ಮನೆಗಳ್ಳತನ ಪ್ರಕರಣ: ಅಪ್ರಾಪ್ತ ಬಾಲಕ ಸೇರಿ ನಾಲ್ವರ ಬಂಧನ, ಅಪಾರ ಪ್ರಮಾಣದ ಚಿನ್ನಾಭರಣ ಜಪ್ತಿ

Update: 2020-09-14 08:58 GMT

ವಿಜಯಪುರ: ಗುಮ್ಮಟ ನಗರಿ ಜಿಲ್ಲೆಯ ಜನತೆಗೆ ಸಾಕಷ್ಟು ತಲೆ ನೋವಾಗಿದ್ದ ಮನೆಗಳ್ಳರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟು ಆರು ಮನೆಗಳಲ್ಲಿ ಕಳ್ಳತನ ಮಾಡಿದ ಬಂಧಿತ ಆರೋಪಿಗಳಿಂದ ಸುಮಾರು 23 ಲಕ್ಷ ರೂ. ಮೌಲ್ಯದ 420 ಗ್ರಾಂ. ಚಿನ್ನಾಭರಣ, ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ.

ವಿಜಯಪುರ ನಿವಾಸಿಗಳಾದ ಸ್ವರೂಪ್ ಜಾಲವಾದಿ, ಸತೀಶ ನಾಯಕ್ ಸೇರಿ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದ್ದು, 10.26 ಲಕ್ಷ ರೂ. ಮೌಲ್ಯದ 190 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಮತ್ತೊಂದೆಡೆ ನಾಲ್ಕು ಮನೆಗಳಿಗೆ ನುಗ್ಗಿ ತನ್ನ ಕೈಚಳಕ ತೋರಿಸಿದ್ದ, ಇಂಡಿ ತಾಲೂಕಿನ ಸಾವಳಸಂಗ ನಿವಾಸಿ ರಾಜು ಹೊಸಮನಿ ಎಂಬಾತನನ್ನು ಬಂಧಿಸಲಾಗಿದ್ದು, ಈತನಿಂದ 12 ಲಕ್ಷ 38 ಸಾವಿರ 300 ರೂ. ಮೌಲ್ಯದ 233 ಗ್ರಾಂ ಚಿನ್ನ ಸೇರಿದಂತೆ ಕೃತ್ಯಕ್ಕೆ ಬಳಸಿದ ಬೈಕ್ ಜಪ್ತಿ ಮಾಡಿದ್ದಾರೆ.

ಇನ್ನು ವಿಜಯಪುರ ಜಿಲ್ಲಾದ್ಯಂತ ಅಕ್ರಮವಾಗಿ ಡಾಬಾ, ಹೋಟೆಲ್, ಸಾರ್ವಜನಿಕ ಸ್ಥಳಗಳಲ್ಲಿ ಸಾರಾಯಿ, ಗಾಂಜಾ ಮಾರಾಟ ಮಾಡುತ್ತಿದ್ದ 570 ಅಂಗಡಿಗಳ ಮೇಲೆ ದಾಳಿ ನಡೆಸಿ, 102 ಹೋಟೆಲ್ ಗಳ ವಿರುದ್ಧ ಪ್ರಕರಣ ದಾಖಲಿಸಿ 104 ಜನರನ್ನು ಬಂಧಿಸಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದಾರೆ.

ಇನ್ನು 5 ಪ್ರಕರಣದಲ್ಲಿ 7 ಜನರನ್ನು ಬಂಧಿಸಿ 138.92 ಕೆಜಿ ಗಾಂಜಾ, 4 ಪ್ರಕರಣದಲ್ಲಿ 5 ಜನರನ್ನು ಬಂಧಿಸಿ 756 ಮಾವಾ ಪ್ಯಾಕೇಟ್, 4 ಪ್ರಕರಣದಲ್ಲಿ 11 ಮನೆಗಳ್ಳರನ್ನು ಬಂಧಿಸಿ 703 ಗ್ರಾಂ ಬಂಗಾರ, 5 ಪ್ರಕರಣದಲ್ಲಿ 32 ಜೂಜುಕೋರರನ್ನು ಬಂಧಿಸಿ 36,480 ನಗದು ಜಪ್ತಿ ಸೇರಿದಂತೆ 17 ಕೆಜಿ ಶ್ರೀಗಂಧ ಮಾರಾಟಕ್ಕೆ ಯತ್ನಿಸಿದ ಮೂವರನ್ನು ವಿಜಯಪುರ ಜಿಲ್ಲಾ ಪೊಲೀಸರು ಬೇಟೆಯಾಡಿ ಹೆಡೆಮುರಿ ಕಟ್ಟಿದ್ದಾರೆ. ಅಲ್ಲದೇ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News