ಮಾಜಿ ಜೆಎನ್​ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಬಂಧನ

Update: 2020-09-14 16:27 GMT

ಹೊಸದಿಲ್ಲಿ, ಸೆ. 14: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿಯಲ್ಲಿ ಸಂಭವಿಸಿದ ಕೋಮು ಹಿಂಸಾಚಾರದಲ್ಲಿ ಭಾಗಿಯಾದ ಆರೋಪದಲ್ಲಿ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರನ್ನು ದಿಲ್ಲಿ ಪೊಲೀಸರ ವಿಶೇಷ ಘಟಕ ರವಿವಾರ ತಡ ರಾತ್ರಿ ಬಂಧಿಸಿದೆ. ಸುಮಾರು 11 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಖಾಲಿದ್ ಅವರನ್ನು ದಿಲ್ಲಿ ಪೊಲೀಸರ ವಿಶೇಷ ಘಟಕ ಬಂಧಿಸಿತು.

ಹಿಂಸಾಚಾರದಲ್ಲಿ ಭಾಗಿಯಾದ ಮುಖ್ಯ ಪಿತೂರಿಗಾರರಲ್ಲಿ ಉಮರ್ ಖಾಲಿದ್ ಕೂಡ ಓರ್ವ ಆರೋಪಿ ಎಂದು ಅನಾಮಿಕ ಹಿರಿಯ ಅಧಿಕಾರಿಯೊಬ್ಬರು ‘ದಿ ಹಿಂದೂ’ ಪತ್ರಿಕೆಗೆ ತಿಳಿಸಿದ್ದಾರೆ. ಉಮರ್ ಖಾಲಿದ್ ಅವರನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಪೊಲೀಸರು ಅವರನ್ನು 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರಿದ್ದಾರೆ. ನ್ಯಾಯಾಲಯ ತನ್ನ ಆದೇಶವನ್ನು ಕಾದಿರಿಸಿದೆ. ಉಮರ್ ಖಾಲಿದ್ ಸದಸ್ಯರಾಗಿರುವ ಸಾಮಾಜಿಕ ಹೋರಾಟಗಾರರ ಸಂಘಟನೆ ‘ಯುನೈಟೆಡ್ ಅಗೈನ್‌ಸ್ಟ್ ಹೇಟ್’, ಹಿಂಸಾಚಾರದಲ್ಲಿ ಪಿತೂರಿಯ ಆರೋಪದಲ್ಲಿ ಉಮರ್ ಖಾಲಿದ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ.

ಗಲಭೆಯ ತನಿಖೆಯ ಹೆಸರಿನಲ್ಲಿ ದಿಲ್ಲಿ ಪೊಲೀಸರು ಹುಸಿ ಕಥೆಗಳನ್ನು ಹೆಣೆಯುತ್ತಿದ್ದಾರೆ ಹಾಗೂ ಪ್ರತಿಭಟನಕಾರರನ್ನು ಅಪರಾಧಿಗಳು ಎಂದು ಬಿಂಬಿಸುತ್ತಿದ್ದಾರೆ. ಅಲ್ಲದೆ, ಇನ್ನೋರ್ವ ಬಲಿಪಶುವನ್ನು ಹುಡುಕುತ್ತಿದ್ದಾರೆ ಎಂದು ಸಂಘಟನೆಯ ಹೇಳಿಕೆ ತಿಳಿಸಿದೆ.

