ಕಾರ್ಪೊರೇಟ್ ಕೈಗೆ ಕೃಷಿ: ಕೇಂದ್ರದ ಅಧ್ಯಾದೇಶಗಳ ವಿರುದ್ಧ 3 ರಾಜ್ಯಗಳ ರೈತರಿಂದ ಪ್ರತಿಭಟನೆ

Update: 2020-09-12 16:15 GMT

ಹೊಸದಿಲ್ಲಿ, ಸೆ. 12: ಕೃಷಿಯನ್ನು ಕಾರ್ಪೋರೇಟೀಕರಣಗೊಳಿಸುವ ಕೇಂದ್ರ ಸರಕಾರದ 3 ಅಧ್ಯಾದೇಶಗಳ ವಿರುದ್ಧ ಪಂಜಾಬ್, ಹರ್ಯಾಣ ಹಾಗೂ ಉತ್ತರಪ್ರದೇಶದಲ್ಲಿ ರೈತರು ಪ್ರತಿಭಟನೆ ಮುಂದಾಗಿದ್ದಾರೆ. ಈ ಪ್ರತಿಭಟನೆ ದೇಶಾದ್ಯಂತ ವಿಸ್ತರಿಸುವ ಸಾಧ್ಯತೆ ಇದೆ.

ಸೋಮವಾರ (ಸೆಪ್ಟಂಬರ್ 14) ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರಕಾರ ಸಂಸತ್ತಿನ ಉಭಯ ಸದನಗಳಲ್ಲಿ ಅವಶ್ಯಕ ಸಾಮಾಗ್ರಿಗಳ (ತಿದ್ದುಪಡಿ) ಅಧ್ಯಾದೇಶ, ರೈತರ (ಸಶಕ್ತೀಕರಣ ಹಾಗೂ ರಕ್ಷಣೆ) ಬೆಲೆ ಖಾತರಿ ಒಪ್ಪಂದ ಹಾಗೂ ಕೃಷಿ ಸೇವೆಗಳ ಆಧ್ಯಾದೇಶ-2020, ರೈತರ ಉತ್ಪನ್ನ ವ್ಯಾಪಾರ ಹಾಗೂ ವಾಣಿಜ್ಯ (ಉತ್ತೇಜನ ಹಾಗೂ ಸೌಕರ್ಯ) ಅಧ್ಯಾದೇಶಗಳನ್ನು ಮಂಡಿಸುವ ಹಾಗೂ ಅನುಮೋದಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ರೈತರು ಈ ಪ್ರತಿಭಟನೆ ಆರಂಭಿಸಿದ್ದಾರೆ.

ಗುತ್ತಿಗೆ ಕೃಷಿಯನ್ನು ಕಾನೂನುಬದ್ಧಗೊಳಿಸುವ ಮೂಲಕ ರೈತರು ತಮ್ಮ ಬೆಳೆಗೆ ಉತ್ತಮ ಬೆಲೆ ಪಡೆಯಲು ಈ ಅಧ್ಯಾದೇಶಗಳು ನೆರವು ನೀಡಲಿದೆ ಎಂದು ಕೇಂದ್ರ ಸರಕಾರ ಪ್ರತಿಪಾದಿಸಿದೆ. ಉತ್ಪಾದನೆ, ದಾಸ್ತಾನು, ಸಾಗಾಟ, ವಿತರಣೆ ಹಾಗೂ ಪೂರೈಕೆ ಮಾಡಲು ಸ್ವತಂತ್ರ ಹಾಗೂ ಕೃಷಿ ಕ್ಷೇತ್ರದಲ್ಲಿ ಆರ್ಥಿಕತೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಲು, ಖಾಸಗಿ ವಲಯ/ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸಲು ಕಾರಣವಾಗಲಿದೆ. ಇದು ಶೀತಲೀಕೃತ ದಾಸ್ತಾನುಗಳು ಹಾಗೂ ಆಹಾರ ಪೂರೈಕೆ ಸರಪಣಿಯನ್ನು ಆಧುನಿಕೀಕರಣಗೊಳಿಸಲು ಹೂಡಿಕೆ ಆರಂಭಿಸಲು ನೆರವಾಗಲಿದೆ ಎಂದು ಈ ವರ್ಷ ಜೂನ್ ಆರಂಭದಲ್ಲಿ ಪ್ರಧಾನ ಮಂತ್ರಿ ಕಚೇರಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆ ತಿಳಿಸಿತ್ತು. ಆದರೆ, ಕಳೆದ ಹಲವು ವಾರಗಳಿಂದ ಈ ಆಧ್ಯಾದೇಶಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕೃಷಿಕರು, ಈ ಆದ್ಯಾದೇಶ ಕೃಷಿ ಕ್ಷೇತ್ರವನ್ನು ಕಾರ್ಪೊರೇಟೀಕರಣ ಗೊಳಿಸುತ್ತದೆ ಹಾಗೂ ಆರ್ಥಿಕವಾಗಿ ರೈತರನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಕೇಂದ್ರ ಸರಕಾರದ ಈ ನಡೆಯ ವಿರುದ್ಧ ಮುಂಗಾರು ಅಧಿವೇಶನದ ಮೊದಲ ದಿನವಾದ ಸೆಪ್ಟಂಬರ್ 14ರಂದು ದೇಶಾದ್ಯಂತ ಬೃಹತ್ ಪ್ರತಿಭಟನೆ ನಡೆಸಲು ವಿವಿಧ ರೈತ ಸಂಘಗಳು ಚಿಂತಿಸುತ್ತಿವೆ. ಈಗಾಗಲೇ ಪಂಜಾಬ್ ಹಾಗೂ ಹರ್ಯಾಣದಲ್ಲಿ ಟ್ರ್ಯಾಕ್ಟರ್ ರ್ಯಾಲಿಗಳನ್ನು ನಡೆಸಲಾಗಿದೆ. ಅಲ್ಲದೆ ರೈತರು ಸಂಸತ್ತಿಗೆ ಮಾರ್ಚ್ ನಡೆಸಲು ಚಿಂತಿಸುತ್ತಿದ್ದಾರೆ. ಕೊರೋನ ವೈರಸ್ ಸೋಂಕು ಹರಡುತ್ತಿರುವುದರಿಂದ ರೈತರು ಸುರಕ್ಷಿತ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಸಣ್ಣ ಗುಂಪಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಅಧ್ಯಾದೇಶಗಳನ್ನು ಪ್ರತಿಭಟಿಸಿ ಹರ್ಯಾಣದ ಪೀಪ್ಲಿಯಲ್ಲಿ ಪ್ರತಿಭಟನೆ ನಡೆಸಿದ ರೈತರು ದಿಲ್ಲಿ-ಅಂಬಾಲ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಪೊಲೀಸರು ಲಾಠಿಚಾರ್ಜ್ ನಡೆಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಚದುರಿಸಿದ್ದಾರೆ.

