ಯುದ್ಧದ ಹೊತ್ತಲ್ಲಿ ಸೈನಿಕರ ಮುಷ್ಕರ ಎಷ್ಟು ಸರಿ?

Update: 2020-09-17 04:42 GMT

ಯುದ್ಧ ಘೋಷಣೆಯಾಗುವ ಸಂದರ್ಭದಲ್ಲಿ ಸೈನಿಕರು ತಮ್ಮ ಬೇಡಿಕೆ ಮುಂದಿಟ್ಟು ಮುಷ್ಕರ ಹೂಡಿದರೆ ದೇಶದ ಸ್ಥಿತಿ ಏನಾಗಬೇಕು? ದೇಶಾದ್ಯಂತ ಅರಾಜಕತೆ ನಿರ್ಮಾಣವಾದಾಗ ಪೊಲೀಸರು ಮುಷ್ಕರ ಹೂಡಿದರೆ? ಎಲ್ಲ ಪಕ್ಕಕ್ಕಿಡೋಣ....ಬರೇ ಒಂದು ವಾರ ಈ ದೇಶದ ಪೌರ ಕಾರ್ಮಿಕರೆಲ್ಲರೂ ಒಂದಾಗಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ಹೂಡಿದರೆ? ನಮ್ಮ ದೈನಂದಿನ ಬದುಕು ಏನಾದೀತು ಎನ್ನುವುದರ ಕುರಿತಂತೆ ಒಮ್ಮೆ ಯೋಚಿಸೋಣ. ಸದ್ಯಕ್ಕೆ ಕೊರೋನ ವಿರುದ್ಧ ದೇಶ ಪರೋಕ್ಷವಾಗಿ ಯುದ್ಧವನ್ನೇ ಮಾಡುತ್ತಿದೆ. ಈ ಯುದ್ಧದಲ್ಲಿ ಅಪಾರ ಪ್ರಮಾಣದ ಕಾಲಾಳುಗಳು ಬಲಿಯಾಗಿದ್ದಾರೆ. ಮುಖ್ಯವಾಗಿ ವಲಸೆ ಕಾರ್ಮಿಕರ ಬದುಕು ಛಿದ್ರವಾಗಿದೆ. ಆರ್ಥಿಕತೆ ಸರ್ವನಾಶವಾಗಿದೆ. ಯುದ್ಧದಲ್ಲಿ ದೇಶ ಭಾಗಶಃ ಸೋತಿದೆ. ಕಾರಣ ಸ್ಪಷ್ಟ. ಯುದ್ಧ ಘೋಷಣೆಯಾದ ಬಳಿಕ ಕತ್ತಿ, ಕುದುರೆಗಳನ್ನು ಹುಡುಕುವ ಸ್ಥಿತಿ ಭಾರತದ್ದು. ಆರೋಗ್ಯ ಕ್ಷೇತ್ರವನ್ನು ಸರಕಾರ ನಿರ್ಲಕ್ಷಿಸಿದ್ದು ಕೊರೋನದಂತಹ ಒಂದು ನೆಗಡಿ ರೂಪದ ಸಾಂಕ್ರಾಮಿಕ ಕಾಯಿಲೆಯ ಮುಂದೆ ಸೋಲನ್ನು ಕಾಣಬೇಕಾಯಿತು. ಅದೇನೇ ಇರಲಿ, ಸೋತಿದ್ದೇವೆ ಎಂದು ಕೈ ಚೆಲ್ಲಿ ಕೂರುವಂತಿಲ್ಲ. ಯುದ್ಧವನ್ನು ಇರುವ ಸವಲತ್ತುಗಳ ಜೊತೆಗೆ ನಾವು ಮುಂದುವರಿಸಲೇಬೇಕಾಗಿದೆ. ಇಂತಹ ಹೊತ್ತಿನಲ್ಲಿ ರಾಜ್ಯದ ಸರಕಾರಿ ವೈದ್ಯರು ತಮ್ಮ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶಸ್ತ್ರ ಕೆಳಗಿಡಲು ಮುಂದಾಗಿದ್ದಾರೆ. ಈಗಾಗಲೇ ಕೊರೋನವನ್ನು ಎದುರಿಸುವಲ್ಲಿ ವಿಫಲವಾಗಿ ಕಂಗೆಟ್ಟಿರುವ ಸರಕಾರವು ವೈದ್ಯರ ಈ ನಿರ್ಧಾರದಿಂದ ಅಕ್ಷರಶಃ ಕಂಗಾಲಾಗಿದೆ. ಸರಕಾರಿ ಆಸ್ಪತ್ರೆಗಳನ್ನೇ ಆಶ್ರಯಿಸಿರುವ ಜನಸಾಮಾನ್ಯರೂ ಈ ಮುಷ್ಕರ ಬೆದರಿಕೆಯಿಂದ ಆತಂಕಿತರಾಗಿದ್ದಾರೆ. ಸರಕಾರಿ ವೈದ್ಯರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಖಾಸಗಿ ಆಸ್ಪತ್ರೆಗಳ ಲಾಬಿಗಳಿಗೆ ಮಣಿಯುತ್ತಾ ಸರಕಾರ, ತನ್ನದೇ ಆಸ್ಪತ್ರೆಗಳನ್ನು ನಿರ್ಲಕ್ಷಿಸುತ್ತಾ ಬಂದಿದೆ. ಸರಕಾರಿ ಆಸ್ಪತ್ರೆಗಳು