ ಆವರಣ ಗೋಡೆಗೆ ಹೊಂದಿಕೊಂಡೇ ಗ್ಯಾನ್ವಾಪಿ ಮಸೀದಿಯಿದ್ದರೆ ಮಥುರಾದ ಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕವೇ ಶಾಹೀ ಈದ್ಗಾ ಮಸೀದಿಯಿದೆ. ಹಿಂದೂ ಸಂತರ ಸಂಘಟನೆಯಾದ ಅಖಿಲ ಭಾರತೀಯ ಅಖಾರ ಪರಿಷದ್ ತಾನು ವಾರಣಾಸಿ ಮತ್ತು ಮಥುರಾ ದೇವಸ್ಥಾನಗಳನ್ನು ಅಯೋಧ್ಯೆಯ ರಾಮಜನ್ಮಭೂಮಿ ಆಂದೋಲನದ ರೀತಿಯಲ್ಲಿಯೇ ವಿಮೋಚನೆಗೊಳಿಸುವ ಅಭಿಯಾನವನ್ನು ಹಮ್ಮಿಕೊಳ್ಳುವುದಾಗಿ ಹೇಳಿದೆಯಲ್ಲದೆ ಪರಿಷದ್ ಅಧ್ಯಕ್ಷ ಮಹಂತ್ ನರೇಂದ್ರ ಗಿರಿ ನೇತೃತ್ವದಲ್ಲಿ ಪ್ರಯಾಗರಾಜ್‍ನಲ್ಲಿ ಎಲ್ಲಾ 13 ಅಖಾರಗಳ ಮುಖ್ಯಸ್ಥರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯವನ್ನೂ ಅಂಗೀಕರಿಸಲಾಗಿದೆ. ಈ ನಿಟ್ಟಿನಲ್ಲಿ ವಿಶ್ವ ಹಿಂದು ಪರಿಷದ್ ಹಾಗೂ ಆರೆಸ್ಸೆಸ್ ಸಹಯೋಗದೊಂದಿಗೆ ಕಾನೂನು ಹೋರಾಟಕ್ಕೆ ಚಿಂತನೆ ನಡೆಸಲಾಗುವುದು ಎಂದು  ನರೇಂದ್ರ ಗಿರಿ ಹೇಳಿದ್ದಾರೆ.

ಆದರೆ ಅಖಾರ ಪರಿಷದ್ ನಿರ್ಣಯದ ಹೊರತಾಗಿಯೂ ಈ ಕುರಿತಂತೆ ಯಾವುದೇ ಅವಸರ ಮಾಡುವುದಿಲ್ಲವೆಂದು ಆರೆಸ್ಸೆಸ್ ಹೇಳಿದೆಯೆಂದು ವರದಿಯೊಂದು ತಿಳಿಸಿದೆ.

ಆದರೆ ಈ ಹಿಂದೆ ಹೇಳಿದ್ದಂತೆ ಬೇರೆ ಯಾವುದೇ ಅಭಿಯಾನದಲ್ಲಿ ತಾನು ಭಾಗಿಯಾಗುವುದಿಲ್ಲ ಎಂಬ ಹೇಳಿಕೆಯಿಂದ ಆರೆಸ್ಸೆಸ್ ಹಿಂದೆ ಸರಿಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

“ಇದು ನಮ್ಮ ಯೋಜನೆಯಾಗಿರುವುದಿಲ್ಲ. ಸಮಾಜವು ಈ ಬಗ್ಗೆ ಒಲವು ವ್ಯಕ್ತಪಡಿಸಿದರೆ ನಾವದನ್ನು ಪರಿಗಣಿಸಬಹುದು. ಆದರೆ ಕಾಶಿ ಮತ್ತು ಮಥುರಾದ ಬಗ್ಗೆ ಸಂಘವು ಯಾವುದೇ ಯೋಜನೆಯನ್ನು ಹೊಂದಿಲ್ಲ” ಎಂದು ಆರೆಸ್ಸೆಸ್ ನಾಯಕರೊಬ್ಬರು ಹೇಳಿದ್ದಾರೆ ಎಂದು theprint.in ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News