ಚೀನಾದ ಸೈನಿಕರಿಗೆ ಭಾರತೀಯ ಸೇನಾ ಪಡೆ ಸೂಕ್ತ ಉತ್ತರ ನೀಡಿದೆ: ರಾಜನಾಥ್ ಸಿಂಗ್

Update: 2020-09-17 15:04 GMT

ಹೊಸದಿಲ್ಲಿ, ಸೆ.17: ಲಡಾಖ್‌ ನಲ್ಲಿ ಭಾರತದ ಸೇನೆ ಗಸ್ತು ತಿರುಗುವುದನ್ನು ಜಗತ್ತಿನ ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಲಡಾಕ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನಾದೊಂದಿಗಿನ ಬಿಕ್ಕಟ್ಟಿನ ಬಗ್ಗೆ ರಾಜ್ಯಸಭೆಯಲ್ಲಿ ವಿಪಕ್ಷಗಳ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಭಾರತೀಯ ಯೋಧರು ಸಾಂಪ್ರದಾಯಿಕ ಸೇನಾ ನೆಲೆಯಲ್ಲಿ ಗಸ್ತು ತಿರುಗುವುದಕ್ಕೆ ಚೀನಾದ ಸೇನೆ ಅವಕಾಶ ನೀಡುತ್ತಿಲ್ಲವೇ ಎಂಬ ವಿಪಕ್ಷದ ಪ್ರಶ್ನೆಗೆ ಉತ್ತರಿಸಿದ ಸಿಂಗ್, ಚೀನಾದೊಂದಿಗಿನ ಸಂಘರ್ಷಕ್ಕೆ ಇದುವೇ ಕಾರಣ ಎಂದರು. ಬಿಕ್ಕಟ್ಟಿನ ಮೂಲಕೇಂದ್ರವಾಗಿರುವ ಪೂರ್ವ ಲಡಾಖ್‌ನಲ್ಲಿ ಗಸ್ತು ತಿರುಗುವ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದವರು ವಿಪಕ್ಷಗಳಿಗೆ ಭರವಸೆ ನೀಡಿದರು.

ಕಾಂಗ್ರೆಸ್ ಸದಸ್ಯ ಎಕೆ ಆ್ಯಂಟನಿ ಈ ಪ್ರಶ್ನೆ ಎತ್ತಿದ್ದರು. ಇದೊಂದು ಸೂಕ್ಷ್ಮ ವಿಷಯವಾಗಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಸದನವು ಪ್ರಕರಣದ ಸೂಕ್ಷ್ಮತೆಯನ್ನು ಅರಿತುಕೊಂಡಿದೆ ಎಂದು ಭಾವಿಸುತ್ತೇನೆ. ಗಸ್ತು ತಿರುಗುವ ಪ್ರಕ್ರಿಯೆಯ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು ಜಗತ್ತಿನ ಯಾವ ಶಕ್ತಿಗೂ ಇದನ್ನು ತಡೆಯಲು ಸಾಧ್ಯವಿಲ್ಲ ಎಂದು ಸಿಂಗ್ ಉತ್ತರಿಸಿದರು.

ನಾವು ಯುದ್ಧ ಬಯಸುತ್ತಿಲ್ಲ. ಯುದ್ಧ ಆರಂಭಿಸುವುದು ನಮ್ಮ ಕೈಯಲ್ಲಿದ್ದರೂ ಯುದ್ಧ ಮುಗಿಸುವುದು ನಮ್ಮ ಕೈಯಲ್ಲಿಲ್ಲ. ಭಾರತ ಯಾರಿಗೂ ತಲೆಬಾಗುವುದಿಲ್ಲ, ಇತರರು ತಲೆಬಾಗಬೇಕೆಂದು ಬಯಸುವುದೂ ಇಲ್ಲ. ಆದರೆ ನಮ್ಮ ಸಾರ್ವಭೌಮತೆಗೆ ಧಕ್ಕೆಯಾಗಲು ಬಿಡುವುದಿಲ್ಲ ಎಂದು ರಾಜನಾಥ್ ಸಿಂಗ್ ಉತ್ತರಿಸಿದರು.

ಸರಕಾರದ ಪ್ರಕಾರ ಸಾರ್ವಭೌಮತೆಯ ರಕ್ಷಣೆ ಎಂದರೇನು ? ಲಡಾಖ್ ಗಡಿಯಲ್ಲಿ ಎಪ್ರಿಲ್‌ಗೂ ಹಿಂದೆ ಇದ್ದ ಸ್ಥಿತಿ ಕಾಯ್ದುಕೊಳ್ಳಲಾಗಿದೆಯೇ? ಇದನ್ನು ರಕ್ಷಣಾ ಸಚಿವರು ಸ್ಪಷ್ಟಪಡಿಸಬೇಕು . ಗಲ್ವಾನ್ ಕಣಿವೆ ವಿವಾದಾಸ್ಪದ ಪ್ರದೇಶವಾಗಿರಲಿಲ್ಲ. ಆದರೆ ಅಲ್ಲಿ ಕೂಡಾ ನಮ್ಮ ಯೋಧರಿಗೆ ಗಸ್ತು ತಿರುಗಲು ಅವಕಾಶವಿಲ್ಲ. ಫಿಂಗರ್ 8 ಪ್ರದೇಶದಲ್ಲೂ ನಮ್ಮ ಸೇನೆ ಗಸ್ತು ತಿರುಗುತ್ತಿತ್ತು. ಈ ಹಿಂದಿನಂತೆಯೇ ಸಂಪೂರ್ಣ ಗಡಿಭಾಗದಲ್ಲಿ ಸೇನೆ ಗಸ್ತು ತಿರುಗಲು ಸಾಧ್ಯವಾಗುವಂತಹ ಪರಿಸ್ಥಿತಿ ನೆಲೆಸಬೇಕು ಎಂದು ಆ್ಯಂಟನಿ ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷ ಸರಕಾರದೊಂದಿಗೆ ನಿಲ್ಲಲಿದೆ . ಆದರೆ ಎಪ್ರಿಲ್ ತಿಂಗಳಿಗೂ ಮೊದಲು ನಮ್ಮ ಹಿಡಿತದಲ್ಲಿದ್ದ ಪ್ರದೇಶಗಳ ಮೇಲೆ ಸೇನೆ ಹಿಡಿತ ಸಾಧಿಸಬೇಕು ಎಂದು ಹಿರಿಯ ಮುಖಂಡ ಗುಲಾಂ ನಬಿ ಆಝಾದ್ ಹೇಳಿದರು. ಚೀನಾದ ವಿಷಯದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕು ಎಂದು ಬಿಜೆಡಿ ಸಂಸದ ಪ್ರಸನ್ನ ಆಚಾರ್ಯ ಸರಕಾರವನ್ನು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News