ಕೊರೋನ ಸಾಂಕ್ರಾಮಿಕ 3.70 ಕೋಟಿ ಜನರನ್ನು ಕಡುಬಡತನಕ್ಕೆ ತಳ್ಳಿದೆ:ಗೇಟ್ಸ್ ಫೌಂಡೇಷನ್

Update: 2020-09-16 17:12 GMT

ಹೊಸದಿಲ್ಲಿ,ಸೆ.16: ಕೊರೋನ ವೈರಸ್ ಸಾಂಕ್ರಾಮಿಕವು ಸುಮಾರು 3.70 ಕೋಟಿ ಜನರನ್ನು ಕಡುಬಡತನಕ್ಕೆ ತಳ್ಳಿದೆ, ಜೊತೆಗೆ ಕಳೆದ ಹಲವಾರು ದಶಕಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಧಿಸಲಾಗಿದ್ದ ಪ್ರಗತಿಗೆ ಹಿನ್ನಡೆಯನ್ನುಂಟು ಮಾಡಿದೆ ಎಂದು ಅಮೆರಿಕದ ಬಿಲ್ ಆ್ಯಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್ ತನ್ನ ವರದಿಯಲ್ಲಿ ಹೇಳಿದೆ.

ಆಯಾ ದೇಶಗಳಲ್ಲಿ ರೋಗದ ಹರಡುವಿಕೆಯ ಪ್ರಮಾಣ ಏನೇ ಆಗಿರಲಿ,ಈ ಸಾಂಕ್ರಾಮಿಕವು ಪ್ರತಿಯೊಂದು ದೇಶದ ಆರ್ಥಿಕತೆಗೂ ಭಾರೀ ಹೊಡೆತವನ್ನು ನೀಡಿದೆ ಎಂದು ಅದು ಹೇಳಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಮುನ್ನಂದಾಜನ್ನು ಉಲ್ಲೇಖಿಸಿರುವ ವರದಿಯು,ವಿಶ್ವಾದ್ಯಂತ ಬೆಳವಣಿಗೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ 18 ಲಕ್ಷ ಕೋಟಿ ಡಾಲರ್‌ಗಳನ್ನು ವ್ಯಯಿಸಲಾಗಿದ್ದರೂ 2021ರ ಅಂತ್ಯದ ವೇಳೆಗೆ ಜಾಗತಿಕ ಆರ್ಥಿಕತೆಯು 12 ಲಕ್ಷ ಕೋಟಿ ಡಾ.ಗಳ ಅಥವಾ ಹೆಚ್ಚಿನ ನಷ್ಟವನ್ನು ಅನುಭವಿಸಲಿದೆ ಎಂದು ತಿಳಿಸಿದೆ.

 ಗೇಟ್ಸ್ ಪ್ರತಿಷ್ಠಾನದ ಈ ವಾರ್ಷಿಕ ವರದಿಯು ಪ್ರಾಥಮಿಕವಾಗಿ ಬಡತನ ನಿವಾರಣೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಪ್ರಗತಿಯನ್ನು ವಿಶ್ಲೇಷಿಸುತ್ತದೆ.

ಕೊರೋನ ವೈರಸ್ ಬಿಕ್ಕಟ್ಟಿನ ನಡುವೆಯೂ 20 ಕೋ.ಮಹಿಳೆಯರಿಗೆ ನಗದು ವರ್ಗಾವಣೆ ಮಾಡಲು ಭಾರತಕ್ಕೆ ಸಾಧ್ಯವಾಗಿದ್ದು,ಇದು ಹಸಿವು ಮತ್ತು ಬಡತನದ ಮೇಲೆ ಸಾಂಕ್ರಾಮಿಕದ ಪರಿಣಾಮವನ್ನು ತಗ್ಗಿಸಿದ್ದು ಮಾತ್ರವಲ್ಲ,ಮಹಿಳೆಯರ ಸಬಲೀಕರಣದ ದೇಶದ ದೀರ್ಘಾವಧಿಯ ಗುರಿಗೆ ಹೆಚ್ಚಿನ ಒತ್ತನ್ನು ನೀಡಿದೆ ಎಂದು ವರದಿಯು ತಿಳಿಸಿದೆ.

