ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ, ಉಪ ಚುನಾವಣೆಗಳಿಗೆ ಮಾರ್ಗಸೂಚಿಗಳ ರಚನೆ

Update: 2020-09-15 16:48 GMT

ಬೆಂಗಳೂರು, ಸೆ.15: ಕೋವಿಡ್ 19 ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಹಾಗೂ ಉಪ ಚುನಾವಣೆ ಸಂದರ್ಭದಲ್ಲಿ ರಾಜ್ಯ ಚುನಾವಣಾ ಆಯೋಗವು ಚುನಾವಣಾ ಸಂದರ್ಭದಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಲು ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಮಾಣಿತ ಕಾರ್ಯನಿರ್ವಾಹಣಾ ಪದ್ಧತಿ(ಎಸ್‍ಒಪಿ) ಮಾರ್ಗಸೂಚಿಯನ್ನು ರಚಿಸಲಾಗಿದೆ.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಗಳು ಗರಿಷ್ಠ ಐದು ಜನ ಬೆಂಬಲಿಗರೊಂದಿಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ಮೂಲಕ ಪ್ರಚಾರ ಮಾಡಬಹುದಾಗಿದೆ. ಕೋವಿಡ್ ಸೋಂಕಿತ ವ್ಯಕ್ತಿಗಳು ಮತ ಚಲಾಯಿಸಲು ಹಕ್ಕುಳ್ಳವರಾಗಿದ್ದು, ಅವರಿಗೆ ಅಂಚೆ ಪತ್ರಗಳ ಮೂಲಕ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಚುನಾವಣಾ ಕಾರ್ಯದಲ್ಲಿ ನಿರತರಾಗಿರುವ ಎಲ್ಲ ಅಧಿಕಾರಿ ಸಿಬ್ಬಂದಿಯವರು ಅವಶ್ಯಕ ಸಾಮಗ್ರಿಗಳಾದ ಫೇಸ್‍ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಇತ್ಯಾದಿಗಳನ್ನು ಉಪಯೋಗಿಸಿಕೊಂಡು ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಿ ಚುನಾವಣೆ ನಡೆಸಲು ಅನುಕೂಲ ಕಲ್ಪಿಸಲಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಮಾರ್ಗಸೂಚಿಯಲ್ಲಿ ಏನೇನಿದೆ:

-ಚುನಾವಣಾ ಕರ್ತವ್ಯ ಸಂದರ್ಭದಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲರೂ ಸರಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಸಬೇಕು. ಪೇಸ್‍ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ನಿಂದ ಕೈ ತೊಳೆಯಬೇಕು, ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು.

-ಚುನಾವಣಾ ಕಾರ್ಯಕ್ಕೆ ಬಳಸುವ ಕೊಠಡಿಯನ್ನು ಪ್ರವೇಶಿಸುವ ಮುನ್ನ ಪ್ರತಿಯೊಬ್ಬರೂ ಕೈಗಳನ್ನು ಶುಚಿಗೊಳಿಸಬೇಕು ಹಾಗೂ ಥರ್ಮಲ್ ಸ್ಯಾನರ್ ನಿಂದ ಪರೀಕ್ಷಿಸಿಕೊಳ್ಳಬೇಕು.

-ಚುನಾವಣಾ ಕರ್ತವ್ಯ ಸಾಧ್ಯವಾದಷ್ಟು ವಿಶಾಲವಾದ ಕೊಠಡಿಯಲ್ಲಿ ನಿರ್ವಹಿಸಬೇಕು.

-ಚುನಾವಣಾ ಸಂಬಂಧಿಸಿದ ಫಾರಂಗಳು, ಕವರ್ ಗಳನ್ನು ಭದ್ರತಾ ಕೊಠಡಿಯಲ್ಲಿರಬೇಕು.

-ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಮೀಸಲು ಚುನಾವಣಾಧಿಕಾರಿಗೆ ಪ್ರತ್ಯೇಕವಾಗಿ ತರಬೇತಿ ನೀಡಬೇಕು.

-ನಾಮಪತ್ರ ಸ್ವೀಕೃತಿ ವೇಳೆ ಚುನಾವಣಾಧಿಕಾರಿಗಳು ತಮ್ಮ ಕೈಗಳನ್ನು ಸ್ಯಾನಿಟೈಸರ್‍ನಿಂದ ಶುಚಿಗೊಂಡು ಮುಖಕ್ಕೆ ಪೇಸ್‍ಮಾಸ್ಕ್ ಹಾಗೂ ಗ್ಲೌಸ್‍ಗಳನ್ನು ಖಡ್ಡಾಯವಾಗಿ ಧರಿಸಬೇಕು.

-ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿ ಹಾಗೂ ಅವರ ಒಬ್ಬ ಸೂಚಕರಷ್ಟೇ ಪ್ರವೇಶ ಪಡೆಯಬಹುದು.

-ಕೊರೋನ ಪಾಸಿಟಿವ್ ಇರುವ ಅಭ್ಯರ್ಥಿಗಳು ಸೂಚಕರ ಮೂಲಕ ನಾಮಪತ್ರ ಸಲ್ಲಿಸಬಹುದಾಗಿದೆ.

