'ಹಿಂದಿ ದಿವಸ್' ಪರ್ಯಾಯವಾಗಿ ಸೆ.14ಕ್ಕೆ ಕನ್ನಡ ಭಾಷಾ ದಿನ ಆಚರಣೆ

Update: 2020-09-13 14:09 GMT

ಬೆಂಗಳೂರು, ಸೆ. 13: ಅಂತಾರಾಷ್ಟ್ರೀಯ ಹಿಂದಿ ದಿನಕ್ಕೆ ಪರ್ಯಾಯವಾಗಿ ನಾಳೆ(ಸೆ.14) ಅಂತಾರಾಷ್ಟ್ರೀಯ ಕನ್ನಡ ಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ಅಧ್ಯಕ್ಷ ಭೀಮಾಶಂಕರ ಪಾಟೀಲ್ ಹೇಳಿದ್ದಾರೆ.

ಈ ಸಂಬಂಧ ಪ್ರಕಟನೆ ನೀಡಿರುವ ಅವರು, ಕೇವಲ 200 ವರ್ಷ ಇತಿಹಾಸವಿರುವ ಹಿಂದಿಗೆ ರಾಷ್ಟ್ರೀಯ ಭಾಷೆಯ ಮಾನ್ಯತೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಪ್ರತಿವರ್ಷವೂ ಹಿಂದಿ ದಿವಸ್ ಆಚರಿಸುತ್ತದೆ. ಆದರೆ, 2700 ವರ್ಷಗಳ ಇತಿಹಾಸವಿರುವ ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ಹೀಗಾಗಿ, ಹಿಂದಿ ದಿವಸ್‍ಗೆ ಪರ್ಯಾಯವಾಗಿ ಕನ್ನಡ ಭಾಷಾ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಲು ಒತ್ತಾಯಿಸಿ ಮತ್ತು ಕೇಂದ್ರ ಸರಕಾರದ ಎಲ್ಲ ಕಚೇರಿಗಳಲ್ಲಿ ಕಡ್ಡಾಯ ಕನ್ನಡ ಬಳಕೆ ಮಾಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ಅಂತಾರಾಷ್ಟ್ರೀಯ ಕನ್ನಡ ದಿನದಂದು ಆಗ್ರಹಿಸಲಾಗುತ್ತದೆ. ಅಂದು ಸೇನೆಯ ಎಲ್ಲ ಜಿಲ್ಲಾ, ತಾಲೂಕುಗಳಲ್ಲಿರುವ ಕೇಂದ್ರ ಸರಕಾರ ಸ್ವಾಮ್ಯದ ಎಲ್ಲ ಕಚೇರಿಗಳಿಗೆ ಸ್ಥಳೀಯ ಘಟಕಗಳ ಪದಾಧಿಕಾರಿಗಳು ತೆರಳಿ ಕನ್ನಡ ಬಾರದ ಸಿಬ್ಬಂದಿಗಳಿಗೆ ಕನ್ನಡ ಕಲಿಕಾ ಪುಸ್ತಕ ಹಾಗೂ ಸಿಹಿ ನೀಡುವುದರ ಮೂಲಕ ಕನ್ನಡೇತರಿಗೆ ಕನ್ನಡ ಕಲಿಯುವಂತೆ ಮನವಿ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News