ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ: ಪ್ರಮುಖ ಆರೋಪಿಗಳ ಬಂಧನಕ್ಕೆ ಶೋಧ

Update: 2020-09-09 16:31 GMT

ಬೆಂಗಳೂರು, ಸೆ.9: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಒಂದೆಡೆ ನಟಿಯರಾದ ರಾಗಿಣಿ ಹಾಗೂ ಸಂಜನಾ ವಿಚಾರಣೆಯನ್ನು ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು, ಮತ್ತೊಂದೆಡೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳ ಬಂಧನಕ್ಕೆ ಶೋಧಕಾರ್ಯ ಮುಂದುವರಿಸಿದ್ದಾರೆ.

ಇಲ್ಲಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‍ಐಆರ್ ನ 12 ಜನ ಆರೋಪಿಗಳ ಪೈಕಿ, ಆರು ಮಂದಿ ಮಾತ್ರ ಸಿಸಿಬಿ ವಶದಲ್ಲಿದ್ದರೆ, ಉಳಿದವರು ತಲೆಮರೆಸಿಕೊಂಡಿದ್ದಾರೆ. ಇವರ ಪತ್ತೆಗೆ ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ವಿಚಾರಣೆಗೊಳಗಾಗಿರುವ ಸಂಜನಾ ಮತ್ತು ರಾಗಿಣಿ ದ್ವಿವೇದಿ ನಟಿಯರು ಚಿತ್ರರಂಗದ ಪ್ರಮುಖ ನಟಿಯೊಬ್ಬರು ಸೇರಿದಂತೆ ಪ್ರಭಾವಿ ರಾಜಕಾರಣಿಗಳ ಮತ್ತು ಅವರ ಪುತ್ರರ ಹೆಸರುಗಳನ್ನು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.

ಆರೋಗ್ಯ ತಪಾಸಣೆ: ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಆಪ್ತ ವಿರೇನ್ ಖನ್ನಾ, ರವಿಶಂಕರ್ ಹಾಗೂ ನಟಿ ಸಂಜನಾ ಆಪ್ತ ಬಂಧಿತ ರಾಹುಲ್, ನಿಯಾಝ್, ಲೂಮ್ ಪೆಪ್ಪರ್ ಸಾಂಬಾರನ್ನು ವೈದ್ಯಕೀಯ ತಪಾಸಣೆಗೆಂದು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಸಿಸಿಬಿ ಅಧಿಕಾರಿಗಳು ಬಂಧಿತರನ್ನು ಬುಧವಾರ ಮಧ್ಯಾಹ್ನದವರೆಗೆ ತನಿಖೆ ನಡೆಸಿ, ತದನಂತರ ಆರೋಗ್ಯ ತಪಾಸಣೆಗಾಗಿ ಕರೆದುಕೊಂಡು ಹೋದರು. ಸದ್ಯ ಸಿಸಿಬಿ ಕಸ್ಟಡಿಯಲ್ಲಿದ್ದು, ತಪಾಸಣೆ ನಂತರ ಮತ್ತೆ ಇವರ ವಿಚಾರಣೆಗಾಗಿ ಕರೆದೊಯ್ಯಲಾಗುತ್ತದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News