ಡ್ರಗ್ಸ್ ದಂಧೆಯಲ್ಲಿ ಸರಕಾರದಲ್ಲಿರುವವರು ಇರಬಹುದು: ಮಾಜಿ ಸಿಎಂ ಕುಮಾರಸ್ವಾಮಿ

Update: 2020-09-17 14:39 GMT

ಬೆಂಗಳೂರು, ಸೆ. 17: 'ಮಾದಕ ದ್ರವ್ಯ(ಡ್ರಗ್ಸ್) ದಂಧೆಯ ಬಗ್ಗೆ ದೊಡ್ಡಮಟ್ಟದ ತನಿಖೆಯಾದರೆ ಮಾತ್ರ ತಾರ್ಕಿಕ ಅಂತ್ಯ ದೊರೆಯಲು ಸಾಧ್ಯ. ಇಲ್ಲವಾದರೆ ಇನ್ನು 15 ದಿನದಲ್ಲಿ ಇದು ಕೋಲ್ಡ್ ಸ್ಟೋರೇಜ್ ಸೇರಿ ಸತ್ತು ಹೋಗಲಿದೆ. ಡ್ರಗ್ಸ್ ದಂಧೆಯಲ್ಲಿ ಕೇವಲ ಕೆಲವರ ಹೆಸರಷ್ಟೇ ಪ್ರಸ್ತಾಪವಾಗುತ್ತಿದೆ. ಸರಕಾರದಲ್ಲಿ ಇರುವವರು ಇದರಲ್ಲಿ ಇರಬಹುದು' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಸಂಶಯ ವ್ಯಕ್ತಪಡಿಸಿದ್ದಾರೆ.

ಗುರುವಾರ ಇಲ್ಲಿನ ಜೆಪಿ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿಜವಾಗಿಯೂ ಯಾರು ಪಾಪದ ಹಣವನ್ನು ಈ ದಂಧೆಯಲ್ಲಿ ತೊಡಗಿಸಿದ್ದಾರೋ ಅದರ ಬಗ್ಗೆ ತನಿಖೆ ನಡೆಸಿದರೆ ತಾರ್ಕಿಕ ಅಂತ್ಯ ದೊರೆಯಬಹುದು. ಬೆಂಗಳೂರು ನಗರದ ವಿವಿಧೆಡೆಗಳಲ್ಲಿ ತಡರಾತ್ರಿಯವರೆಗೂ ನಡೆಯುತ್ತಿರುವ ಡ್ಯಾನ್ಸ್ ಬಾರ್ ಗಳಿಂದ ಡ್ರಗ್ಸ್ ದಂಧೆ ಹೆಚ್ಚಾಗಿದೆ ಎಂದು ಹೇಳಿದರು.

ಡ್ಯಾನ್ಸ್ ಬಾರ್ ಮತ್ತು ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿರುವವರ ಹಣದಿಂದ ನನ್ನ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಪತನವಾಯಿತು. ತಾವು ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿ ಅಮಲಿನಲ್ಲಿ ಮಲಗಿರಲಿಲ್ಲ. ಕ್ರಿಕೆಟ್ ಬೆಟ್ಟಿಂಗ್ ದಂಧೆ ಹಾಗೂ ಡ್ಯಾನ್ಸ್ ಬಾರ್ ಗಳಲ್ಲಿ ನಡೆಯುವ ಅಕ್ರಮಗಳನ್ನು ಮಟ್ಟ ಹಾಕಲು ನಿರ್ದೇಶನ ನೀಡಿ ಗಂಭೀರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು ಎಂದು ಅವರು ಸ್ಪಷ್ಟನೆ ನೀಡಿದರು.

ಡ್ಯಾನ್ಸ್ ಬಾರ್ ಮತ್ತು ಕ್ರಿಕೆಟ್ ದಂಧೆಯಲ್ಲಿದ್ದ ವ್ಯಕ್ತಿಯೊಬ್ಬ ಶ್ರೀಲಂಕಾಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದ. ಅದೇ ವ್ಯಕ್ತಿ ಶಾಸಕರು ಮುಂಬೈಗೆ ಹೋಗುವಾಗ ಅವರ ಜೊತೆಯಲ್ಲಿ ಆ ವ್ಯಕ್ತಿಯೂ ಇದ್ದ. ಆ ಭಾವಚಿತ್ರವನ್ನು ನಾನು ವಿಧಾನಸಭೆ ಸದನದಲ್ಲೇ ತೋರಿಸಿದ್ದೇನೆ ಎಂದ ಅವರು, ನಾನು ಅಮಲಿನಲ್ಲಿ ಇದ್ದರೆ ರಾಜ್ಯದ ರೈತರ ಸಾಲಮನ್ನಾ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.

ಪ್ರಧಾನಿ ಮೋದಿ ಅವರ ಆಡಳಿತಾವಧಿಯಲ್ಲಿ ದೇಶದ 20 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಒಂದು ಕೋಟಿಗೂ ಅಧಿಕ ಮಂದಿ ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ದೇಶಕ್ಕೆ ಎದುರಾಗಿರುವ ಆಪತ್ತುಗಳನ್ನು ನಿವಾರಿಸಲಿ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.

ಸೆ.21ರಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯದಲ್ಲಿನ ಡ್ರಗ್ಸ್ ದಂಧೆ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಗಿಂತ ರೈತರ, ಉದ್ಯೋಗ ಕಳೆದುಕೊಂಡವರ ವಿಚಾರಗಳು ಸೇರಿದಂತೆ, ಕೈಗಾರಿಕೆ ಬೆಳವಣಿಗೆ ಕುಸಿತ, ಮನೆ ಹಂಚಿಕೆ ವಿಚಾರದ ಚರ್ಚೆಗೆ ಒತ್ತು ನೀಡಲಾಗುವುದು ಎಂದ ಅವರು, ಶಿರಾ ಕ್ಷೇತ್ರದ ಉಪಚುನಾವಣೆಗೆ ಶೀಘ್ರದಲ್ಲೆ ಅಭ್ಯರ್ಥಿ ಘೋಷಣೆ ಮಾಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News