ಈ ತಿಂಗಳ ಆರಂಭದಲ್ಲಿ ದಿಲ್ಲಿ ಪೊಲೀಸರ ಕ್ರೈಮ್ ಬ್ರಾಂಚ್ ಉಮರ್ ಖಾಲೀದ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ವಜಾಗೊಂಡ ಅಮ್ ಆದ್ಮಿ ಪಕ್ಷದ ಕೌನ್ಸಿಲರ್ ತಾಹಿರ್ ಹುಸೈನ್ ವಿರುದ್ಧ ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಮರ್ ಖಾಲಿದ್ ಅವರ ಹೆಸರು ಕಾಣಿಸಿಕೊಂಡಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಸಂದರ್ಭ ಜನವರಿ 8ರಂದು ತಾಹಿರ್ ಹುಸೈನ್ ಅವರು ಉಮರ್ ಖಾಲಿದ್ ಹಾಗೂ ‘ಯುನೈಟೆಡ್ ಎಗೈನ್ಸ್‌ಟ್ ಹೇಟ್’ನ ಸಹ ಸ್ಥಾಪಕ ಖಾಲಿದ್ ಸೈಫಿ ಅವರನ್ನು ದಿಲ್ಲಿಯ ಶಾಹೀನ್ ಬಾಗ್‌ನಲ್ಲಿ ಭೇಟಿಯಾಗಿದ್ದರು. ಆಗ ಈ ಅಲ್ಲಿ ಉಮರ್ ಖಾಲಿದ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಸಂದರ್ಭ ದೊಡ್ಡ ಮಟ್ಟದ ಹಿಂಸಾಚಾರಕ್ಕೆ ಸಿದ್ಧರಾಗಬೇಕು ಎಂದು ಅವರಿಗೆ ತಿಳಿಸಿದ್ದರು ಎಂದು ಆರೋಪ ಪಟ್ಟಿಯಲ್ಲಿ ಹೇಳಿದೆ.

ಹಿಂಸಾಚಾರಕ್ಕೆ ಸಂಬಂಧಿಸಿ ಯುಎಪಿಎ ಅಡಿಯಲ್ಲಿ ಉಮರ್ ಖಾಲಿದ್ ಅವರ ವಿರುದ್ಧ ಎಪ್ರಿಲ್‌ನಲ್ಲಿ ಇನ್ನೊಂದು ಪ್ರಕರಣ ದಾಖಲಿಸಲಾಗಿತ್ತು. ಭಾಷಣ ಮಾಡುವ ಮೂಲಕ ಹಿಂಸಾಚಾರವನ್ನು ಉತ್ತೇಜಿಸುವ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿತ್ತು. ಈ ಸಂದರ್ಭ ಉಮರ್ ಖಾಲಿದ್ ಅವರು ತನ್ನ ವಿರುದ್ಧ ಆರೋಪವನ್ನು ನಿರಾಕರಿಸಿದ್ದರು ಹಾಗೂ ತನ್ನನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನಕಾರರನ್ನು ಉತ್ತೇಜಿಸಿದ್ದಾರೆ ಎಂದು ಆರೋಪಿಸಿ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ, ಆರ್ಥಿಕ ತಜ್ಞೆ ಜಯತಿ ಘೋಷ್, ದಿಲ್ಲಿ ವಿಶ್ವವಿದ್ಯಾನಿಲಯದ ಅಧ್ಯಾಪಕ ಅಪೂರ್ವಾನಂದ, ಸ್ವರಾಜ್ ಅಭಿಯಾನದ ನಾಯಕ ಯೋಗೇಂದ್ರ ಯಾದವ್ ಹಾಗೂ ಚಿತ್ರ ನಿರ್ದೇಶಕ ರಾಹುಲ್ ರಾಯ್ ಅವರ ಹೆಸರನ್ನು ದಿಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಸೇರಿಸಿ ಪೂರಕ ಆರೋಪ ಪಟ್ಟಿ ಸಲ್ಲಿಸಿದ ಒಂದು ದಿನದ ಬಳಿಕ ಉಮರ್ ಖಾಲೀದ್ ಅವರನ್ನು ಬಂಧಿಸಲಾಗಿದೆ.