ಹತ್ತು ಹಲವು ಮೂಲಭೂತ ಸೌಕರ್ಯಗಳ ಕೊರತೆಗಳಿಂದ ನರಳುತ್ತಿವೆ. ಹಾಗೆಯೇ ವೈದ್ಯರೂ ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವುದಕ್ಕೆ ಹಿಂಜರಿಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಜನಸಾಮಾನ್ಯರ ಆಕ್ರೋಶಕ್ಕೆ ಸರಕಾರಿ ಆಸ್ಪತ್ರೆಗಳ ವೈದ್ಯರು ಸುಲಭದ ತುತ್ತಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವೈದ್ಯರು ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಡಬಾರದು ಎಂದು ಹೇಳುವುದು ತಪ್ಪಾಗುತ್ತದೆ. ಸರಕಾರ ಸ್ಪಂದಿಸದೇ ಇದ್ದಾಗ ಮುಷ್ಕರ ಹೂಡುವುದು ವೈದ್ಯರಿಗಿರುವ ಪ್ರಜಾಸತ್ತಾತ್ಮಕ ಮಾರ್ಗ. ಆದರೆ ಯುದ್ಧ ಕಾಲವನ್ನು ಬಳಸಿಕೊಂಡು ಸರಕಾರವನ್ನು ‘ಬ್ಲಾಕ್ ಮೇಲ್’ ಮಾಡುವುದು ವೈದ್ಯ ವೃತ್ತಿಗೆ ಬಗೆಯುವ ದ್ರೋಹವೇ ಸರಿ. ಯಾಕೆಂದರೆ ಇವರು ತಮ್ಮ ಮುಷ್ಕರಕ್ಕೆ ಒತ್ತೆಯಾಳಾಗಿಸಿರುವುದು ಕೊರೋನ ಸೋಂಕಿತ ಲಕ್ಷಾಂತರ ಬಡ ಜನರನ್ನು. ಕೊರೋನದ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಜನರನ್ನು ಸುಲಿಯುತ್ತಿರುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಜನಸಾಮಾನ್ಯರು ಕೊರೋನಕ್ಕೆ ಸಂಬಂಧಿಸಿ ಸರಕಾರಿ ಆಸ್ಪತ್ರೆಗಳನ್ನೇ ಹೆಚ್ಚು ಅವಲಂಬಿಸಿದ್ದಾರೆ. ಈಗ ವೈದ್ಯರೇನಾದರೂ ಅಸಹಕಾರ ಮುಷ್ಕರ ನಡೆಸಿದರೆ, ಜನಸಾಮಾನ್ಯರ ಬದುಕು ಇನ್ನಷ್ಟು ಭೀಕರವಾಗಿ, ಕೊರೋನ ಕೈ ಮೀರಿ ರಾಜ್ಯವನ್ನು ಮಾತ್ರವಲ್ಲ, ದೇಶವನ್ನೇ ಕಂಗೆಡಿಸಿ ಬಿಡಬಹುದು. ಇದು ಸ್ವತಃ ವೈದ್ಯರಿಗೆ ತಿಳಿಯದ ಸಂಗತಿಯೇನೂ ಅಲ್ಲ. ರಸ್ತೆಯಲ್ಲಿ ಅಪಘಾತದಲ್ಲಿ ಗಾಯಗೊಂಡು ಸಹಾಯಕ್ಕಾಗಿ ಅಂಗಲಾಚುತ್ತಿರುವ ವ್ಯಕ್ತಿಯನ್ನು ನಾವು ನೋಡಿಯೂ ನೋಡದಂತೆ ಹೋದರೆ ಎಷ್ಟು ಅಮಾನವೀಯವೋ, ಅದಕ್ಕಿಂತಲೂ ಕ್ರೌರ್ಯದಿಂದ ಕೂಡಿದ ನಡೆ ವೈದ್ಯರದ್ದು. ಲಕ್ಷಾಂತರ ಜನರು ಪ್ರಾಣ ಭಯದಿಂದ ಒದ್ದಾಡುತ್ತಿರುವಾಗ, ತಕ್ಷಣ ಅವರನ್ನು ರಕ್ಷಿಸುವುದು ವೈದ್ಯರ ಕರ್ತವ್ಯ. ಆದರೆ ಇಲ್ಲಿ ಅವರ ಹಣೆಗೆ ಪಿಸ್ತೂಲ್ ಇಟ್ಟು ವೈದ್ಯರು ಸರಕಾರದ ಮುಂದೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸುತ್ತಿದ್ದಾರೆ.