ಕೇಂದ್ರ ಸರಕಾರ ಹೇರಲು ಪ್ರಯತ್ನಿಸುತ್ತಿರುವ ಗುತ್ತಿಗೆ ಮಾದರಿಯನ್ನು ಸರಕಾರ ಈಗಾಗಲೇ ಕಬ್ಬು ಕೃಷಿ ವಲಯದಲ್ಲಿ ಪ್ರಯತ್ನಿಸಿದೆ. ದೊಡ್ಡ ಸಂಖ್ಯೆ ಕಬ್ಬು ಬೇಸಾಯಗಾರರು ಈ ಮಾದರಿಯ ವ್ಯವಹಾರವನ್ನು ಅನುಸರಿಸಲು ಪ್ರಯತ್ನಿಸಿದರು. ಈಗ ಅವರಿಗೆ ಸಾವಿರಾರು ಕೋಟಿ ರೂಪಾಯಿ ಪಾವತಿಸಲು ಬಾಕಿ ಇವೆ. ಅವರ ಬಾಕಿ ಪಾವತಿ ಮಾಡುವ ವಿಚಾರದಲ್ಲಿ ಯಾರೊಬ್ಬರೂ ಮಧ್ಯೆ ಪ್ರವೇಶಿಸುತ್ತಿಲ್ಲ ಎಂದು ಆಲ್ ಇಂಡಿಯಾ ಕಿಸಾನ್ ಸಂಘರ್ಷ ಕೋ-ಆರ್ಡಿನೇಶನ್ ಕಮಿಟಿ (ಎಐಕೆಎಸ್‌ಸಿಸಿ)ಯ ರಾಷ್ಟ್ರೀಯ ಸಂಚಾಲಕ ವಿ.ಎಂ. ಸಿಂಗ್ ಹೇಳಿದ್ದಾರೆ.

ಹೋರಾಟ ದೇಶಾದ್ಯಂತ ವಿಸ್ತರಿಸುವ ಸಾಧ್ಯತೆ

‘‘ಸೆಪ್ಟಂಬರ್ 14ರಂದು ಬೀದಿಗಿಳಿಯುವಂತೆ ಹಾಗೂ ಅಧ್ಯಾದೇಶಗಳ ವಿರುದ್ಧ ಧ್ವನಿ ಎತ್ತುವಂತೆ ದೇಶಾದ್ಯಂತದ ರೈತರಿಗೆ ಕರೆ ನೀಡಿದ್ದೇವೆ. ಈ ಅಧ್ಯಾದೇಶಗಳಿಂದ ರೈತರು ಸಂತುಷ್ಟರಾಗಿದ್ದಾರೆ ಎಂದು ಸರಕಾರ ಪ್ರತಿಪಾದಿಸಿದೆ. ಇದುವರಿಗೆ ಕನಿಷ್ಠ ಬೆಂಬಲ ಬೆಲೆಯಿಂದ ನಾವು ಸ್ಪಲ್ಪ ಲಾಭ ಪಡೆಯುತ್ತಿದ್ದೆವು. ಆದರೆ, ಕೃಷಿ ಕ್ಷೇತ್ರದ ಕಾರ್ಪೊರೇಟೀಕರಣದಿಂದ ನಾವು ಅದನ್ನು ಕೂಡ ಪಡೆಯಲಾರೆವು ಎಂದು ಭಯವಾಗುತ್ತಿದೆ’’

ವಿ.ಎಂ. ಸಿಂಗ್, ಆಲ್ ಇಂಡಿಯಾ ಕಿಸಾನ್ ಸಂಘರ್ಷ ಕೋ-ಆರ್ಡಿನೇಶನ್ ಕಮಿಟಿ (ಎಐಕೆಎಸ್‌ಸಿಸಿ)ಯ ರಾಷ್ಟ್ರೀಯ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News