‘ಮಕ್ಕಳಾಗಲಿ, ವಯಸ್ಕರಾಗಲೀ ಕಂಡವರಿಗೆ ಗುಂಡು ಹೊಡೆಯಿರಿ ಎಂದು ಆದೇಶ ನೀಡಲಾಗಿತ್ತು’

Update: 2020-09-09 15:47 GMT
ಫೈಲ್ ಚಿತ್ರ

ವಾಶಿಂಗ್ಟನ್, ಸೆ. 9: ಮ್ಯಾನ್ಮಾರ್‌ನ ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರು ವಾಸಿಸುತ್ತಿರುವ ಗ್ರಾಮಗಳಲ್ಲಿ ‘‘ನೀವು ಏನನ್ನು ನೋಡುತ್ತೀರೋ ಮತ್ತು ಏನನ್ನು ಕೇಳುತ್ತೀರೋ ಅಲ್ಲಿಗೆ ಗುಂಡು ಹೊಡೆಯಿರಿ’’ ಎಂಬ ಆದೇಶವನ್ನು ನಮ್ಮ ಮೇಲಧಿಕಾರಿಗಳು ನೀಡಿದ್ದಾರೆ ಎಂದು ಮ್ಯಾನ್ಮಾರ್ ಸೇನೆಯನ್ನು ತೊರೆದಿರುವ ಇಬ್ಬರು ಸೈನಿಕರು ಹೇಳಿದ್ದಾರೆ ಎಂದು ಮಾನವಹಕ್ಕು ಸಂಘಟನೆಯೊಂದನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.

ಬೌದ್ಧ ದೇಶದಲ್ಲಿ ಅಲ್ಪಸಂಖ್ಯಾತ ರೊಹಿಂಗ್ಯಾ ಸಮುದಾಯದ ವಿರುದ್ಧ ಸೇನೆಯ ನೇತೃತ್ವದಲ್ಲಿ ನಡೆದ ಹತ್ಯಾಕಾಂಡಗಳು, ಅತ್ಯಾಚಾರಗಳು ಮತ್ತು ಹಿಂಸಾಚಾರಗಳ ಬಗ್ಗೆ ಸೇನಾ ಸಿಬ್ಬಂದಿಯ ಮೊದಲ ಸಾರ್ವಜನಿಕ ತಪ್ಪೊಪ್ಪಿಗೆ ಇದು ಎಂಬುದಾಗಿ ಭಾವಿಸಲಾಗಿದೆ.

ಉತ್ತರ ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ತಾವು ಗ್ರಾಮಸ್ಥರನ್ನು ಕೊಂದಿರುವುದನ್ನು ಈ ಇಬ್ಬರು ಸೈನಿಕರು ಒಪ್ಪಿಕೊಂಡಿದ್ದಾರೆ ಎಂದು ಮಾನವಹಕ್ಕುಗಳ ಸಂಘಟನೆ ‘ಫೋರ್ಟಿಫೈ ರೈಟ್ಸ್’ ಹೇಳಿದೆ.

ಈ ಸೈನಿಕರು ಕಳೆದ ತಿಂಗಳು ದೇಶ ತೊರೆದಿದ್ದಾರೆ. ಅವರೀಗ ನೆದರ್‌ ಲ್ಯಾಂಡ್ಸ್‌ ನಲ್ಲಿರುವ ಅಂತರ್‌ರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಸುಪರ್ದಿಯಲ್ಲಿ ಇದ್ದಾರೆ ಎಂದು ಭಾವಿಸಲಾಗಿದೆ. ಈ ನ್ಯಾಯಾಲಯವು ಮ್ಯಾನ್ಮಾರ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ನಡೆದ ಹಿಂಸಾಚಾರದ ವಿಚಾರಣೆಯನ್ನು ನಡೆಸುತ್ತಿದೆ.

2017ರ ಆಗಸ್ಟ್‌ನಲ್ಲಿ ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಮ್ಯಾನ್ಮಾರ್ ಸೇನೆಯು ‘ಜನಾಂಗೀಯ ಶುದ್ಧೀಕರಣ’ ಕಾರ್ಯಾಚರಣೆಯನ್ನು ಆರಂಭಿಸಿದ ಬಳಿಕ ಆ ದೇಶದಿಂದ 7 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಸೇನೆ ನಡೆಸಿರುವ ಹತ್ಯಾಕಾಂಡದಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದು ಜನಾಂಗೀಯ ಹತ್ಯೆಗೆ ಪರಿಪೂರ್ಣ ಉದಾಹರಣೆ ಎಂಬುದಾಗಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ ಬಣ್ಣಿಸಿದೆ.

‘‘ನನಗೆ 2017ರಲ್ಲಿ ನೀಡಿದ ಆದೇಶ ಸ್ಪಷ್ಟವಾಗಿತ್ತು: ನಿಮಗೆ ಏನು ಕಾಣುತ್ತದೋ ಮತ್ತು ಏನು ಕೇಳುತ್ತದೋ ಅಲ್ಲಿಗೆ ಗುಂಡು ಹೊಡೆಯಿರಿ’’ ಎಂದು ವೀಡಿಯೊ ಸಂದೇಶದಲ್ಲಿ ಮ್ಯ ವಿನ್ ಟುನ್ ಎಂಬ ಸೈನಿಕ ಹೇಳಿದ್ದಾರೆ. ಅದೇ ರೀತಿ, ‘‘ಮಕ್ಕಳಾಗಲಿ, ವಯಸ್ಕರಾಗಲಿ ನಿಮಗೆ ಯಾರು ಕಾಣುತ್ತಾರೋ ಅವರಿಗೆ ಗುಂಡು ಹೊಡೆಯಿರಿ’’ ಎಂಬುದಾಗಿ ಇನ್ನೋರ್ವ ಸೈನಿಕ ಝಾವ್ ನೈಂಗ್ ಟುನ್ ಹೇಳಿದ್ದಾರೆ.

‘‘ನಾವು ಆದೇಶಗಳನ್ನು ಪಾಲಿಸಿದ್ದೇವೆ ಹಾಗೂ 30ಕ್ಕೂ ಅಧಿಕ ರೊಹಿಂಗ್ಯಾರನ್ನು ಕೊಂದಿದ್ದೇವೆ. ಅವರನ್ನು ಬಳಿಕ ಸಾಮೂಹಿಕ ಸಮಾಧಿಗಳಲ್ಲಿ ಹೂತು ಹಾಕಿದ್ದೇವೆ’’ ಎಂದು ಇಬ್ಬರೂ ಸೈನಿಕರು ಹೇಳಿದ್ದಾರೆ.

ತಾವೂ ಸೇರಿದಂತೆ ಹತ್ಯಾಕಾಂಡದಲ್ಲಿ ನೇರವಾಗಿ ಭಾಗವಹಿಸಿದ 19 ಸೈನಿಕರು ಹಾಗೂ ಆದೇಶಗಳನ್ನು ನೀಡಿದ 6 ಹಿರಿಯ ಕಮಾಂಡರ್‌ಗಳ ಹೆಸರುಗಳು ಮತ್ತು ಅವರ ಹುದ್ದೆಗಳ ವಿವರಗಳನ್ನು ಈ ಸೈನಿಕರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News