ಲಾಕ್‍ಡೌನ್ ಬಳಿಕ ರಾಜ್ಯದ ಜೈಲಿನಲ್ಲಿ ಹೆಚ್ಚಿದ ಕೈದಿಗಳು !

Update: 2020-09-12 17:26 GMT

ಬೆಂಗಳೂರು, ಸೆ.12: ಲಾಕ್‍ಡೌನ್ ಬಳಿಕ ರಾಜ್ಯ ವ್ಯಾಪ್ತಿಯಲ್ಲಿರುವ ಕಾರಾಗೃಹಗಳಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆಯೂ ಏರಿಕೆಯಾಗಿದೆ ಎಂದು ವರದಿಯಾಗಿದೆ.

ರಾಜಧಾನಿ ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ 3,500 ಕೈದಿಗಳ ಸಾಮರ್ಥ್ಯ ಹೊಂದಿದೆ. ಆದರೆ, ಅದರಲ್ಲಿ 4,953 ಪುರುಷರು 197 ಮಹಿಳೆಯರು, 10 ಅಪ್ರಾಪ್ತ ಮಕ್ಕಳು ಸೇರಿ 5 ಸಾವಿರಕ್ಕೂ ಅಧಿಕ ಮಂದಿಯನ್ನು ಜೈಲಿನಲ್ಲಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ರಾಜ್ಯ ವ್ಯಾಪಿ ಒಟ್ಟು 47 ಕಾರಾಗೃಹಗಳಿವೆ. ಅವುಗಳಲ್ಲಿ 9 ಕೇಂದ್ರ ಕಾರಾಗೃಹ, 21 ಜಿಲ್ಲಾ ಕಾರಾಗೃಹ, 1 ಬಯಲು ಕಾರಾಗೃಹ ಹಾಗೂ 13 ತಾಲೂಕು ಹಾಗೂ 3 ಕಂದಾಯ ಕಾರಾಗೃಹಗಳಿದ್ದು, ಇದರಲ್ಲಿ ಒಟ್ಟು 15,120 (13,885 ಪುರುಷ, 688 ಮಹಿಳಾ ಕೈದಿಗಳು) ಪೈಕಿ ವಿಚಾರಣಾಧೀನಾ ಕೈದಿಗಳು 11,444, ಸಜಾ ಕೈದಿಗಳು 3,899 ಮಂದಿ ಇದ್ದಾರೆ.

ತಗ್ಗಿದ ಕೊರೋನ?: ಕೊರೋನ ಸೋಂಕು ಕಾರಾಗೃಹಗಳಿಗೆ ತಲುಪಿದ್ದು, ಸದ್ಯದ ಮಟ್ಟದಲ್ಲಿ ಬೆಳಕಿಗೆ ಬರುತ್ತಿರುವ ಪ್ರಕರಣಗಳು ಪ್ರಮಾಣ ಕಡಿಮೆಯಾಗಿದೆ. ಇದುವರೆಗೂ 2,665 ಕೈದಿಗಳಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಒಟ್ಟು 303 ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಅವರ ಜೊತೆಗೆ ಸಂಪರ್ಕವಿರುವ ಕೈದಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಹಾಗೆಯೇ ಹೊಸತಾಗಿ ಬರುವ ಕೈದಿಗಳನ್ನು ಜೈಲಿನೊಳಗಡೆ ಸೇರಿಸುವ ಮೊದಲು ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ನೆಗೆಟಿವ್ ವರದಿ ಇದ್ದರೆ ಮಾತ್ರ ಕಾರಾಗೃಹದಲ್ಲಿಡಲಾಗುತ್ತಿದೆ ಎನ್ನುತ್ತಾರೆ ಬಂದಿಖಾನೆ ಅಧಿಕಾರಿಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News