ಕೆ.ಎಲ್.ಅಶೋಕ್ ರನ್ನು ಅವಮಾನಿಸಿದ ಆರೋಪ: ಕೊಪ್ಪ ಠಾಣೆಯ ಪಿಎಸ್ಸೈ, ಪೇದೆ ಅಮಾನತಿಗೆ ಆಗ್ರಹಿಸಿ ಧರಣಿ

Update: 2020-09-09 13:59 GMT

ಚಿಕ್ಕಮಗಳೂರು, ಸೆ.9: ವಾಹನ ನಿಲುಗಡೆ ವಿಚಾರ ಸಂಬಂಧ ಜನಪರ ಹೋರಾಟಗಾರ ಹಾಗೂ ಪತ್ರಕರ್ತ ಕೆ.ಎಲ್.ಅಶೋಕ್ ಅವರನ್ನು ಕೊಪ್ಪ ಠಾಣೆಯ ಪೊಲೀಸರು ವಿನಾ ಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ತಪ್ಪಿತಸ್ಥ ಪೊಲೀಸ್ ಅಧಿಕಾರಿ ಹಾಗೂ ಪೇದೆಯನ್ನು ಕೂಡಲೇ ಅಮಾನತು ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸಂವಿಧಾನ ಉಳಿಸಿ ಹೋರಾಟ ಸಮಿತಿ ಮುಖಂಡರು ಬುಧವಾರ ನಗರದಲ್ಲಿ ಧರಣಿ ನಡೆಸಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ನಗರದ ಆಜಾದ್ ಪಾರ್ಕ್ ಆವರಣದಲ್ಲಿ ಬುಧವಾರ ಸಮಾವೇಶಗೊಂಡ ಸಂವಿಧಾನ ಉಳಿವಿಗಾಗಿ ಹೋರಾಟ ಸಮಿತಿಯ ಮುಖಂಡರು, ಜನಪರ, ಪ್ರಗತಿಪರ ಹೋರಾಟಗಾರರ ವಿರುದ್ಧ ಜಿಲ್ಲೆಯ ಕೆಲ ಪೊಲೀಸರು ಉದ್ದೇಶಪೂರ್ವಕವಾಗಿ ಅವಮಾನಿಸುವ ಕೆಲಸ ಮಾಡುತ್ತಿದ್ದು, ಇಂತಹ ಪೊಲೀಸರಿಂದ ಸಾರ್ವಜನಿಕರಿಗೆ ನ್ಯಾಯ ಸಿಗುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಸಾರ್ವಜನಿಕರ ಮೇಲೆ ದರ್ಪ ತೋರುವ ಪೊಲೀಸ್ ಇಲಾಖೆ ಮುಖ್ಯಸ್ಥರು ಅಗತ್ಯ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಳೆದ ಸೆ.7ರಂದು ಹೋರಾಟಗಾರ, ಪತ್ರಕರ್ತರೂ ಆಗಿರುವ ಕೆ.ಎಲ್.ಅಶೋಕ್ ಖಾಸಗಿ ಕೆಲಸದ ನಿಮಿತ್ತ ತಮ್ಮ ಕುಟುಂಬದೊಂದಿಗೆ ಕಾರಿನಲ್ಲಿ ಕೊಪ್ಪ ಪಟ್ಟಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಅವರು ತಮ್ಮ ಕಾರನ್ನು ನೋ ಪಾರ್ಕಿಂಗ್ ಜಾಗದಲ್ಲಿ ಗೊತ್ತಿಲ್ಲದೇ ನಿಲ್ಲಿಸಿದ್ದಾರೆ. ಇದನ್ನು ಗಮನಿಸಿದ ಕೊಪ್ಪ ಠಾಣೆಯ ರಮೇಶ್ ಎಂಬ ಪೇದೆ ಕಾರು ನಿಲ್ಲಿಸಿರುವುದನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಅಶೋಕ್ ಅವರು, ತಿಳಿಯದೇ ನಿಲ್ಲಿಸಿದ್ದೇನೆ, ದಂಡ ವಿಧಿಸಿದಲ್ಲಿ ನ್ಯಾಯಾಲಯದಲ್ಲಿ ಕಟ್ಟುವುದಾಗಿ ಹೇಳಿದ್ದಾರೆ. ಇಷ್ಟಕ್ಕೆ ಕುಪಿತನಾದ ಪೇದೆ ರಮೇಶ್ ಅಶೋಕ್ ಅವರನ್ನು ಸಾರ್ವಜನಿಕವಾಗಿ ಹಾಗೂ ಕುಟುಂಬದವರ ಎದುರಿಗೆ ಮನಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತಾನೊಬ್ಬ ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಎಂದು ಪರಿಚಯ ಹೇಳಿಕೊಂಡರೂ ಪೇದೆ ರಮೇಶ್, ಉದ್ದೇಶಪೂರ್ವಕವಾಗಿ ನಡುರಸ್ತೆಯಲ್ಲಿ ನಿಲ್ಲಿಸಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಕರೆಸಿಕೊಂಡ ಠಾಣಾಧಿಕಾರಿ ರವಿ ಎಂಬವರೂ ಅಶೋಕ್ ಅವರನ್ನು ನಿಂದಿಸಿದ್ದು, ಮೊಬೈಲ್ ಅನ್ನೂ ಕಸಿದುಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಶಾಸಕ ರಾಜೇಗೌಡ ಅವರನ್ನುದ್ದೇಶಿಸಿಯೂ ನಿಂದಿಸಿದ್ದಾರೆ ಎಂದು ಮುಖಂಡರು ಆರೋಪಿಸಿದರು.

