ಎನ್‌ಡಿಆರ್‌ಎಫ್ ಅಡಿ ನೀಡಿದ 628 ಕೋಟಿ ರೂ. ರಾಜ್ಯಕ್ಕೆ ಸಾಕಾಗಲ್ಲ, ಹೆಚ್ಚಿನ ನೆರವಿಗೆ ಮನವಿ: ಸಚಿವ ಆರ್.ಅಶೋಕ್

Update: 2020-09-09 14:17 GMT

ಬೆಂಗಳೂರು, ಸೆ. 9: ರಾಜ್ಯದಲ್ಲಿನ ಬೆಳಗಾವಿ, ಕೊಡಗು ಜಿಲ್ಲೆ ಸೇರಿದಂತೆ ವಿವಿಧೆಡೆಗಳಲ್ಲಿ ಅಧ್ಯಯನ ನಡೆಸಿರುವ ಕೇಂದ್ರ ಅಧ್ಯಯನ ತಂಡ ಮಳೆ ಮತ್ತು ನೆರೆ ಪರಿಸ್ಥಿತಿ ಹಿನ್ನೆಲೆಯಲ್ಲಿ 8,071 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದ್ದು, ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ 628 ಕೋಟಿ ರೂ. ದೊರೆಯಲಿದೆ. ಈ ಮೊತ್ತ ರಾಜ್ಯಕ್ಕೆ ಸಾಕಾಗುವುದಿಲ್ಲ. ಹೀಗಾಗಿ ಹೆಚ್ಚಿನ ಅನುದಾನ ನೀಡಲು ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಕೇಂದ್ರದ ಅಧ್ಯಯನ ತಂಡದ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಅಧ್ಯಯನ ತಂಡ ಕರ್ನಾಟಕಕ್ಕೆ ಆಗಮಿಸಿತ್ತು. ಮೂರು ತಂಡಗಳು ರಾಜ್ಯದಲ್ಲಿನ ಬೆಳಗಾವಿ, ಧಾರವಾಡ, ಕೊಡಗು, ಬಾಗಲಕೋಟೆ ಸೇರಿದಂತೆ ವಿವಿಧೆಡೆಗಳಲ್ಲಿ ಖುದ್ದು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದೆ. ಕೇಂದ್ರ ಅಧ್ಯಯನ ತಂಡಕ್ಕೆ ಜಿಲ್ಲಾಧಿಕಾರಿಗಳು ಎಲ್ಲ ಮಾಹಿತಿ ಒದಗಿಸಿದ್ದಾರೆ ಎಂದರು.

3,31,170 ಹೆಕ್ಟೇರ್ ಪ್ರದೇಶ ಕೃಷಿ ಹಾನಿ, 32,976 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆ, 10,978 ಮನೆಗಳು, 14,182 ಕಿ.ಮೀ. ರಸ್ತೆ ಹಾಗೂ 1,268 ಸೇತುವೆಗಳು, 360 ಕೆರೆಗಳಿಗೆ ಹಾನಿಯಾಗಿದೆ. 3,168 ಸರಕಾರಿ ಕಟ್ಟಡಗಳಿಗೂ ಹಾನಿಯಾಗಿದ್ದು, ಕೇಂದ್ರ ತಂಡ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದೆ. ಕೇಂದ್ರಕ್ಕೆ ವರದಿ ಸಲ್ಲಿಸಲಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಎನ್‌ಡಿಆರ್‌ಎಫ್ ಮಾರ್ಗಸೂಚಿ ಬದಲಾವಣೆ ಮಾಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಹೆಚ್ಚು ಹಣ ಬಿಡುಗಡೆಗೆ ಮನವಿ ಮಾಡಿದ್ದೇವೆ ಎಂದ ಅವರು, ಕೃಷ್ಣಾ ಜಲಾನಯನ ಪ್ರದೇಶ ಹಾಗೂ ಭೂ ಕುಸಿತದ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟಲು ಪಶ್ಚಿಮಘಟ್ಟ ಪ್ರದೇಶದಲ್ಲಿ ವಿಶೇಷ ವ್ಯವಸ್ಥೆಯೊಂದನ್ನು ರೂಪಿಸಲು ಕೇಂದ್ರ ಸರಕಾರ ಕ್ರಮ ವಹಿಸಲು ಕೋರಲಾಗಿದೆ ಎಂದು ಅಶೋಕ್ ಹೇಳಿದರು.

ಸಿಎಂ ಸಭೆ: ಮಳೆ ಮತ್ತು ಕೊರೋನ ಸೋಂಕು ನಿಯಂತ್ರಣ ಸಂಬಂಧ ಜಿಲ್ಲಾಧಿಕಾರಿಗಳ ಜೊತೆಗೆ ಮುಖ್ಯಮಂತ್ರಿ ಸಂವಾದ ನಾಳೆ(ಸೆ.10) ಸಭೆ ನಡೆಸಲಿದ್ದು, ಸೂಕ್ತ ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ. ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಏಕಾಏಕಿ ಮಳೆ ಬಂದಿದೆ. ಶಾಸಕರು, ಸಚಿವರು ಅವರವರ ಕ್ಷೇತ್ರಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಲು ಸೂಚನೆ ನೀಡಿದ್ದೇನೆ. ನಾನು ಅನೇಕ ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ಪರಿಸ್ಥಿತಿ ನಿರ್ವಹಣೆಗೆ ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News