ಈ ಸಂಕಷ್ಟದ ಹೊತ್ತಿನಲ್ಲಿ ವೈದ್ಯರು ತಮ್ಮ ವೇತನ ಪರಿಷ್ಕರಣೆಯ ಬೇಡಿಕೆಯನ್ನು ಇಟ್ಟಿದ್ದಾರೆ. ಎರಡು ತಿಂಗಳ ಲಾಕ್‌ಡೌನ್‌ನಿಂದಾಗಿ ಇಡೀ ದೇಶ ಆರ್ಥಿಕವಾಗಿ ದಿವಾಳಿಯೆದ್ದಿದೆ. ಲಕ್ಷಾಂತರ ಕಾರ್ಮಿಕರು ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ. ವಿವಿಧ ಕಂಪೆನಿಗಳು ತಮ್ಮಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಕಿತ್ತು ಹಾಕುತ್ತಿವೆ. ಎಲ್ಲ ವಲಯಗಳಲ್ಲೂ ಇದು ನಡೆಯುತ್ತಿವೆ. ಸರಕಾರಿ ಸಂಸ್ಥೆಗಳೇ ಒಂದೊಂದಾಗಿ ಮುಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರು ತಮ್ಮ ವೇತನವನ್ನು ಪರಿಷ್ಕರಣೆ ಮಾಡಬೇಕು ಎಂದು ಕೇಳುವುದು ಎಷ್ಟು ಸರಿ? ರಾಜ್ಯ ಸರಕಾರ ತನಗೆ ಸಿಗಬೇಕಾದ ಜಿಎಸ್‌ಟಿ ತೆರಿಗೆಯ ಪರಿಹಾರ ಹಣ ಸಿಗದೆ, ಆರ್‌ಬಿಐ ಬಳಿ ಸಾಲ ತೆಗೆದುಕೊಳ್ಳಲು ಮುಂದಾಗಿದೆ. ಹೀಗಿರುವಾಗ, ವೈದ್ಯರ ವೇತನ ಪರಿಷ್ಕರಣೆಗೆ ಒತ್ತಾಯಿಸಿದರೆ, ಅದಕ್ಕೆ ಬೇಕಾದ ಹಣ ಹೊಂದಿಸುವುದು ಯಾವ ಮೂಲದಿಂದ? ಈ ಬೇಡಿಕೆಯ ಜೊತೆಗೆ, ಕೊರೋನ ಅವಧಿಯಲ್ಲಿ ಮೃತಪಟ್ಟಿರುವ ವೈದ್ಯರು, ಸಿಬ್ಬಂದಿಗೆ ಕೊರೋನ ಸೋಂಕು ದೃಢಪಡದಿದ್ದರೂ ಪರಿಹಾರ ನೀಡಬೇಕು, ವೈದ್ಯರ ಮೇಲೆ ಆರೋಪ ಬಂದಾಗ ಇಲಾಖೆ ಹಂತದಲ್ಲಿ ತನಿಖೆ ನಡೆಸಿ ಸಾಬೀತಾದರೆ ಮಾತ್ರ ಅಮಾನತು ಮಾಡಬೇಕು ಎಂಬ ಬೇಡಿಕೆಗಳನ್ನೂ ಮುಂದಿಟ್ಟಿದೆ. ಇಂತಹ ಬೇಡಿಕೆಗಳನ್ನು ಇನ್ನಿತರ ಇಲಾಖೆಗಳ ಸಿಬ್ಬಂದಿ ಸರಕಾರದ ಮುಂದೆ ಬೇಡಿಕೆಯಾಗಿ ಇಟ್ಟರೆ ಸರಕಾರ ಏನು ಮಾಡಬೇಕು? ಕೊರೋನ ಸೋಂಕು ದೃಢ ಪಡದಿದ್ದರೂ ಪರಿಹಾರ ನೀಡಬೇಕು ಎಂಬ ಬೇಡಿಕೆ ಇಡುವ ಅರ್ಹತೆ ಯಾರಿಗಾದರೂ ಇದ್ದರೆ, ಅದು ಪೌರಕಾರ್ಮಿಕರಿಗೆ ಮಾತ್ರ. ತನಿಖೆ ನಡೆದು, ಅಪರಾಧ ಸಾಬೀತಾದ ಬಳಿಕ ಅಮಾನತು ಮಾಡಬೇಕು ಎನ್ನುವ ವೈದ್ಯರ ಬೇಡಿಕೆಯೂ ಅರ್ಥವಿಲ್ಲದ್ದು. ಒಬ್ಬ ಅಪರಾಧ ಮಾಡಿದ್ದರೆ, ಅವನನ್ನು ಅದೇ ಸ್ಥಾನದಲ್ಲಿ ಉಳಿಸಿ ತನಿಖೆ ನಡೆಸುವುದು ತನಿಖೆಯ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ. ವೈದ್ಯಕೀಯ ಸೇವೆ ಅತ್ಯಂತ ಮಹತ್ವದ್ದು ಮಾತ್ರವಲ್ಲ, ಸೂಕ್ಷ್ಮವಾದುದು ಕೂಡ. ಒಬ್ಬ ಆರೋಪಿಯ ಕೈಯಲ್ಲಿ ಸೇವೆ ಮಾಡಿಸುವುದು ಯಾವ ರೀತಿಯಲ್ಲೂ ವೈದ್ಯಕೀಯ ವೌಲ್ಯಗಳನ್ನು ಎತ್ತಿ ಹಿಡಿಯುವುದಿಲ್ಲ. ತನಿಖೆ ಮುಗಿದು ಹೊರ ಬೀಳುವಾಗ ವೈದ್ಯನ ಸೇವಾವಧಿಯೇ ಮುಗಿಯಬಹುದು. ಅಮಾನತಿನ ಬಳಿಕ ಆತ ನಿರಪರಾಧಿ ಎಂದು ಗೊತ್ತಾದರೆ ಆತನಿಗೆ ಅಮಾನತಿನ ಸಂದರ್ಭದ ಎಲ್ಲ ವೇತನ ಸೌಲಭ್ಯಗಳನ್ನು ನೀಡಬೇಕು ಎಂದು ಕೇಳುವುದು ನ್ಯಾಯಯುತ. ಇದು ಬಿಟ್ಟು ತನಿಖೆಗೆ ಅರ್ಹನಾದ ವೈದ್ಯನನ್ನು ಅಮಾನತು ಮಾಡಬಾರದು ಎನ್ನುವುದು ಪರೋಕ್ಷವಾಗಿ ಭ್ರಷ್ಟರ ಬೆನ್ನಿಗೆ ವೈದ್ಯಕೀಯ ಸಂಘ ನಿಂತಂತೆಯೇ ಸರಿ.

ಇದು ಯುದ್ಧಕಾಲ ಎಂದು ಭಾವಿಸಿ ವೈದ್ಯರು ತಮ್ಮ ಮುಷ್ಕರವನ್ನು ತಕ್ಷಣ ಕೈ ಬಿಡಬೇಕು. ಸದ್ಯದ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸರಕಾರಕ್ಕೆ ಒತ್ತಡಗಳನ್ನು ಹೇರದೆ, ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ತಮ್ಮ ಮುಷ್ಕರವನ್ನು ಘೋಷಿಸಬೇಕು. ಹಾಗೆಯೇ ಅಸಂಗತ ಬೇಡಿಕೆಗಳನ್ನು ಕೈ ಬಿಟ್ಟು ವೈದ್ಯಕೀಯ ಕ್ಷೇತ್ರಕ್ಕಿರುವ ಘನತೆಯನ್ನು ಎತ್ತಿ ಹಿಡಿಯಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News