ಡ್ರಗ್ಸ್ ಜಾಲದಲ್ಲಿ ಯಾರೇ ರಾಜಕೀಯ ನಾಯಕರು ಇದ್ದರೂ ಕ್ರಮ ಕೈಗೊಳ್ಳಲಿ: ಸಿದ್ದರಾಮಯ್ಯ

Update: 2020-09-14 12:28 GMT

ಹುಬ್ಬಳ್ಳಿ, ಸೆ. 14: ಮಾದಕ ವಸ್ತುಗಳ (ಡ್ರಗ್ಸ್) ಜಾಲದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರು ದೊಡ್ಡವರು-ಸಣ್ಣವರು ಎಂಬುದು ಬೇಡ. ಯಾರೇ ರಾಜಕೀಯ ನಾಯಕರು ಇದ್ದರೂ ಕ್ರಮ ಕೈಗೊಳ್ಳಲಿ. ಶಾಸಕ ಝಮೀರ್ ಅಹ್ಮದ್ ಖಾನ್ ವಿರುದ್ಧ ಸಾಕ್ಷ್ಯ ಇದ್ದರೆ ಗಲ್ಲಿಗೇರಿಸಲಿ ಎಂದು ಅವರೇ ಹೇಳಿದ್ದಾರೆ. ಅವರ ಆಸ್ತಿಯನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳಲಿ. ಅದನ್ನು ಬಿಟ್ಟು ರಾಜಕೀಯವಾಗಿ ಮುಗಿಸಲು ಆರೋಪ ಮಾಡುವುದು ಸಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.

ಸೋಮವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಶಾಂತ್ ಸಂಬರಗಿ ಹೇಳಿದರು ಎಂದು ತನಿಖೆ ನಡೆಸಲು ಸಾಧ್ಯವಿಲ್ಲ. ಯಾರೇ ವ್ಯಕ್ತಿಯ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಬೇಕಾಗುತ್ತದೆ. ಡ್ರಗ್ಸ್ ದಂಧೆಯಲ್ಲಿ ಪಾಲ್ಗೊಂಡಿದ್ದರೆ ಅದನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದರು.

ಅನಗತ್ಯ ವಿಚಾರಣೆ: ಯೋಗೀಶ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರನಿಗೆ ನೋಟಿಸ್ ಜಾರಿ ಮಾಡಿದ್ದು, ಸಿಬಿಐನವರು ಅನಗತ್ಯ ವಿಚಾರಣೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದರು.

ಪರಿಹಾರ ನೀಡಿಲ್ಲ: ರಾಜ್ಯದಲ್ಲಿನ ಬರ-ನೆರೆ ಪರಿಹಾರ ಇನ್ನೂ ಕೊಟ್ಟಿಲ್ಲ. ಬಿಜೆಪಿಗೆ 25 ಮಂದಿ ಸಂಸದರು ಇದ್ದರೂ ಪ್ರಯೋಜನವಾಗಿಲ್ಲ. ಕಳೆದ ವರ್ಷ ಲಕ್ಷ ಕೋಟಿ ರೂ. ನಷ್ಟವಾಗಿದೆ. ಆದರೆ, ಇದುವರೆಗೂ ಪರಿಹಾರ ನೀಡಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಈ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆ ನಡೆಸುತ್ತೇವೆ. ಮೂರು ವಾರಗಳ ಕಾಲ ಅಧಿವೇಶನ ಅವಧಿ ವಿಸ್ತರಿಸಲು ಕೋರಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದೇನೆ. ಡಿ.ಜೆ. ಹಳ್ಳಿ ಗಲಭೆ ಪ್ರಕರಣದಲ್ಲಿ ನಾಲ್ವರ ಮೇಲೆ ಗೋಲಿಬಾರ್ ನಡೆಸಿದ್ದು, ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ ಎಂಬುದಕ್ಕೆ ಉದಾಹರಣೆ ಎಂದ ಅವರು, ಗಲಭೆ ಪ್ರಕರಣದಲ್ಲಿ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಏನು ಮಾತನಾಡಿದ್ದಾರೆಂದು ನನಗೆ ಗೊತ್ತಿಲ್ಲ. ಆಸ್ಪತ್ರೆಯಲ್ಲಿದ್ದಾಗ ಒಮ್ಮೆ ನಾನು ಬಿಎಸ್‍ವೈ ಅವರೊಂದಿಗೆ ಮಾತನಾಡಿದ್ದೆ. ಕೋವಿಡ್-19 ಹಿನ್ನೆಲೆಯಲ್ಲಿ ನಾವಿಬ್ಬರು ಒಂದೇ ಆಸ್ಪತ್ರೆಯಲ್ಲಿದ್ದ ವೇಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವೇಳೆ ದೂರವಾಣಿಯಲ್ಲಿ ಅವರ ಜತೆ ಮಾತನಾಡಿದ್ದೆವು. ಜೆಡಿಎಸ್‍ನವರಿಗೆ ಸ್ಪಷ್ಟ ನಿಲುವಿಲ್ಲ. ಅವರು ಯಾವಾಗ ಬೇಕೋ ಆಗ ಅವರನ್ನು ತಬ್ಬಿಕೊಳ್ಳುತ್ತಾರೆ'

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News