-ನಾಮಪತ್ರ ಪರಿಶೀಲನೆ ವೇಳೆ ಕ್ಷೇತ್ರವಾರು ಹಾಜರಿರುವ ಅಭ್ಯರ್ಥಿಗಳ ಸಮ್ಮುಖದಲ್ಲಿ ಮಾಡಬೇಕು.

-ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗರಿಷ್ಠ 5 ಜನ ಮೀರದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡಬಹುದಾಗಿದೆ.

-ಪ್ರಚಾರಕ್ಕಾಗಿ ಮುದ್ರಿಸುವ ಕರಪತ್ರಗಳನ್ನು ಹಂಚಿಕೆ ಮಾಡಬಹುದು.

-ಕೋವಿಡ್ 19 ಹಿನ್ನೆಲೆಯಲ್ಲಿ ಗುಂಪು ಗುಂಪಾಗಿ ಪ್ರಚಾರ ಮಾಡುವಂತಿಲ್ಲ

-ಕೋವಿಡ್ 19 ಪಾಸಿಟಿವ್ ಇರುವವರು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪ್ರಚಾರ ಮಾಡಬಹುದಾಗಿದೆ.

-ಸಭೆ-ಸಮಾರಂಭಗಳನ್ನು ನಡೆಸುವ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು.

-ಮತಗಟ್ಟೆಗಳನ್ನು 1 ಸಾವಿರ ಜನರಿಗೆ ಮೀಸಲಿಡಲಾಗಿದೆ.

-ಮತದಾನಕ್ಕೆ ಸಿದ್ದಪಡಿಸಿದ ಹಾಗೂ ಪಕ್ಕದ ಕೊಠಡಿಗಳನ್ನು ಶೇ.1 ರಷ್ಟು ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಿಸಬೇಕು.

-ಮಸ್ಟರಿಂಗ್ ದಿನ ಸಂಜೆ ಮತದಾನ ಸಿಬ್ಬಂದಿಗೆ ಉಳಿದುಕೊಳ್ಳಲು ಸ್ಯಾನಿಟೈಸ್ ಮಾಡಿದ ಪಕ್ಕದ ಕೊಠಡಿಗಳನ್ನು ನೀಡಲಾಗುತ್ತದೆ.

-ಮತಕೇಂದ್ರದಿಂದ 200 ಮೀಟರ್ ನಷ್ಟು 144 ಘೋಷಿಸಲಾಗುತ್ತದೆ. ಅದರ ಸುತ್ತಲಿನಲ್ಲಿ ಗುರುತಿನ ಚೀಟಿ ನೀಡಲು ಅವಕಾಶವಿರುತ್ತದೆ.

-ಆಯೋಗದ ನಿರ್ದೇಶನದಂತೆ ಆಯಾ ತಾಲ್ಲೂಕಿನ ಸರಕಾರಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಮತಗಟ್ಟೆ ಅಧಿಕಾರಿಯನ್ನಾಗಿ ನೇಮಕ ಮಾಡಲಾಗುವುದು.

-ಸಾಧ್ಯವಾದಷ್ಟು ಇ ತರಬೇತಿ ನೀಡಲಾಗುತ್ತದೆ.

-ಮತದಾರರು ಮತದಾನ ದಿನದಂದು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

-ಪುರುಷರು ಹಾಗೂ ಮಹಿಳೆಯರು ಪ್ರತ್ಯೇಕ ಸಾಲಿನಲ್ಲಿ ನಿಲ್ಲಬೇಕು ಹಾಗೂ ಮತಗಟ್ಟೆ ಪ್ರವೇಶಿಸುವ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ.

-ಮತಗಟ್ಟೆ ಏಜೆಂಟರು ನಿಗದಿತ ಸಮಯದಲ್ಲಿ ಮೀಸಲಿರಿಸಿದ ಆಸನದಲ್ಲಿ ಹಾಜರಾಗಬೇಕು

-ಕೊರೋನ ಸೋಂಕಿತರಿಗೆ ಅಂಚೆಮತಪತ್ರಗಳನ್ನು ನೀಡಲಾಗುತ್ತದೆ.

-ಮತಗಳ ಎಣಿಕೆಗಾಗಿ ಗೊತ್ತು ಮಾಡಿದ ಕೊಠಡಿಗಳನ್ನು ಪೂರ್ವವಾಗಿ ಸ್ಯಾನಿಟೈಸರ್ ಮಾಡಿರಬೇಕು ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು.

-ಎಣಿಕೆ ವೇಳೆ ಅಭ್ಯರ್ಥಿ ಹಾಗೂ ಏಜೆಂಟರಿಗೆ ಅಷ್ಟೇ ಪ್ರವೇಶವಿದೆ.

-ಎಣಿಕೆ ಮೇಲ್ವಿಚಾರಕರನ್ನು ಹಾಗೂ ಎಣಿಕೆ ಸಹಾಯಕರನ್ನು ನೇಮಿಸಿ, ಅವರಿಗೆ ತರಬೇತಿ ನೀಡಬೇಕು.

-ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಿಕೊಳ್ಳಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News