ಟ್ವಿಟ್ಟರ್ ನಲ್ಲಿ ನೀಡಿದ ದೂರಿಗೆ ಸ್ಪಂದಿಸಿದ ಕೆಎಸ್ಆರ್‌ಟಿಸಿ

Update: 2020-09-09 13:07 GMT

ಬೆಂಗಳೂರು, ಸೆ.9: ನೆಟ್ಟಿಗರೊಬ್ಬರು ಟ್ವಿಟ್ಟರ್ ಮೂಲಕ ನೀಡಿದ ದೂರಿಗೆ ಪ್ರತಿಕ್ರಿಯಿಸುವ ಮೂಲಕ ಕೆಎಸ್ಆರ್‌ಟಿಸಿ ಸಂಸ್ಥೆ ಸಮಸ್ಯೆ ಬಗೆಹರಿಸಿದ್ದು, ಇದಕ್ಕೆ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದೆ.

ಸುದರ್ಶನ್ ಡಿ.ಟಿ ಎಂಬವರು ಜನರು ಬಸ್ ಇಲ್ಲದೇ ಲಾರಿ ಮತ್ತು ಕಾರುಗಳನ್ನು ಹಿಡಿದು ಪ್ರಯಾಣ ಬೆಳೆಸುತ್ತಿರುವ ವಿಡಿಯೋವನ್ನು ಹಾಕಿದ್ದರು. ಇದು ಚಿತ್ರದುರ್ಗ ತಾಲೂಕಿನ ಸಿರಿಗೆರೆ ಕ್ರಾಸ್ ಬಳಿಯ ದೃಶ್ಯ. ಚಿತ್ರದುರ್ಗ ಹಾಗೂ ದಾವಣಗೆರೆ ವಿಭಾಗದ ಎಲ್ಲಾ ವೇಗದೂತ ಬಸ್ಸುಗಳು ಇಲ್ಲಿ ನಿಲ್ಲಿಸಿ ಹೋಗಬೇಕು. ಆದರೆ ನಿಲ್ಲಿಸುತ್ತಿಲ್ಲ ಎಂದು ದೂರು ನೀಡಿದ್ದರು.

ಮೊದಲೆಲ್ಲ ಸ್ನೇಹಮಯಿ ಬಸ್ಸುಗಳು ಓಡಾಡುತ್ತಿದ್ದವು. ಈಗ ಸ್ನೇಹಮಯಿಗಳ ಸಂಖ್ಯೆಗಳನ್ನು 2ಕ್ಕೆ ಇಳಿಸಲಾಗಿದೆ. ಈಗಾಗಲೇ ಬೆಂಗಳೂರಿನಿಂದ ಬರುವ ಎಲ್ಲಾ ಬಸ್ಸುಗಳು ದಾವಣಗೆರೆ ಮೇಲೆಯೇ ಸಂಚಾರ ಮಾಡುತ್ತಿದ್ದು, ಅವುಗಳು ವೇಗದೂತ ಬಸ್ ಆಗಿವೆ. ಹಿಂದೆ ಇದ್ದ ಎಲ್ಲಾ ಸ್ನೇಹಮಯಿ ಬಸ್ಸುಗಳನ್ನು ಈಗ ಚಿತ್ರದುರ್ಗ-ದಾವಣಗೆರೆ ನಾನ್ ಸ್ಟಾಪ್ ಆಗಿ ಮಾಡಿದ್ದಾರೆ ಎಂದು ಬರೆದು ಕೆಎಸ್ಆರ್‌ಟಿಸಿಯನ್ನು ಟ್ಯಾಗ್ ಮಾಡಿದ್ದರು.

ಇದಕ್ಕೆ ಉತ್ತರಿಸಿರುವ ಕೆಎಸ್ಆರ್‌ಟಿಸಿ, ಕೊರೋನ ಕಾರಣದಿಂದ ಆ ಮಾರ್ಗದ ಎಲ್ಲ ಬಸ್ಸುಗಳನ್ನು ನಾನ್ ಸ್ಟಾಪ್ ಆಗಿ ಮಾಡಲಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ದಾವಣಗೆರೆ ಮತ್ತು ಚಿತ್ರದುರ್ಗ ಬಸ್ ನಿಲ್ದಾಣಕ್ಕೆ ಬೆಳಗ್ಗೆ 7ರಿಂದ ಸಂಜೆ 7.30ರವರೆಗೆ ಸ್ನೇಹಮಹಿ ಬಸ್ಸುಗಳನ್ನು ಬಿಡಲಾಗಿದೆ. ಪ್ರಯಾಣಿಕರು ಇದನ್ನು ಉಪಯೋಗಿಸಿಕೊಂಡು ಸಹಕರಿಸಬೇಕು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News