ಅಮ್ನೇಸ್ಟಿ ಇಂಡಿಯಾ, ಗಣ್ಯ ನಾಗರಿಕರಿಂದ ಖಂಡನೆ

ಉಮರ್ ಖಾಲಿದ್ ಅವರ ಬಂಧನದ ಬಗ್ಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಉಮರ್ ಖಾಲಿದ್ ಅವರ ಬಂಧನವನ್ನು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಶಾಂತಿಯುತ ಪ್ರತಿಭಟನೆಯನ್ನು ಮಟ್ಟಹಾಕುವ ಇನ್ನೊಂದು ದೃಷ್ಟಾಂತ ಎಂದು ಆಮ್ನೆಸ್ಟಿ ಇಂಡಿಯಾ ಹೇಳಿದೆ. ಲೇಖಕಿ ಆರುಂಧತಿ ರಾಯ್, ನ್ಯಾಯವಾದಿ ಪ್ರಶಾಂತ್ ಭೂಷಣ್, ದಿಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ನಂದಿನಿ ಸುಂದರ್ ಹಾಗೂ ಅಪೂರ್ವಾನಂದ ಸೇರಿ ಗಣ್ಯ ವ್ಯಕ್ತಿಗಳು ಸೇರಿದಂತೆ ಕನಿಷ್ಠ 36 ನಾಗರಿಕರು ಹಾಗೂ ಸಂಘಟನೆಗಳು ಹೇಳಿಕೆ ಬಿಡುಗಡೆ ಮಾಡಿ ಉಮರ್ ಖಾಲಿದ್ ಅವರನ್ನು ತತ್‌ಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿವೆ.

‘‘ಇದು ದಿಲ್ಲಿಯಲ್ಲಿ 2020 ಫೆಬ್ರವರಿಯಲ್ಲಿ ನಡೆದ ಹಿಂಸಾಚಾರದ ಕುರಿತ ತನಿಖೆ ಅಲ್ಲ. ಬದಲಾಗಿ ಇದು ಅಸಾಂವಿಧಾನಿಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ನಡೆದ ಪ್ರಜಾಸತ್ತಾತ್ಮಕ ಹಾಗೂ ಸಂಪೂರ್ಣ ಶಾಂತಿಯುತವಾಗಿ ನಡೆದ ಪ್ರತಿಭಟನೆಗೆ ಸಂಬಂಧಿಸಿದ್ದು ಎಂಬುದರಲ್ಲಿ ಯಾವುದೇ ಸಂದೇಹ ಇಲ್ಲ ಎಂಬುದನ್ನು ನಾವು ವಿಷಾದದಿಂದ ಹೇಳುತ್ತಿದ್ದೇವೆ’’ ಎಂದು ಅವರ ಹೇಳಿಕೆ ತಿಳಿಸಿದೆ.

 ಬದುಕುವ ಹಕ್ಕು ಎಂದರೆ, ಕೇವಲ ತಿನ್ನಲು, ಬದುಕಲು ಹಾಗೂ ಉಸಿರಾಡಲು ಅವಕಾಶ ನೀಡುವುದು ಅಲ್ಲ. ಬದಲಾಗಿ ಅದು ಭೀತಿಯಿಲ್ಲದೆ, ಗೌರವದಿಂದ, ಭಿನ್ನಾಭಿಪ್ರಾಯದೊಂದಿಗೆ ಸ್ವತಂತ್ರ ಅಭಿವ್ಯಕ್ತಿಯೊಂದಿಗೆ ಬದುಕುವುದು. ಈ ತನಿಖೆ ಪ್ರಜಾಸತ್ತಾತ್ಮಕ ಧ್ವನಿಯನ್ನು ಮೌನಗೊಳಿಸುವ ಪ್ರಯತ್ನದಂತೆ ಕಾಣುತ್ತಿದೆ. ಇದು ನಿಖರವಾಗಿ ಅವರನ್ನು ಬಲಿಪಶು ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಿಕೆ ತಿಳಿಸಿದೆ.

ಈ ಹೇಳಿಕೆಗೆ ಸಹಿ ಹಾಕಿದವರಲ್ಲಿ ಸಾಮಾಜಿಕ ಹೋರಾಟಗಾರರಾದ ಆಕಾರ್ ಪಟೇಲ್, ಕವಿತಾ ಶ್ರೀವಾತ್ಸವ, ಪತ್ರಕರ್ತ ಪಿ. ಸಾಯಿನಾಥ್, ಇತಿಹಾಸಕಾರ ರಾಮಚಂದ್ರ ಗುಹಾ, ಆರ್ಥಿಕ ತಜ್ಞೆ ಹಾಗೂ ಜೆಎನ್‌ಯು ಪ್ರಾಧ್ಯಾಪಕ ಜಯತಿ ಘೋಷ್ ಹಾಗೂ ರಾಜಕಾರಣಿ ಜಿಗ್ನೇಶ್ ಮೇವಾನಿ ಹಾಗೂ ಬೃಂದಾ ಕಾರಟ್ ಅವರನ್ನು ಕೂಡ ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News