ಸ್ವಾಮಿ ಅಗ್ನಿವೇಶ್ ಸಾವನ್ನು ಸಂಭ್ರಮಿಸಿ ಸಿಬಿಐ ಮಾಜಿ ನಿರ್ದೇಶಕ ಮಾಡಿದ್ದ ಟ್ವೀಟ್ ಅಳಿಸಿದ ಟ್ವಿಟರ್

Update: 2020-09-13 14:58 GMT

ಹೊಸದಿಲ್ಲಿ: ಹಿರಿಯ ಸಾಮಾಜಿಕ ಹೋರಾಟಗಾರ, ಆರ್ಯ ಸಮಾಜ ನಾಯಕ ಸ್ವಾಮಿ ಅಗ್ನಿವೇಶ್ ಅವರ ಸಾವನ್ನು ಸಂಭ್ರಮಿಸಿ ಸಿಬಿಐ ಮಾಜಿ ನಿರ್ದೇಶಕ ಎಂ. ನಾಗೇಶ್ವರ ರಾವ್ ಮಾಡಿದ್ದ ಟ್ವೀಟನ್ನು ಟ್ವಿಟರ್ ಅಳಿಸಿ ಹಾಕಿದೆ.

ನಾಗೇಶ್ವರ ರಾವ್ ಅವರ ಟ್ವೀಟ್ ನಿಂದನೆ ಮತ್ತು ಕಿರುಕುಳಗಳ ವಿರುದ್ಧದ ತನ್ನ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಟ್ವಿಟರ್ ಹೇಳಿದೆ.

ಶುಕ್ರವಾರ ನಿಧನರಾದ ಸ್ವಾಮಿ ಅಗ್ನಿವೇಶ್ ಅವರ ಸಾವನ್ನು ಸಂಭ್ರಮಿಸಿ ಟ್ವೀಟ್ ಮಾಡಿ ನಾಗೇಶ್ವರ ರಾವ್  ವಿವಾದ ಸೃಷ್ಟಿಸಿದ್ದರು.

“ಸ್ವಾಮಿ ಅಗ್ನಿವೇಶ್ ತೊಲಗಿರುವುದು ಒಳ್ಳೆಯದಾಯಿತು. ನೀವು  ಕೇಸರಿ ವಸ್ತ್ರಧಾರಿಯಾಗಿದ್ದರೂ ಹಿಂದು ವಿರೋಧಿಯಾಗಿದ್ದವರು.  ನೀವು ಹಿಂದು ಧರ್ಮಕ್ಕೆ ಸಾಕಷ್ಟು ಹಾನಿಯೆಸಗಿದ್ದೀರಿ. ನೀವು ತೆಲುಗು ಬ್ರಾಹ್ಮಣರಾಗಿ ಹುಟ್ಟಿರುವುದಕ್ಕೆ ನನಗೆ ನಾಚಿಕೆಯಾಗುತ್ತದೆ. ಕುರಿಯ ವೇಷದಲ್ಲಿರುವ ತೋಳದಂತೆ. ಇಷ್ಟು ಸಮಯ ಏಕೆ ಕಾದಿದ್ದೀರಿ ಎಂಬುದೇ ಯಮರಾಜರ ವಿರುದ್ಧ ನನ್ನ ಆಕ್ಷೇಪ'' ಎಂದು ರಾವ್ ಟ್ವೀಟ್ ಮಾಡಿದ್ದರು.

ಪೊಲೀಸ್ ಸುಧಾರಣೆಗಳ ಬಗ್ಗೆ ಕಾರ್ಯ ನಿರ್ವಹಿಸುತ್ತಿರುವ ‘ದಿ ಇಂಡಿಯನ್ ಪೊಲೀಸ್ ಫೌಂಡೇಷನ್ ’ರಾವ್ ಟೀಕೆಗಳನ್ನು ಖಂಡಿಸಿದೆ. ಐಪಿಎಸ್ ಎಂದು ಹೇಳಿಕೊಳ್ಳುತ್ತಿರುವ ನಿವೃತ್ತ ಅಧಿಕಾರಿ ಇಂತಹ ದ್ವೇಷ ಸಂದೇಶಗಳನ್ನು ಟ್ವೀಟಿಸುವ ಮೂಲಕ ತಾನು ಧರಿಸಿದ್ದ ಸಮವಸ್ತ್ರವನ್ನು ಅಪವಿತ್ರಗೊಳಿಸಿದ್ದಾರೆ ಮತ್ತು ಸರಕಾರಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ ಎಂದು ಟ್ವೀಟಿಸಿರುವ ಫೌಂಡೇಷನ್,ಅವರು ದೇಶದ ಇಡೀ ಪೊಲೀಸ್ ಪಡೆಯನ್ನು,ವಿಶೇಷವಾಗಿ ಯುವ ಅಧಿಕಾರಿಗಳನ್ನು ನೈತಿಕ ಸ್ಥೈರ್ಯಗೆಡಿಸಿದ್ದಾರೆ ಎಂದು ಹೇಳಿದೆ.

ರಾವ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಆಕ್ರೋಶದ ಬಳಿಕ ಟ್ವಿಟರ್ ಅವರ ಟ್ವೀಟ್‌ನ್ನು ತೆಗೆದುಹಾಕಿದೆ. ಆದರೆ ತನ್ನ ನಿಲುವಿಗೆ ಅಂಟಿಕೊಂಡಿರುವ ರಾವ್ ಅಗ್ನಿವೇಶರನ್ನು ‘ಕಾಡುಮನುಷ್ಯರು ಮತ್ತು ಸಮಾಜವನ್ನು ಹಾಳುಮಾಡುವ ಕ್ರಿಮಿಗಳಿಗೆ ’ ಹೋಲಿಸಿದ್ದಾರೆ. ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಭಿನ್ನಾಭಿಪ್ರಾಯದ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News