ರಾಗಿಣಿ, ಸಂಜನಾ ಹೇಳಿರುವ ಪ್ರಮುಖರ ಹೆಸರನ್ನು ನ್ಯಾಯಲಯಕ್ಕೆ ಸಲ್ಲಿಸಿ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

Update: 2020-09-09 18:03 GMT

ಮೈಸೂರು,ಸೆ.9: ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಅವರು ವಿಚಾರಣೆಯಲ್ಲಿ ಹೇಳಿರುವ ಪ್ರಮುಖ ಮುಖಂಡರುಗಳ ಹೆಸರನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ಒತ್ತಾಯಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡ್ರಗ್ಸ್ ದಂಧೆ ಪ್ರಕರಣ ದೊಡ್ಡ ಜಾಲವಾಗಿದ್ದು, ದೇಶಾದ್ಯಂತ ಇದರ ಲಿಂಕ್ ಇದೆ. ಬಿಜೆಪಿಯವರು ಇದರ ಲಾಭ ಪಡೆಯಲು ಹೋಗಿ, ಅವರೇ ಡ್ರಗ್ಸ್ ಬಲೆಯಲ್ಲಿ ಸಿಲುಕಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಡ್ರಗ್ಸ್ ಪ್ರಕರಣವನ್ನು ಹಿಡಿದುಕೊಂಡಿತು. ಡ್ರಗ್ಸ್ ದಂಧೆ ಪ್ರಕರಣದ ಬಗ್ಗೆ ಹೈಕೋರ್ಟ್ ಸೂಚನೆ ಮೇರೆಗೆ ತನಿಖೆ ನಡೆಸಬೇಕು ಎಂದು ಹೇಳಿದರು.

ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ವೈ ಪ್ಲಸ್ ಭದ್ರತೆ ನೀಡಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ನಟಿ ಕಂಗನಾ ಬಿಜೆಪಿಯ ಅಂಬಾಸಿಡರ್ ಆಗಿದ್ದು, ಮುಂಬೈನಲ್ಲಿ ಸಂಯುಕ್ತ ಸರ್ಕಾರವನ್ನು ಟೀಕಿಸಲು ಅವರನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಅವರಿಗೆಲ್ಲಾ ಭದ್ರತೆ ಕೊಡುತ್ತಿದ್ದು, ಇದು ಈ ದೇಶದ ದುರಂತ ಎಂದು ಹೇಳಿದರು.

ಬಾಯಿಗೆ ಬಂದಂತೆ ಮಾತನಾಡುವವರಿಗೆ ವೈ ಶ್ರೇಣಿಯ ಭದ್ರತೆ ಕೊಡುತ್ತಾರೆ. ಆದರೆ ದೇಶಕ್ಕಾಗಿ ಬಲಿದಾನ ನೀಡಿದ ಕುಟುಂಬಕ್ಕೆ ಸೇರಿರುವ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಅವರುಗಳಿಗೆ  ನೀಡಿದ್ದ ಝಡ್ ಪ್ಲಸ್ ಭದ್ರತೆಯನ್ನು ವಾಪಸ್ ಪಡೆದು ಕೇವಲ ಪೊಲೀಸ್ ಭದ್ರತೆ ನೀಡಿದ್ದಾರೆ. ದೇಶದ ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿ ಅಮಿತ್ ಷಾ ನಂತರ ನಟಿ ಕಂಗನಾ ರಣಾವತ್‍ಗೆ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದರು.

ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ ಮಾತನಾಡಿ, ಇತ್ತೀಚೆಗೆ  ಬಹುತೇಕ ಎಲ್ಲಾ ಗಂಭೀರ ಪ್ರಕರಣಗಳನ್ನು ಹಳ್ಳ ಹಿಡಿಸಲಾಗುತ್ತಿದೆ. ಅದೇ ರೀತಿ ಡ್ರಗ್ಸ್ ದಂಧೆ ಪ್ರಕರಣದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಈ ಮೂಲಕ ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದೆ. ಆದರೆ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮೊದಲು ಕಾಂಗ್ರೆಸ್ ಮುಖಂಡರುಗಳ ಮೇಲೆ ಎಫ್ಐಆರ್ ಹಾಕಿರುವುದರ ವಿರುದ್ಧ ಕಾಂಗ್ರೆಸ್ ಮುಖಂಡರು ಸಭೆ ಸೇರಿ ಒಕ್ಕೊರಲಿನ ಹೋರಾಟ ಮಾಡುವುದಾಗಿ ಹೇಳಿದರು. ಎಫ್ಐಆರ್ ಪ್ರಕರಣದ ಸಂಬಂಧ ಕಾನೂನು ಹೋರಾಟಕ್ಕೆ ಸಿದ್ದ ಎಂದು ಹೇಳಿದರು. ಮುಖ್ಯಮಂತ್ರಿ ಪುತ್ರ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿರುವುದರಿಂದ ಉದ್ದೇಶಪೂರ್ವಕವಾಗಿಯೇ ನಮ್ಮ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News