2 ವರ್ಷಗಳಲ್ಲಿ 10 ಲಕ್ಷ ಮನೆಗಳ ನಿರ್ಮಾಣ ಸರಕಾರದ ಗುರಿ: ವಸತಿ ಸಚಿವ ವಿ.ಸೋಮಣ್ಣ

Update: 2020-09-11 18:08 GMT

ಚಿಕ್ಕಮಗಳೂರು, ಸೆ.11: ರಾಜ್ಯ ಸರಕಾರ ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 10 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಿದೆ. ಸಂಬಂಧಿಸಿದ ಇಲಾಖಾಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಮನೆಗಳ ಹಂಚಿಕೆಯನ್ನು ಪಾರದರ್ಶಕವಾಗಿ ಮಾಡಬೇಕು. ಶ್ರೀಮಂತರಿಗೆ, ಅನರ್ಹರಿಗೆ ಆಶ್ರಯ ಮನೆಗಳನ್ನು ಹಂಚಿಕೆ ಮಾಡುತ್ತಿರುವ ಬಗ್ಗೆ ದೂರುಗಳಿದ್ದು, ಇಂತಹ ದೂರುಗಳು ಮತ್ತೆ ಕೇಳಿ ಬರಬಾರದು ಎಂದು ಎಂದು ವಸತಿ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಂಭಾಗಣದಲ್ಲಿ ವಸತಿ ಯೋಜನೆಗಳು ಅನುಷ್ಠಾನ ಮತ್ತು ಅಭಿವೃದ್ಧಿ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಬಡವರು ಹತ್ತಾರು ತಲೆಮಾರುಗಳಿಂದ ಮನೆ ಇಲ್ಲದೇ ಕಷ್ಟದ ಬದುಕು ನಡೆಸುತ್ತಿದ್ದಾರೆ. ಅಂಥವರನ್ನು ಗುರುತಿಸಿ ಸೂರು ಕಲ್ಪಿಸಿಕೊಡಲಾಗುವುದು ಸರಕಾರ ಕರ್ತವ್ಯವಾಗಿದೆ. ರಾಜ್ಯ ಸರಕಾರ ಮುಂದಿನ ಎರಡು ವರ್ಷಗಳ ಅವಧಿಗೆ 10 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಿದ್ದು, ಸರಕಾರದ ವಸತಿ ಯೋಜನೆಗಳು ಅರ್ಹರಿಗೆ ತಲುಪಬೇಕು ಎಂದರು.

ರಾಜ್ಯದಲ್ಲಿ 2,700 ಕೊಳಚೆ ಪ್ರದೇಶಗಳಿದ್ದು, ಈ ಪೈಕಿ 1800 ಕೊಳಚೆ ಪ್ರದೇಶಗಳ ನಿವಾಸಿಗಳಿಗೆ 6,700 ಎಕರೆ ಪ್ರದೇಶದಲ್ಲಿ ನಿವೇಶನ ನಿರ್ಮಾಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ 69 ಸಾವಿರ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ಪ್ರತೀ ಪಂಚಾಯತ್ ಗೆ 1,500 ಮನೆಗಳನ್ನು ನೀಡಲಾಗುವುದು ಎಂದ ಅವರು, ವಿವಿಧ ಆಶ್ರಯ ಯೋಜನೆಗಳಡಿಯಲ್ಲಿ ಮಂಜೂರಾಗುವ ಈ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಗುರಿ ಸಂಬಂಧಿಸಿದ ಇಲಾಖಾಧಿಕಾರಿಗಳ ಕರ್ತವ್ಯ ಎಂದರು.

ಈ ಹಿಂದಿನ ಸರಕಾರಗಳು ನೀಡಿರುವ ಮನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು 48 ಸಾವಿರ ಕೋಟಿ ರೂ. ಬೇಕು. ರಾಜಕಾರಣದ ಹಿನ್ನೆಲೆಯಲ್ಲಿ ಇದನ್ನು ನಿರ್ಲಕ್ಷ್ಯ ಮಾಡದೇ, ಇದಕ್ಕೆ ಬಜೆಟ್ ನಲ್ಲಿ ಅನುಮೋದನೆ ಪಡೆದುಕೊಳ್ಳದೆ ಮನೆಗಳನ್ನು ನೀಡಲಾಗಿದೆ. ಆ ಮನೆಗಳ ನಿರ್ಮಾಣ ಕಾರ್ಯವನ್ನು ಸರಕಾರ ಕೈಗೆತ್ತಿಕೊಂಡಿದ್ದು, ರಾಜ್ಯ ಸರಕಾರ  ಕೋವಿಡ್-19 ಆರ್ಥಿಕ ಸಂಕಷ್ಟದ ಕಾಲದಲ್ಲೂ 20 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಅಧಿಕಾರಿಗಳು ಕ್ರೀಯಾಶೀಲರಾಗಿ ಕೆಲಸ ಮಾಡುವ ಮೂಲಕ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು ಎಂದರು.

ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, 10 ಲಕ್ಷ ಮನೆಗಳನ್ನು ಎರಡು ವರ್ಷದಲ್ಲಿ ಬಡವರಿಗೆ ಕಟ್ಟಿಕೊಡಲು ಸಾಕಷ್ಟು ನ್ಯೂನತೆಗಳಿವೆ. ನ್ಯೂನತೆಗಳನ್ನು ಇಟ್ಟುಕೊಂಡು 10 ಲಕ್ಷ ಅಲ್ಲ, 2 ಲಕ್ಷ ಮನೆಗಳನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ನ್ಯೂನತೆಗಳನ್ನು ಸರಿಪಡಿಸುವಂತೆ ಸಚಿವ ಸೋಮಣ್ಣ ಅವರಲ್ಲಿ ಮನವಿ ಮಾಡಿದರು.

ಆಶ್ರಯ ಯೋಜನೆಯಡಿಯಲ್ಲಿ ಫಲಾನುಭವಿಗಳು ಮನೆ ಪಡೆದುಕೊಳ್ಳಲು 30 ಸಾವಿರ ರೂ., ಆದಾಯ ದೃಢೀಕರಣ ಪ್ರಮಾಣ ಪತ್ರ ಸಲ್ಲಿಸಬೇಕು. ಕೂಲಿ ಕೆಲಸ ಮಾಡುವವರ ಆದಾಯವು ಕೂಡ ಇಂದು ವಾರ್ಷಿಕವಾಗಿ 70-80 ಸಾವಿರ ದಾಟುತ್ತದೆ. ಇಂತಹ ಅವೈಜ್ಞಾನಿಕವಾದ ನಿಯಮಗಳಿಂದ ಬಡವರಿಗೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಈ ನಿಯಮವನ್ನು ತೆಗೆದು ಹಾಕಿ ಹಿಂದಿನಂತೆ ಬಿಪಿಎಲ್ ಕಾರ್ಡ್ ಆಧಾರದ ಮೇಲೆ ಮನೆಗಳನ್ನು ಫಲಾನುಭವಿಗಳಿಗೆ ನೀಡಬೇಕೆಂದು ತಿಳಿಸಿದರು.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಸೊಪ್ಪಿನ ಬೆಟ್ಟವನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಅನೇಕ ಭಾಗದಲ್ಲಿ ಡೀಮ್ ಫಾರೇಸ್ಟ್ ಮಾಡಲಾಗಿದೆ. ಇದರಿಂದ ಫಲಾನುಭವಿಗಳಿಗೆ ನಿವೇಶನ ನೀಡಲು ಸಾಧ್ಯವಾಗುತ್ತಿಲ್ಲ, ಅರಣ್ಯ ಸಚಿವರು ಮತ್ತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಬೇಕು. ಪ್ರತೀ ಗ್ರಾಮದಲ್ಲಿ 5 ರಿಂದ 10 ಎಕರೆ ಗ್ರಾಮೀಣ ಪ್ರದೇಶದಲ್ಲಿ ಮೀಸಲಿಟ್ಟರೆ ಮಾತ್ರ ನಿವೇಶನ ರಹಿತರಿಗೆ ನಿವೇಶನ ನೀಡಲು ಸಾಧ್ಯವಾಗಲಿದೆ ಎಂದರು.

ಸಚಿವ ಸಿ.ಟಿ.ರವಿ ಮಾತನಾಡಿ, ಗ್ರಾಮ ಠಾಣಾ ಜಾಗ ಬಹಳಷ್ಟು ಒತ್ತುವರಿಯಾಗಿದೆ. ನೂರಾರು ಅಕ್ರಮ ಖಾತೆಗಳಾಗಿವೆ. ಇಂತಹ ಪ್ರಕರಣವನ್ನು ಗುರುತಿಸಿ ಸರ್ವೇ ಕಾರ್ಯ ನಡೆಸಿ ಪಟ್ಟಿಯನ್ನು ತಯಾರಿಸುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಒತ್ತುವರಿ ಗ್ರಾಮಠಾಣಾ ಜಾಗವನ್ನು ಗುರುತಿಸಿ ಆ ಜಾಗವನ್ನು ನಿವೇಶನಕ್ಕೆ ಪರಿವರ್ತನೆ ಮಾಡಿ ನಿವೇಶನ ರಹಿತರಿಗೆ ಹಂಚಿಕೆ ಮಾಡಿದಲ್ಲಿ ನಿವೇಶನ ಸಮಸ್ಯೆ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ ಎಂದರು.

ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಕುದುರೆಮುಖ ಪುನರ್ವಸತಿಗೆ 30x40 ನಿವೇಶನ ನೀಡಲಾಗಿದೆ. ಈ ನಿವೇಶನಗಳಿಂದ ಅವರ ಅಗತ್ಯಕ್ಕೆ ಸಾಕಾಗುವುದಿಲ್ಲ, 40x60 ನಿವೇಶನಗಳನ್ನು ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.

ಸಚಿವ ವಿ.ಸೋಮಣ್ಣ ಮಾತನಾಡಿ, ಆಶ್ರಯ ಫಲಾನುಭವಿಗೆ 30 ಸಾವಿರ ರೂ. ಆದಾಯ ಪ್ರಮಾಣ ಪತ್ರ ಸಲ್ಲಿಕೆ ಅವೈಜ್ಞಾನಿಕವಾಗಿದ್ದು, ಈ ಸಂಬಂಧ ಚರ್ಚೆ ನಡೆಸಿ ಬದಲಾವಣೆಗೆ ತೀರ್ಮಾನ ಕೈಗೊಳ್ಳಲಾಗುವುದು. ಕುದುರೆಮುಖ ಪುನರ್ವಸತಿ ನಿವೇಶನ ಅಳತೆ ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ವಸತಿ ಯೋಜನೆಯಡಿಯಲ್ಲಿ ಅನೇಕ ಯೋಜನೆಗಳಿವೆ. ಎಲ್ಲರಿಗೂ ಸೂರು ಕಲ್ಪಸಿಕೊಡಬೇಕು ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಚಿಂತನೆಯಾಗಿದೆ. ಈ ಹಿನ್ನೆಲೆಯಲ್ಲಿ ಬಡವರಿಗೆ ಮತ್ತು ಮೂಲಭೂತ ಸೌಲಭ್ಯ ಗಳನ್ನು ಕಲ್ಪಿಸಿಕೊಡಲು ಅಧಿಕಾರಿಗಳು ಶ್ರಮವಹಿಸಬೇಕು ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಅನುದಾನ ಕೊರತೆಯಿಂದ ಕೆಲವು ಮನೆಗಳ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಕೆಲವು ಅರ್ಧದಲ್ಲೇ ಸ್ಥಗಿತಗೊಂಡಿದೆ. ಕೆಲವು ಮನೆಗಳು ನಿರ್ಮಾಣದ ಹಂತದಲ್ಲಿವೆ ಎಂದರು.

ಸಚಿವ ಸೋಮಣ್ಣ ಮಾತನಾಡಿ, ಬಾಕಿ ಇರುವ ಮನೆಗಳನ್ನು ಅರ್ಹರಿಗೆ ಹಂಚಿಕೆ ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಿದರೇ ಅನುದಾನ ಬಿಡುಗಡೆ ಮಾಡಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಕಳೆದ ವರ್ಷ ಸಂಭವಿಸಿದ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳನ್ನು ಎ, ಬಿ, ಸಿ ಎಂದು ವರ್ಗಿಕರಣ ಮಾಡಿದ್ದು, ಸಿ ಕೆಟಗೆರಿಯ ಮನೆಗಳಿಗೆ ತಲಾ 25 ಸಾವಿರದಂತೆ ಅನುದಾನ ಒಟ್ಟು 7 ಕೋಟಿ 70 ಲಕ್ಷ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಎ ಕೆಟಗೆರಿ ಮನೆಗಳಿಗೆ ತಲಾ 1 ಲಕ್ಷದಂತೆ ಈಗಾಗಲೇ ಹಣ ಜಮಾ ಮಾಡಲಾಗಿದ್ದು, ಉಳಿದ ಹಣವನ್ನು ಹಂತ ಹಂತವಾಗಿ ಜಮಾ ಮಾಡಲಾಗುವುದು ಎಂದರು.

ಅತಿವೃಷ್ಟಿಯಿಂದ ಹಾನಿಗೊಳ ಪ್ರದೇಶದಲ್ಲಿ ಕೆಲವು ಕುಟುಂಬಗಳನ್ನು ಸ್ಥಳಾಂತರ ಮಾಡಬೇಕಿದ್ದು, ಕೆಲವರು ಸ್ಥಳಾಂತರಕ್ಕೆ ಒಪ್ಪದೇ ಅಫಿಡವಿಟ್ ನೀಡಿದ್ದಾರೆ. ಸ್ಥಳಾಂತರಕ್ಕೆ ಒಪ್ಪಿದವರಿಗೆ ಸ್ಥಳಾಂತರಕ್ಕೆ ಕ್ರಮವಹಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಉಪಾಧ್ಯಕ್ಷ ಸೋಮಶೇಖರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News