ಪ್ರಧಾನಿಯ 'ಮನ್ ಕಿ ಬಾತ್' ನಲ್ಲಿ ಉಲ್ಲೇಖಗೊಂಡ ನಂತರ ಇನ್ನಷ್ಟು ಖ್ಯಾತಿ ಪಡೆದ ಮುಧೋಳ ನಾಯಿಗಳು

Update: 2020-09-10 06:16 GMT

ಬಾಗಲಕೋಟೆ : ತಮ್ಮ ಅಪ್ರತಿಮ ಚಾಕಚಕ್ಯತೆಗೆ ಅದಾಗಲೇ ಹೆಸರುವಾಸಿಯಾಗಿರುವ ದೇಶೀ ತಳಿಯ ಮುಧೋಳ ನಾಯಿಗಳನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಉಲ್ಲೇಖಿಸಿರುವುದು ಈ ಮುಧೋಳ ನಾಯಿಗಳ ಕಿರೀಟಕ್ಕೆ ಇನ್ನೊಂದು ಗರಿಯನ್ನು ಸೇರಿಸಿದಂತಾಗಿದೆ.

ಈ ದೇಸಿ ತಳಿಯ ನಾಯಿಗಳ ಸೇವೆಯನ್ನು ಶ್ಲಾಘಿಸಿದ ಪ್ರಧಾನಿ, ವಿದೇಶಿ ತಳಿಯ ನಾಯಿಗಳನ್ನು ಸಾಕುವ ಬದಲು ಮುಧೋಳ ನಾಯಿಗಳನ್ನೇ ಸಾಕುವಂತೆ ಸಲಹೆಯನ್ನೂ ನೀಡಿದ್ದಾರೆ.

ಗಂಟೆಗೆ 50 ಕಿಮೀ ವೇಗದಲ್ಲಿ ಓಡಬಲ್ಲ ಹಾಗೂ 3 ಕಿಮೀ ದೂರದಿಂದಲೇ ಒಂದು ವಸ್ತುವಿನ ವಾಸನೆ ಗ್ರಹಿಸಬಲ್ಲ ಶಕ್ತಿಯುಳ್ಳ ಈ ಮುಧೋಳ ತಳಿಯ ನಾಯಿಗಳ ಸೇವೆಯನ್ನು ಪಡೆಯುವ ನಿಟ್ಟಿನಲ್ಲಿ ಭಾರತೀಯ ಸೇನೆ ಅವುಗಳಿಗೆ ತರಬೇತಿ ನೀಡುತ್ತಿದೆ.

ಮುಧೋಳ ನಾಯಿಗಳ ಇತಿಹಾಸವೂ  ಕುತೂಹಲಕಾರಿಯಾಗಿದ್ದು ಮರಾಠ ಅರಸ ಛತ್ರಪತಿ ಶಿವಾಜಿ ಈ ನಾಯಿಗಳನ್ನು ಯುದ್ಧದ ಸಂದರ್ಭ  ಬಳಸುತ್ತಿದ್ದರೆಂದು ಹೇಳಲಾಗುತ್ತಿದೆ. ಬ್ರಿಟಿಷ್ ಆಳ್ವಿಕೆ ಸಂದರ್ಭ ಬಾಂಬೆ ಪ್ರೆಸಿಡೆನ್ಸಿ ಭಾಗವಾಗಿದ್ದ ರಾಜ ಮನೆತನದ ಆಡಳಿತದಲ್ಲಿದ್ದ ಮುಧೋಳ ರಾಜ್ಯದ ಹೆಸರನ್ನೇ ಈ ನಾಯಿಗಳಿಗೆ ನೀಡಲಾಗಿತ್ತು. ಈ ಮುಧೋಳದ ಕೊನೆಯ ಅರಸ ಮಾಲೋಜಿರಾವ್ ಘೋರ್ಪಡೆ ಅವರು ಈ ಜಾತಿಯ ನಾಯಿಯ ಎರಡು ಮರಿಗಳನ್ನು ಇಂಗ್ಲೆಂಡ್‍ಗೆ ಭೇಟಿ ನೀಡಿದ್ದ ಸಂದರ್ಭ 5ನೇ ಜಾರ್ಜ್ ಅವರಿಗೆ ನೀಡಿದ್ದರು ಹಾಗೂ ಅವರೇ ಈ ನಾಯಿಗಳಿಗೆ ಮುಧೋಳ ನಾಯಿಗಳೆಂಬ ಹೆಸರನ್ನಿಟ್ಟಿದ್ದರು.

ಬಾಗಲಕೋಟೆಯ ಕೆನೈನ್ ರಿಸರ್ಚ್ ಆ್ಯಂಡ್ ಇನ್ಫಾರ್ಮೇಶನ್ ಸೆಂಟರಿನಲ್ಲಿ ಮುಧೋಳ ಜಾತಿಯ ನಾಯಿಗಳನ್ನು ಬೆಳೆಸಲಾಗುತ್ತಿದೆ. ಭಾರತೀಯ ಸೇನೆ  ಸ್ಫೋಟಕಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ  ಇವುಗಳ ಸೇವೆ ಪಡೆಯುತ್ತಿದೆ. ಉತ್ತರ ಪ್ರದೇಶದ ಮೀರತ್ ನಲ್ಲಿರುವ ರಿಮೌಂಟ್ ವೆಟರ್ನರಿ ಕಾರ್ಪ್ ಇಲ್ಲಿ ಈ ನಾಯಿಗಳಿಗೆ ಒಂಬತ್ತು ತಿಂಗಳು ಸತತ ತರಬೇತಿ ನೀಡಲಾಗಿದೆ. ಇವುಗಳು ಕಾಶ್ಮೀರ ಮತ್ತ ರಾಜಸ್ಥಾನದ ಗಡಿಗಳಲ್ಲೂ ಸೇವೆ ಸಲ್ಲಿಸುತ್ತಿವೆ.

ಆಂಧ್ರ ಪ್ರದೇಶ ಮತ್ತು ರಾಜಸ್ಥಾನದ ಪೊಲೀಸ್ ಇಲಾಖೆಗಳೂ ಈ ಮುಧೋಳ ನಾಯಿಗಳ ಸೇವೆ ಪಡೆಯುತ್ತಿವೆ. ದೇಶದ ಎನ್‍ಎಸ್‍ಜಿ ಕೂಡ ಇವುಗಳ ಸೇವೆ ಪಡೆಯಲು ಆಸಕ್ತವಾಗಿದ್ದು ಸ್ಥಳೀಯ ಗ್ರಾಮಸ್ಥರು ಈ ನಾಯಿಗಳನ್ನು ಸಾಕಿ ಅವುಗಳ ಮರಿಗಳನ್ನು ಹೆಚ್ಚುವರಿ ಆದಾಯ ಗಳಿಸುವ ಉದ್ದೇಶದಿಂದ ಮಾರಾಟ ಮಾಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News