ಪೊಲೀಸರಿಗೆ ಜನಪರ ಹೋರಾಟಗಾರನ್ನು ಕಂಡರೇ ಭಯವೋ, ದ್ವೇಷವೋ ಗೊತ್ತಿಲ್ಲ. ಮಾತುಕತೆಯಲ್ಲೇ ಬಗೆಹರಿಯಬಹುದಾಗಿದ್ದ ಘಟನೆಯನ್ನು ಕೊಪ್ಪ ಪೊಲೀಸ್ ಠಾಣೆಯ ಪೊಲೀಸರು ಉದ್ದೇಶಪೂರ್ವಕವಾಗಿ ವಿವಾದ ಮಾಡಿದ್ದಾರೆ. ಹೋರಾಟಗಾರ, ಪತ್ರಕರ್ತರನ್ನು ನಡುರಸ್ತೆಯಲ್ಲೇ ಅವಮಾನಿಸಿ ದ್ವೇಷ ಸಾಧನೆಗೆ ಮುಂದಾಗಿದ್ದಾರೆ. ಈ ಮೂಲಕ ಅಶೋಕ್ ಅವರ ಹೋರಾಟದ ಧ್ವನಿಯನ್ನು ಹತ್ತಿಕ್ಕಲು ಪೊಲೀಸರು ಮುಂದಾಗಿದ್ದಾರೆ. ಇಂತಹ ಬೆದರಿಕೆ, ಅವಮಾನಗಳಿಂದ ಹೋರಾಟಗಾರರನ್ನು ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಪೊಲೀಸರು ಅರ್ಥಮಾಡಿಕೊಳ್ಳಬೇಕೆಂದ ಮುಖಂಡರು, ಜನಪರ ಹೋರಾಟಗಾರರ ವಿರುದ್ಧವೇ ಅಮಾನುಷವಾಗಿ ವರ್ತಿಸುವ ಪೊಲೀಸರು ನ್ಯಾಯ ಕೇಳಿ ಠಾಣೆಗೆ ಬರುವ ಸಾಮಾನ್ಯ ಜನರಿಗೆ ನ್ಯಾಯ ದೊರಕಿಸಿ ಕೊಡಲು ಸಾಧ್ಯವೇ ಇಲ್ಲ. ಆದ್ದರಿಂದ ಯಾವುದೇ ತಪ್ಪು ಮಾಡದ ಅಶೋಕ್ ಹಾಗೂ ಅವರ ಕುಟುಂಬವನ್ನು ಸಾರ್ವಜನಿಕವಾಗಿ ಅವಮಾನಿಸಿದ ಕೊಪ್ಪ ಠಾಣೆಯ ಪೇದೆ ರಮೇಶ್ ಹಾಗೂ ಪಿಎಸ್ಸೈ ರವಿ ಅವರನ್ನು ಈ ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿದರು. 

ಧರಣಿ ಬಳಿಕ ಎಸ್ಪಿ ಕಚೇರಿಗೆ ತೆರಳಿ ಘಟನೆ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸರನ್ನು ಅಮಾನತು ಮಾಡಬೇಕೆಂದು ದೂರು ಸಲ್ಲಿಸಿದರು. ಧರಣಿಯಲ್ಲಿ ಮುಖಂಡರಾದ ಗೌಸ್ ಮೊಹಿದ್ದೀನ್, ಕೃಷ್ಣಮೂರ್ತಿ, ಹಸನಬ್ಬ, ಗೋಪಾಲ್‍ಗೌಡ, ಪುಟ್ಟಸ್ವಾಮಿ, ಕೌಳಿ ರಾಮು, ಅಂಜುಮಾನ್ ಮುನೀರ್, ವೆಂಕಟೇಶ್, ಗಣೇಶ್, ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಜ್ಮತ್ ಪಾಶ, ಕಾಂಗ್ರೆಸ್ ಮುಖಂಡ ರಸೂಲ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.

ಕೆ.ಎಲ್.ಅಶೋಕ್ ವಿರುದ್ಧ ಪೊಲೀಸರ ವರ್ತನೆ ಬಗ್ಗೆ ಸಂಬಂಧಿಸಿದ ವೃತ್ತ ನಿರೀಕ್ಷಕರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಘಟನೆ ಸಂಬಂಧ ಮೇಲಾಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಪೊಲೀಸರ ವರ್ತನೆ ಸಂಬಂಧದ ಆರೋಪದ ಬಗ್ಗೆ ಸಮಗ್ರ ತನಿಖೆಗೆ ಸೂಚನೆ ನೀಡಲಾಗಿದೆ. ಕೊಪ್ಪದ ಉಪನ್ಯಾಸಕರೊಬ್ಬರು ಕೊಪ್ಪ ಠಾಣಾಧಿಕಾರಿ, ಪೇದೆ ರಮೇಶ್ ವಿರುದ್ಧ ಆರೋಪಿಸಿರುವ ಆಡಿಯೋ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು.
- ಅಕ್ಷಯ್ ಮಚ್ಚೀಂದ್ರ, ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News