ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಆರೋಪ: ನಟ ಯಶ್ ಪ್ರತಿಕ್ರಿಯಿಸಿದ್ದು ಹೀಗೆ...

Update: 2020-09-09 16:13 GMT

ಬೆಂಗಳೂರು, ಸೆ.9: ಡ್ರಗ್ಸ್ ಕೇವಲ ಚಿತ್ರರಂಗಕ್ಕೆ ಅಲ್ಲ, ಸಮಾಜಕ್ಕೆ ಅಂಟಿದ ಪಿಡುಗು. ಆದರೆ ಚಿತ್ರರಂಗವನ್ನೆ ಗುರಿಯಾಗಿಸುವುದು ಸರಿಯಲ್ಲ ಎಂದು ನಟ ಯಶ್ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆಯಲ್ಲಿ ಯಾರೆಲ್ಲಾ ಇದ್ದಾರೆ ಎಂದು ಹುಡುಕಿದರೆ ಹತ್ತು ವಿಭಾಗಕ್ಕೆ ಸೇರಿದವರು ಸಿಗುತ್ತಾರೆ. ಆದರೆ, ಮುಖ್ಯವಾಗಿ ಸಿಗುವುದು ಮಾತ್ರ ಕನ್ನಡ ಚಿತ್ರರಂಗ. ಚಿತ್ರರಂಗದ ಮೇಲಷ್ಟೇ ದೂಷಣೆ ಮಾಡಬೇಡಿ ಎಂದರು.

ಶಾಲೆಗೆ ಹೋಗುವ ಮಕ್ಕಳು ಡ್ರಗ್ಸ್ ತೆಗೆದುಕೊಂಡರೂ ಅದು ಸಮಸ್ಯೆಯಲ್ಲವೇ? ಜೀವನದಲ್ಲಿ ಬುದ್ಧಿ ಇರುವವರು ಇಂತಹ ದುಷ್ಕೃತ್ಯಕ್ಕೆ ಇಳಿಯುವುದಿಲ್ಲ. ಡ್ರಗ್ಸ್‍ನಿಂದ ಯುವಕರು, ಯುವತಿಯರು, ಜನರಿಗೆ ತೊಂದರೆಯಾಗುತ್ತಿದೆ ಎಂದು ಹೇಳುವುದು ಸೂಕ್ತ. ಈ ದಂಧೆ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡೋಣ ಎಂದರು.

ನಾನು ಸಮಾಜದ ಪ್ರಜೆ. ನಾವೆಲ್ಲರೂ ಇಂತಹ ದುಶ್ಚಟಗಳ ವಿರುದ್ಧ ಬಾಲ್ಯದಿಂದಲೇ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಈ ದೇಹ ಮತ್ತು ಜೀವನ ನಮ್ಮದಲ್ಲ, ನಮ್ಮಪ್ಪ, ಅಮ್ಮ ಕೊಟ್ಟಿರುವ ಭಿಕ್ಷೆ. ನನಗೂ ಮಕ್ಕಳಿದ್ದಾರೆ. ಮಕ್ಕಳು ಕೆಳಗೆ ಬಿದ್ದರೆ ಏನಪ್ಪ ಎಂದು ಯೋಚಿಸಿ ತಂದೆ–ತಾಯಿ ಸಾಕಿರುತ್ತಾರೆ. ತಮಗೆ ಇಲ್ಲದಿದ್ದರೂ ಮಕ್ಕಳ ಬಗ್ಗೆ ಕನಸುಗಳನ್ನು ಕಾಣುತ್ತಿರುತ್ತಾರೆ. ಯುವಕರು ಈ ದರಿದ್ರ ಡ್ರಗ್ಸ್ ತೆಗೆದುಕೊಂಡು ಹಾಳಾಗಬಾರದು. ಅಪ್ಪ, ಅಮ್ಮನಿಗೆ ಗೌರವ ತರುವ ಕೆಲಸ ಮಾಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News