ಕೇಂದ್ರ ಸರಕಾರವು ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಲು ಮುಂದಾಗಿದೆ: ವೈಎಸ್‍ವಿ ದತ್ತ

Update: 2020-09-16 14:37 GMT

ಬೆಂಗಳೂರು, ಸೆ.16: ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವ ನೂತನ ಶಿಕ್ಷಣ ನೀತಿ(ಎನ್‍ಇಪಿ) ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದ್ದು, ಈ ನೀತಿಯ ಸಂಬಂಧ ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಚರ್ಚಿಸುವ ವ್ಯವದಾನ ಅಧಿಕಾರದಲ್ಲಿರುವವರಿಗೆ ಇಲ್ಲ ಎಂದು ಮಾಜಿ ಶಾಸಕ ವೈಎಸ್‍ವಿ ದತ್ತ ಅಭಿಪ್ರಾಯಪಟ್ಟಿದ್ದಾರೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಎನ್‍ಇಪಿ 2020 ವಿರೋಧಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳಿಂದ ಜಂಟಿಯಾಗಿ ಆಯೋಜಿಸಿದ್ದ ಆನ್‍ಲೈನ್ ವೆಬಿನಾರ್ ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರವು ಕೇಂದ್ರ ಸರಕಾರಕ್ಕೆ ಮಾತ್ರ ಸೇರಿದ್ದಲ್ಲ. ಈ ಕ್ಷೇತ್ರವು ಕೇಂದ್ರ ಮತ್ತು ರಾಜ್ಯ ಎರಡಕ್ಕೂ ಸೇರಿದ್ದಾಗಿದೆ ಎಂದು ಹೇಳಿದರು.

ಕೇಂದ್ರ ಸರಕಾರವು ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಲು ಮುಂದಾಗಿದೆ. ಸರಕಾರವು ಎನ್‍ಇಪಿ ಜಾರಿ ಮಾಡುವ ಮುನ್ನ ಜನಾಭಿಪ್ರಾಯ ಪಡೆಯಬೇಕಿತ್ತು. ಆದರೆ, ಯಾವುದೇ ಅಭಿಪ್ರಾಯ ಪಡೆಯಲು ಮುಂದಾಗುತ್ತಿಲ್ಲ ಹಾಗೂ ಸಂಘ-ಸಂಸ್ಥೆಗಳು ನೀಡಿರುವ ಅಭಿಪ್ರಾಯವನ್ನು ಸರಕಾರ ಪರಿಗಣಿಸುತ್ತಿಲ್ಲ ಎಂದು ಅವರು ಆಪಾದಿಸಿದರು.

ಭಾರತ ಬಹುತ್ವವನ್ನು ಅಳವಡಿಸಿಕೊಂಡಿರುವ ದೇಶವಾಗಿದ್ದು, ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಈ ವ್ಯವಸ್ಥೆಯಲ್ಲಿ ಕೇಂದ್ರವು ಯಜಮಾನನಲ್ಲ, ಮುಖ್ಯಸ್ಥ ಮಾತ್ರ. ಕೇಂದ್ರ ಸರಕಾರವು ಪ್ರಾದೇಶಿಕತೆಗೆ ಮಾನ್ಯತೆ ನೀಡಬೇಕು ಎಂದು ಅವರು ಪ್ರತಿಪಾದಿಸಿದರು.

ಕೇಂದ್ರ ಸರಕಾರವು ಸವಾರ್ಧಿಕಾರಿಯಂತೆ ತನ್ನ ನಿಲುವನ್ನು ಬಲವಂತವಾಗಿ ಹೇರಲು ಮುಂದಾಗಿದೆ. ಅದರ ಭಾಗವಾಗಿಯೇ ಈ ಶಿಕ್ಷಣ ನೀತಿಯಾಗಿದೆ. ಆದುದರಿಂದಾಗಿ ಸರಕಾರ ಯಾವುದೇ ಚರ್ಚೆಗಳಿಲ್ಲದೆ ಶಿಕ್ಷಣ ನೀತಿ ಮಾಡಿದ್ದು, ಅದರಲ್ಲಿ ಹಿಂದಿ ಮತ್ತು ಸಂಸ್ಕೃತವನ್ನು ತುರುಕಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ವಿವಿಧತೆಯಲ್ಲಿ ಏಕತೆ ಎಂದು ಪ್ರತಿಪಾದಿಸುವ ದೇಶದಲ್ಲಿ ಇದು ಅಪ್ರಜಾಸತ್ತಾತ್ಮಕ ನಡೆಯಾಗಿದೆ ಎಂದು ದತ್ತ ಹೇಳಿದರು.

ನೂತನ ಶಿಕ್ಷಣ ನೀತಿಯು ಅಂಗನವಾಡಿಗಳು, ಬಾಲವಾಡಿಗಳನ್ನು ಇಲ್ಲದಂತೆ ಮಾಡುತ್ತದೆ. ಅದರಿಂದ ಅಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರ ಪರಿಸ್ಥಿತಿ ಏನಾಗಬೇಕು ಎಂದ ಅವರು, ಗ್ರಾಮೀಣ ಪ್ರದೇಶದ ಶಿಕ್ಷಣವನ್ನು ಕೇಂದ್ರೀಕರಿಸಲು ಹೊರಟಿದ್ದಾರೆ. ಇಡೀ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರದ ಭಾಗವಾಗಿ ಈ ನೀತಿಯಾಗಿದ್ದು, ಇದನ್ನು ಕೇಂದ್ರ ಸರಕಾರ ತಿರಸ್ಕರಿಸಬೇಕು ಎಂದರು.

ಕಾರ್ಮಿಕ ಮುಖಂಡ ಸಿದ್ದನಗೌಡ ಪಾಟೀಲ ಮಾತನಾಡಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರವು ಈ ನೀತಿಯ ಮೂಲಕ ಶಿಕ್ಷಣದ ಖಾಸಗೀಕರಣ, ಕೇಸರೀಕರಣ ಹಾಗೂ ಕಾರ್ಪೋರೇಟರೀಕರಣ ಮಾಡಲು ಮುಂದಾಗಿದ್ದಾರೆ. ಅದಕ್ಕೆ ಮುಖವಾಡ ತೊಡಿಸಿ ಸಾಮಾನ್ಯ ಜನರಿಗೆ ತೋರಿಸುತ್ತಿದ್ದಾರೆ ಎಂದು ದೂರಿದರು.

ವೆಬಿನಾರ್ ನಲ್ಲಿ ಎನ್‍ಇಪಿ ಮತ್ತು ಹೆಣ್ಣು ಮಕ್ಕಳ ಶಿಕ್ಷಣ ಕುರಿತು ಚಿಂತಕಿ ಕೆ.ನೀಲಾ, ಉನ್ನತ ಶಿಕ್ಷಣದ ಮೇಲೆ ಎನ್‍ಇಪಿಯ ಪರಿಣಾಮಗಳು ಮತ್ತು ಪ್ರತಿರೋಧ ಕುರಿತು ಪ್ರೊ.ಡಿ.ಡೊಮೆನಿಕ್, ಎನ್‍ಇಪಿ ಮತ್ತು ಸಾಮಾಜಿಕ ನ್ಯಾಯ ಕುರಿತು ವಕೀಲ ಅನಂತ್‍ ನಾಯ್ಕ್, ಎನ್‍ಇಪಿ ವಿರುದ್ಧ ಐಕ್ಯ ಹೋರಾಟದ ಕುರಿತು ಚಿಂತಕ ಕ್ಲಿಪ್ಟಾನ್ ಡಿ’ರೋಜಾರಿಯೋ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News