ಶಿಕ್ಷಣ ನೀತಿ ಮೂಲಕ ಕೇಂದ್ರ ಸರಕಾರದಿಂದ ಕೇಸರೀಕರಣದ ಹುನ್ನಾರ: ಸಸಿಕಾಂತ್ ಸೆಂಥಿಲ್

Update: 2020-09-13 13:46 GMT

ಬೆಂಗಳೂರು, ಸೆ.13: ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗೀಕರಣ, ಕೇಂದ್ರೀಕರಣ ಹಾಗೂ ಕೇಸರೀಕರಣ ಮಾಡುವ ಹುನ್ನಾರವಾಗಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ರವಿವಾರ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ವತಿಯಿಂದ ಎನ್‍ಇಪಿ-2020ರ ಶಿಕ್ಷಣ ನೀತಿಯನ್ನು ವಿರೋಧಿಸಿ ವೆಬಿನಾರ್ ನಲ್ಲಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಶೇ.90ರಷ್ಟು ಇರುವ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ಮತ್ತು ಶಿಕ್ಷಣದ ಬಗ್ಗೆ ಇವರಿಗೆ ಯಾವುದೇ ಕಾಳಜಿ ಇಲ್ಲ, ಇವರ ಕಾಳಜಿ ಇರುವುದು ಕೇವಲ ಶೇ.10ರಷ್ಟಿರುವ ಮೇಲ್‍ವರ್ಗದ ಹಾಗೂ ಶ್ರೀಮಂತ ವರ್ಗದ ಜನರಿಗಾಗಿ ಮಾತ್ರ ಎಂದು ಹೇಳಿದರು.

ಮೈಸೂರಿನ ಸುತ್ತೂರು ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಲ್.ಜವಾಹರ ನೇಸನ್ ಮಾತನಾಡಿ, ಕೇಂದ್ರ ಸರಕಾರ ನೂತನ ಶಿಕ್ಷಣ ನೀತಿಯನ್ನು(ಎನ್‍ಇಪಿ-2020) ಜಾರಿ ಮಾಡುವ ಮೂಲಕ ದೇಶದಲ್ಲಿ ಗುಲಾಮ ವ್ಯವಸ್ಥೆಯನ್ನು ರೂಪಿಸಲು ಹೊರಟಿದೆ ಎಂದು ತಿಳಿಸಿದ್ದಾರೆ.

ಎನ್‍ಇಪಿ-2020 ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಜ್ಞಾನ ಬೆಳವಣಿಗೆಯ ಅಡಿಪಾಯಕ್ಕೆ ಧಕ್ಕೆ ತರುವ ರೀತಿಯಲ್ಲಿದೆ. ಕಲಿಕೆ, ಬೋಧನೆ, ವೃತ್ತಿ, ಸಂಸ್ಕೃತಿ, ಊಟ, ಉಡುಗೆ ಹೀಗೆ ಎಲ್ಲವನ್ನು ಕೆಲವರೇ ನಿರ್ಧರಿಸುವಂತಹ ವಾತಾವರಣ ಸೃಷ್ಟಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ-2020 ಮಾರುಕಟ್ಟೆ, ವ್ಯಾಪಾರೀಕರಣಕ್ಕೆ ಪೂರಕವಾಗಿ ಹಾಗೂ ಅಧಿಕಾರ ಕೇಂದ್ರೀಕರಣಕ್ಕೆ ತಕ್ಕಂತೆ ರೂಪಿತಗೊಂಡಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ನಿರ್ಧರಿಸಬೇಕಾದ ವಿಷಯಗಳಲ್ಲಿ ಕೇಂದ್ರವೇ ತೀರ್ಮಾನ ತೆಗೆದುಕೊಳ್ಳುವುದಕ್ಕೆ ದಾರಿ ಮಾಡಿಕೊಟ್ಟಿದೆ. ಒಂದು ಗುಂಪಿನ ಕೇಲವೇ ಸದಸ್ಯರು ಇಡೀ ದೇಶದ ಬೃಹತ್ ಜನಸಮುದಾಯದ ಮೇಲೆ ವಿಚಾರಗಳನ್ನು ಹೇರುವ ಪ್ರಕ್ರಿಯೆಯಾಗಿದೆ ಎಂದು ಅವರು ಆರೋಪಿಸಿದರು.

ಶಿಕ್ಷಣ ತಜ್ಞ ಪ್ರೊ.ಮಹಾಬಲೇಶ್ವರ ರಾವ್ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ-2020 ಅಪ್ರಜಾಸತಾತ್ಮಕ ಹಾಗೂ ಒಕ್ಕೂಟ ವಿರೋಧಿ ನೀತಿಯಾಗಿದ್ದರಿಂದ ಇದನ್ನು ವಿರೋಧಿಸಬೇಕಾಗಿದೆ. ಈ ನೀತಿಯ ಪರಿಣಾಮವಾಗಿ ಶಿಕ್ಷಣ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರಯೋಗ ಪಶುಗಳಾಗುತ್ತಾರೆಂದು ಆತಂಕ ವ್ಯಕ್ತಪಡಿಸಿದರು. ಈ ವೇಳೆ ಐಎನ್‍ಎಸ್‍ಎ ಸಂಸ್ಥೆಯ ವಿಜ್ಞಾನಿ ಪ್ರೊ.ಧ್ರುವಜ್ಯೋತಿ ಮುಖರ್ಜಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News