ರಾಜ್ಯದಲ್ಲಿ 5 ವರ್ಷಗಳಲ್ಲಿ 56,038 ಮಂದಿ ಆತ್ಮಹತ್ಯೆ

Update: 2020-09-09 15:33 GMT
ಸಾಂದರ್ಭಿಕ ಚಿತ್ರ

ಬೆಂಗಳೂರು,ಸೆ.9: ಕರ್ನಾಟಕದಲ್ಲಿ 2015 ಮತ್ತು 2019ರ ನಡುವೆ 56,038 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ಪ್ರತಿದಿನ 31 ಮತ್ತು ಪ್ರತಿ 46 ನಿಮಿಷಗಳಿಗೆ ಒಂದು ಆತ್ಮಹತ್ಯೆ ನಡೆದಿದೆ.

 2015ರಿಂದ 2019ರವರೆಗೆ ಐದು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಅಪಘಾತ ಸಾವುಗಳು ಮತ್ತು ಆತ್ಮಹತ್ಯೆಗಳ ಕುರಿತು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (ಎನ್‌ಸಿಆರ್‌ಬಿ)ದ ವರದಿಯ ತುಲನಾತ್ಮಕ ಅಧ್ಯಯನವು ದೇಶದಲ್ಲಿ ಪ್ರತಿವರ್ಷ ಸರಾಸರಿ 1.33 ಲಕ್ಷ ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದನ್ನು ತೋರಿಸಿದೆ.

2019ನೇ ಸಾಲಿನಲ್ಲಿ ದೇಶದಲ್ಲಿ 1.39 ಲ.ಆತ್ಮಹತ್ಯೆಗಳು ಸಂಭವಿಸಿದ್ದು, ಅತ್ಯಧಿಕ ಪ್ರಕರಣಗಳು ಮಹಾರಾಷ್ಟ್ರ (18,916)ದಲ್ಲಿ ದಾಖಲಾಗಿದ್ದವು. ಇದು ಒಟ್ಟು ಪ್ರಕರಣಗಳ ಶೇ.13.6ರಷ್ಟಿತ್ತು. ನಂತರದ ಸ್ಥಾನಗಳಲ್ಲಿ ತಮಿಳುನಾಡು (13,493,ಶೇ.9.7), ಪ.ಬಂಗಾಳ (12,665,ಶೇ.9.1), ಮಧ್ಯಪ್ರದೇಶ (12,457,ಶೇ.9.1), ಮತ್ತು ಕರ್ನಾಟಕ (11,288,ಶೇ.8.1) ಇವೆ.

ದೇಶದಲ್ಲಿಯ ಒಟ್ಟು ಆತ್ಮಹತ್ಯೆ ಪ್ರಕರಣಗಳ ಶೇ.49.5ರಷ್ಟು ಘಟನೆಗಳು ಈ ಐದು ರಾಜ್ಯಗಳಲ್ಲಿಯೇ ನಡೆದಿದ್ದು, ಇತರ 24 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳು ಉಳಿದ ಆತ್ಮಹತ್ಯೆ ಪ್ರಕರಣಗಳನ್ನು ದಾಖಲಿಸಿವೆ. ಕರ್ನಾಟಕದಲ್ಲಿ ವರದಿಯಾಗಿರುವ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ರಾಜ್ಯದಲ್ಲಿ 2017ರಲ್ಲಿ ದೇಶದಲ್ಲಿಯ ಒಟ್ಟು ಪ್ರಕರಣಗಳ ಪೈಕಿ ಶೇ.9ರಷ್ಟು ಮತ್ತು 2018ರಲ್ಲಿ ಶೇ.8.6ರಷ್ಟು ಆತ್ಮಹತ್ಯೆಗಳು ನಡೆದಿದ್ದವು. ಆದರೆ ಅತ್ಯಧಿಕ ಆತ್ಮಹತ್ಯೆಗಳು ನಡೆಯುತ್ತಿರುವ ಅಗ್ರ ಮೂರು ನಗರಗಳಲ್ಲಿ ಬೆಂಗಳೂರು ಒಂದಾಗಿದೆ.

2019 ಮತ್ತು 2018ರಲ್ಲಿ ಅನುಕ್ರಮವಾಗಿ ಚೆನ್ನೈನಲ್ಲಿ 2,461 ಮತ್ತು 2,369,ದಿಲ್ಲಿಯಲ್ಲಿ 2,423 ಮತ್ತು 2,102,ಬೆಂಗಳೂರಿನಲ್ಲಿ 2,081 ಮತ್ತು 2,082 ಹಾಗೂ ಮುಂಬೈನಲ್ಲಿ 1,229 ಮತ್ತು 1,174 ಆತ್ಮಹತ್ಯೆಗಳು ನಡೆದಿದ್ದವು.

ಕರ್ನಾಟಕದಲ್ಲಿಯ ಸ್ಥೂಲ ಚಿತ್ರಣ

ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ 56,038 ಜನರಲ್ಲಿ 40,481(ಶೇ.75) ಪುರುಷರಾಗಿದ್ದರೆ, 15,551(ಶೇ.24.96) ಮಹಿಳೆಯರಾಗಿದ್ದಾರೆ.

ಅನಾರೋಗ್ಯ ಜನರ ಆತ್ಮಹತ್ಯೆಗಳಿಗೆ ಪ್ರಮುಖ ಕಾರಣಗಳಲ್ಲೊಂದು ಎಂದು ಹೇಳಲಾಗಿದೆ. ಈ ಅವಧಿಯಲ್ಲಿ ಈ ಕಾರಣದಿಂದಾಗಿಯೇ ಸುಮಾರು 13,990 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೌಟುಂಬಿಕ ಸಮಸ್ಯೆಗಳು(10,727), ದಿವಾಳಿತನ/ಸಾಲ (5,987), ವಿವಾಹ ಸಂಬಂಧಿತ ಸಮಸ್ಯೆಗಳು (2,338),ಪರೀಕ್ಷೆಗಳಲ್ಲಿ ವೈಫಲ್ಯ(1,298), ಪ್ರೇಮ ವ್ಯವಹಾರಗಳು(1,791), ನಿರುದ್ಯೋಗ (1,782) ಮತ್ತು ವೃತ್ತಿಜೀವನ ಸಮಸ್ಯೆಗಳು(1,106) ಇವು ಆತ್ಮಹತ್ಯೆಗಳಿಗೆ ಇತರ ಕಾರಣಗಳಾಗಿವೆ. ಈ ಅವಧಿಯಲ್ಲಿ ಸಂಭವಿಸಿರುವ 4,106 ಆತ್ಮಹತ್ಯೆಗಳಿಗೆ ಕಾರಣ ಗೊತ್ತಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News