 ಭಾರತದಲ್ಲಿಯ ಆಧಾರ್ ಡಿಜಿಟಲ್ ಹಣಕಾಸು ವ್ಯವಸ್ಥೆಯು ದೇಶದ ‘ಬೃಹತ್ ಆಸ್ತಿ ’ಯಾಗಿದೆ ಎನ್ನುವುದು ಇನ್ನೊಮ್ಮೆ ಸಾಬೀತಾಗಿದೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಪ್ರತಿಷ್ಠಾನದ ಸಹ-ಅಧ್ಯಕ್ಷ ಬಿಲ್ ಗೇಟ್ಸ್ ಅವರು,ಡಿಜಿಟಲ್ ನಗದು ವರ್ಗಾವಣೆಗಳ ಮೂಲಕ ಹಣ ಪಾವತಿ ವ್ಯವಸ್ಥೆಯು ಅದ್ಭುತ ವಿಷಯವಾಗಿದೆ ಮತ್ತು ಇತರ ಯಾವುದೇ ದೇಶವು ಭಾರತದಷ್ಟು ಬೃಹತ್ ಪ್ರಮಾಣದಲ್ಲಿ ಈ ಕಾರ್ಯವನ್ನು ಸಾಧಿಸಿಲ್ಲ ಎಂದರು.

 ಕೋವಿಡ್-19ರಿಂದಾಗಿ ಕೆಲವೇ ತಿಂಗಳುಗಳಲ್ಲಿ ಕಡುಬಡತನದಲ್ಲಿ ಶೇ.7ರಷ್ಟು ಏರಿಕೆಯಾಗಿದೆ ಮತ್ತು ಇದು 20 ವರ್ಷಗಳ ಪ್ರಗತಿಗೆ ಅಂತ್ಯ ಹಾಡಿದೆ. ಇದೇ ವೇಳೆ ನಾವು ಸಾಧಿಸಿದ್ದ ಪ್ರಗತಿಯು ಎಷ್ಟೊಂದು ದುರ್ಬಲವಾಗಿತ್ತು ಎನ್ನುವುದನ್ನೂ ಅದು ಬಯಲುಗೊಳಿಸಿದೆ. ಕಳೆದ 20 ವರ್ಷಗಳಿಂದ ಕಡುಬಡವರ ಸಂಖ್ಯೆ ಇಳಿಮುಖವಾಗುತ್ತಿತ್ತು,ಆದರೆ ಈ ಬಿಕ್ಕಟ್ಟು ಇನ್ನೂ 3.70 ಕೋ.ಜನರನ್ನು ಕಡುಬಡವರನ್ನಾಗಿಸಿದೆ ಎಂದಿರುವ ವರದಿಯು,ಕೋವಿಡ್ ಬಿಕ್ಕಟ್ಟು ಗರ್ಭಿಣಿಯರ ಮತ್ತು ಬಾಣಂತಿಯರ ಆರೋಗ್ಯ ರಕ್ಷಣೆ ವ್ಯವಸ್ಥೆಗೆ ವ್ಯತ್ಯಯವನ್ನುಂಟು ಮಾಡಿರುವುದರಿಂದ ಈ ಸಾಂಕ್ರಾಮಿಕದಿಂದ ಪುರುಷರಿಗಿಂತ ಹೆಚ್ಚು ಮಹಿಳೆಯರ ನರಳಾಟ ಮತ್ತು ಸಾವುಗಳು ಉಂಟಾಗುತ್ತಿವೆ ಎಂದಿದೆ.

ಸಾಂಕ್ರಾಮಿಕವು ಪ್ರತಿರಕ್ಷಣೆಯ ನಿಯತ ಕಾರ್ಯಕ್ರಮದ ಮೇಲೆ ಹೇಗೆ ಪರಿಣಾಮ ಬೀರಿದೆ ಎನ್ನುವದನ್ನು ವಿವರಿಸಿರುವ ವರದಿಯು,ಆರೋಗ್ಯ ವ್ಯವಸ್ಥೆಗಳ ಕಾರ್ಯ ನಿರ್ವಹಣೆಯನ್ನು ಸೂಚಿಸುವ ಲಸಿಕೆ ನೀಡಿಕೆ ಪ್ರಮಾಣವು 1990ರ ದಶಕದಲ್ಲಿದ್ದ ಮಟ್ಟಕ್ಕೆ ಕುಸಿದಿದೆ. ಅಂದರೆ ನಾವು 25 ವಾರಗಳಲ್ಲಿ 25ವರ್ಷಗಳಷ್ಟು ಹಿಂದಕ್ಕೆ ಸಾಗಿದ್ದೇವೆ ಎಂದಿದೆ. ಬಿಕ್ಕಟ್ಟು ಶಿಕ್ಷಣ ವ್ಯವಸ್ಥೆಯ ಮೇಲೂ ತೀವ್ರ ಪರಿಣಾಮವನ್ನುಂಟು ಮಾಡಿದೆ ಎಂದು ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News