ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಮಹಿಳೆ ಸಾವಿನ ಬಗ್ಗೆ ತನಿಖೆಗೆ ಆದೇಶ: ಡಾ.ಕೆ.ಸುಧಾಕರ್

Update: 2020-09-09 14:19 GMT

ಚಿಕ್ಕಬಳ್ಳಾಪುರ, ಸೆ.9: ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯೊಬ್ಬರು ಸಾವನ್ನಪ್ಪಿರುವ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಇಲಾಖೆಯ ಕಾರ್ಯದರ್ಶಿಗಳಿಗೆ ಆದೇಶ ನೀಡಿದ್ದೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಬುಧವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತಾನಹರಣ ಶಸ್ತ್ರಚಿಕಿತ್ಸಾ ವೇಳೆ 30 ವರ್ಷದ ಮಹಿಳೆ ಸಾವನ್ನಪ್ಪಿದ್ದು ಅತ್ಯಂತ ದುರದೃಷ್ಟಕರ. ಇದು ಸರ್ವೇ ಸಾಮಾನ್ಯ ಶಸ್ತ್ರಚಿಕಿತ್ಸೆ. ಈ ವೇಳೆ ಸಾವು ಸಂಭವಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.

ಯಾವ ಕಾರಣಕ್ಕೆ ಸಾವಾಗಿದೆ ಎಂಬುದು ತನಿಖೆಯಿಂದಷ್ಟೇ ಹೊರಬರಬೇಕು. ಈಗಾಗಲೇ ಇಲಾಖೆ ಕಾರ್ಯದರ್ಶಿಗೆ ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದೇನೆ. ಒಂದು ವೇಳೆ ಶಸ್ತ್ರಚಿಕಿತ್ಸೆಯಲ್ಲಿ ಲೋಪವಾಗಿ ವೈದ್ಯರ ನಿರ್ಲಕ್ಷ್ಯ ಕಂಡು ಬಂದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸುಧಾಕರ್ ಹೇಳಿದರು.

ಮರಣೋತ್ತರ ಪರೀಕ್ಷಾ ವರದಿ ಕೈಸೇರುವವರೆಗೂ ಯಾರ ಮೇಲೂ ಆಪಾದನೆ ಮಾಡಲಾಗದು. ಆದರೆ ಮಹಿಳೆ ಸಾವಿನ ಬಗ್ಗೆ ಕನಿಕರವಿದೆ. ಅವರ ಕುಟುಂಬಕ್ಕೆ ಆರ್ಥಿಕ ನೆರವು ಸಿಗುವ ನಿಟ್ಟಿನಲ್ಲಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತೇನೆ ಎಂದು ಸುಧಾಕರ್ ತಿಳಿಸಿದರು.

ಇಂಥ ಪ್ರಕರಣದಲ್ಲಿ ಅನಸ್ತೇಶಿಯ ಪ್ರಮಾಣ ಅಧಿಕವಾದಾಗ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು. ಇದರಲ್ಲಿ ಲೋಪವಾಗಿದೆಯೇ ಎಂಬುದು ತನಿಖೆಯಿಂದಷ್ಟೇ ದೃಢವಾಗಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಸರ್ಜನ್ ವಿರುದ್ಧ ಎಸ್‍ಪಿ ಎಫ್‍ಐಆರ್ ದಾಖಲಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ. ಮೆಡಿಕಲ್ ನಿರ್ಲಕ್ಷ್ಯದ ಪ್ರಕರಣಕ್ಕೆ ಎಫ್‍ಐಆರ್ ದಾಖಲಿಸುವಂತಿಲ್ಲ. ವೈದ್ಯ ಸಮೂಹ ಇದರಿಂದ ಗಾಬರಿ ಆಗುವ ಅವಶ್ಯಕತೆ ಇಲ್ಲ. ಈ ಪ್ರಕರಣದಲ್ಲಿ ತಪ್ಪಿಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News