ಡ್ರಗ್ಸ್ ಮಾಫಿಯಾದ ಹಿಂದೆ ರಾಜ್ಯದ ಎಲ್ಲ ಪಕ್ಷಗಳ ರಾಜಕಾರಣಿಗಳು ಇದ್ದಾರೆ: ಪ್ರಮೋದ್ ಮುತಾಲಿಕ್ ಆರೋಪ

Update: 2020-09-10 09:24 GMT

ಮೈಸೂರು : ಡ್ರಗ್ಸ್ ಮಾಫಿಯಾದ ಹಿಂದೆ ರಾಜ್ಯದ ಎಲ್ಲ ಪಕ್ಷಗಳ ರಾಜಕಾರಣಿಗಳು ಇದ್ದಾರೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಡ್ರಗ್ಸ್ ಜಾಲ ಬಹಳ ದೊಡ್ಡದಾಗಿ ಬೆಳೆದು ಬಿಟ್ಟಿದೆ ಇದನ್ನು ಬುಡಸಮೇತ ಕೀಳುತ್ತೇವೆ ಎಂದು ಹೇಳುತ್ತಿರುವ ಬಿಜೆಪಿ ನಾಯಕರ ಹೇಳಿಕೆ ಬರೀ ಬುರುಡೆ, ಈ ಮಾಫಿಯಾದ ಹಿಂದೆ ರಾಜ್ಯದ ಎಲ್ಲಾ ಪಕ್ಷಗಳ ಮುಖಂಡರುಗಳು ಭಾಗಿಯಾಗಿದ್ದಾರೆ ಎಂದು ಹೇಳಿದರು.

ಡ್ರಗ್ಸ್ ದಂಧೆ ಬಗ್ಗೆ 2009 ರಲ್ಲೇ ನಾವು ಹೇಳಿದ್ದೆವು ಆಗಲೂ ಬಿಜೆಪಿ ಸರಕಾರ ಅಧಿಕಾರದಲ್ಲಿತ್ತು. ಡ್ರಗ್ಸ್ ಕಂಟ್ರೋಲ್ ಮಾಡುವ ಬದಲು ನನ್ನನ್ನು ಟಾರ್ಗೆಟ್ ಮಾಡಲಾಯಿತು. ಪರಣಾಮ 10 ದಿನ ಜೈಲಿನಲ್ಲಿ ನಾನು ಇರಬೇಕಾಯಿತು. ಆಗಲೇ ಬಿಜೆಪಿ ಸರ್ಕಾರ ಎಚ್ಚೆತ್ತು ಕೊಂಡಿದ್ದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಮಾಫಿಯಾ ಬೆಳೆಯುತ್ತಿರಲಿಲ್ಲ ಎಂದರು. 

ಬೆಂಗಳೂರಿನ ಬಹುತೇಖ ಕಾರ್ಪೊರೇಟರ್ ಗಳು ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾರೆ ಅವರನ್ನು ತಡೆಗಟ್ಟುಲು ಬಿಡದೆ ಪೊಲೀಸರ ಕೈಯನ್ನು ಕಟ್ಟಿ ಹಾಕಲಾಗಿದೆ. ಎಲ್ಲೆಲ್ಲಿ ಡ್ರಗ್ಸ್ ನಡೆಯುತ್ತಿದೆ ಎಂದು ಪೊಲೀಸರಿಗೆ ಗೊತ್ತಿದೆ ಎಂದು ಹೇಳಿದರು.

ಡ್ರಗ್ಸ್ ಮಾಫಿಯಾಕ್ಕೆ ಶೇ40% ಯುವ ಸಮೂಹ ಬಲಿಯಾಗುತ್ತಿದೆ. ಇದರಲ್ಲಿ ಬಹುತೇಖರು ಉದ್ಯಮಿಗಳು, ಹಣವಂತರು, ಅಧಿಕಾರಿಗಳು ಮತ್ತು ರಾಜಕಾರಣಿಗಳ ಮಕ್ಕಳೆ, ಅವರು ಆತ್ಮ ಸಾಕ್ಷಿ ಮುಟ್ಟಿ ಹೇಳಲಿ ನಮ್ಮದೇನು ಪಾತ್ರ ಇಲ್ಲ ಎಂದು ಸವಾಲು ಹಾಕಿದರು.

ಡ್ರಗ್ಸ್ ಜಾಲದಲ್ಲಿ ಬಂಧನಕ್ಕೊಳಗಾಗಿರುವ ರಾಗಿಣಿ ಮತ್ತು ಸಂಜನಾ ಇನ್ನೇನು ಸ್ವಲ್ಪ ದಿನಗಳಲ್ಲೇ ಜಾಮೀನಿನ ಮೇಲೆ ಹೊರಬರಲಿದ್ದಾರೆ. ಇನ್ನೆರಡು ದಿನಗಳಲ್ಲಿ ಡ್ರಗ್ಸ್ ಮಾಫಿಯಾದ ಸುದ್ದಿಗಳೇ ನಿಂತುಹೋಗಲಿವೆ ಎಂದು ಹೇಳಿದರು.

ಸರ್ಕಾರಕ್ಕೆ ನಿಜವಾಗಲು ನಮ್ಮ ದೇಶ, ನಮ್ಮ ಯುವಕರು ಉಳಿಯಬೇಕು ಎಂದಾದರೆ ಕೂಡಲೇ ಇದರ ಹಿಂದೆ ಇರುವವರನ್ನು ಬಂಧಿಸಲಿ ಎಂದ ಅವರು, ಡ್ರಗ್ಸ್ ಮಾಫಿಯಾ ವಿರುದ್ಧ ನಾವು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಜಯ್ ಮಲ್ಲಪ್ಪ,  ಹರೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News