ಚುನಾವಣೆಯಲ್ಲೇ ಯಾರ ಯೋಗ್ಯತೆ ಏನೆಂದು ಬಹಿರಂಗವಾಗಿದೆ: ಡಿ.ಕೆ.ಸುರೇಶ್ ಗೆ ಡಾ.ಕೆ.ಸುಧಾಕರ್ ತಿರುಗೇಟು

Update: 2020-09-09 16:05 GMT

ಚಿಕ್ಕಬಳ್ಳಾಪುರ, ಸೆ.9: ಜನಸಾಮಾನ್ಯರು ಯಾರ ಯೋಗ್ಯತೆ ಹೇಗೆ ಎನ್ನುವುದನ್ನು ಚುನಾವಣೆಯಲ್ಲಿಯೆ ತೋರಿಸಿದ್ದಾರೆ. ಸಂಸದ ಡಿ.ಕೆ.ಸುರೇಶ್ ಅವರು ಯೋಗ್ಯತೆ ಬಗ್ಗೆ ಮಾತನಾಡುವ ಮುನ್ನ ಇದನ್ನು ನೆನಪಿಟ್ಟುಕೊಳ್ಳಲಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ.

ಬುಧವಾರ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಡ್ರಗ್ ವಿಚಾರವಾಗಿ ಡಿ.ಕೆ.ಸುರೇಶ್ ನೀಡಿರುವ ಹೇಳಿಕೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.

130 ಕೋಟಿ ಭಾರತೀಯರು ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾರ ಯೋಗ್ಯತೆ ಏನು ಎಂದು ಸಾಬೀತು ಮಾಡಿದ್ದಾರೆ.  ಉಪಚುನಾವಣೆಯಲ್ಲಿಯೂ ಯೋಗ್ಯತೆ ಬಹಿರಂಗವಾಗಿದೆ, ಇನ್ನು ಎಷ್ಟು ಬಾರಿ ಯೋಗ್ಯತೆ ಪ್ರದರ್ಶಿಸಬೇಕು. ಡಿ.ಕೆ.ಸುರೇಶ್ ಎಲ್ಲದರಲ್ಲೂ ರಾಜಕೀಯ ಮಾಡುವುದನ್ನು ಮೊದಲು ನಿಲ್ಲಿಸಲಿ. ನಮ್ಮ ಸರಕಾರ ಇಂಥ ಆರ್ಥಿಕ ಸಂಕಷ್ಟ, ನೈಸರ್ಗಿಕ ವಿಪತ್ತಿನ ನಡುವೆ ಸುಸ್ಥಿರ ಆಡಳಿತ ನೀಡುತ್ತಿರುವ ಬಗ್ಗೆ ತಾತ್ಸಾರ ಭಾವ ಯಾಕೆ? ನಿಮ್ಮ ಉದ್ದೇಶವೇನು? ಎಂದು ಅವರು ಪ್ರಶ್ನಿಸಿದರು.

ಇವರ ಪ್ರಕಾರ ಡ್ರಗ್ಸ್ ವಿಚಾರವಾಗಿ ಮೃಧು ಧೋರಣೆ ತೋರಬೇಕಿತ್ತಾ? ಯಾವ ಹಿರೋಯಿನ್‍ನನ್ನು ಬಿಡುಗಡೆ ಮಾಡಬೇಕಿತ್ತು? ಕೇವಲ ಡ್ರಗ್ ಸೇವನೆ ಮಾಡುವವರನ್ನಷ್ಟೇ ಅಲ್ಲ, ಪೆಡ್ಲರ್ ಗಳನ್ನು ನಮ್ಮ ಸರಕಾರ ಬಂಧಿಸುತ್ತಿದೆ. ಸೇವನೆ ಮಾಡುವವರು ರೋಗಿಗಳ ರೀತಿ, ಅವರಿಗೆ ಚಿಕಿತ್ಸೆ ಅಗತ್ಯ ಎಂದು ಸುಧಾಕರ್ ಹೇಳಿದರು.

ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರಕಾರ ಡ್ರಗ್ಸ್ ವಿಚಾರವಾಗಿ ಎಲ್ಲಿಯೂ ಎಡವಿಲ್ಲ. ಯಾರನ್ನೂ ರಕ್ಷಿಸುತ್ತಿಲ್ಲ. ಹಾಗಿದ್ದರೆ ಈ ಪ್ರಕರಣವನ್ನು ಪ್ರಾರಂಭದಲ್ಲಿಯೆ ಮುಚ್ಚಿ ಹಾಕಬಹುದಿತ್ತು. ಆದರೆ, ನಮ್ಮ ಸರಕಾರ ದಿಟ್ಟತನದಿಂದ ಈ ಪ್ರಕರಣ ಬೇಧಿಸುತ್ತಿದೆ. ಯುವ ಸಮೂಹದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಮುಖ್ಯ. ಈ ನಿಟ್ಟಿನಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ಸಿದ್ಧವಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News