ತೀವ್ರ ಕುತೂಹಲಕ್ಕೆ ಕಾರಣವಾದ ಫಡ್ನವಿಸ್- ರಮೇಶ್ ಜಾರಕಿಹೊಳಿ ಭೇಟಿ

Update: 2020-09-17 14:16 GMT

ಬೆಂಗಳೂರು, ಸೆ. 17: ಮಹಾರಾಷ್ಟ್ರ ರಾಜ್ಯದ ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ದಿಢೀರ್ ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರಲು `ಮೂಲ ಕಾರಣಕರ್ತ'ರೆಂದು ವಿಶ್ಲೇಷಿಸಲಾಗುತ್ತಿರುವ ರಮೇಶ್ ಜಾರಕಿಹೊಳಿ ಅವರು, ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿದ್ದು ಒಂದು ಗಂಟೆಗೂ ಹೆಚ್ಚು ಕಾಲ ಉಭಯ ನಾಯಕರು ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆಯಂತೆ ಈ ಉಭಯ ನಾಯಕರು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದು, ಮಹಾರಾಷ್ಟ್ರದಲ್ಲಿರುವ ಶಿವಸೇನೆ ನೇತೃತ್ವದ ಸರಕಾರವನ್ನು ಕೆಡವಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಉಭಯ ನಾಯಕರು ಮಹತ್ವದ ಚರ್ಚೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.

ಕರ್ನಾಟಕದಲ್ಲಿ ಆಡಳಿತದಲ್ಲಿದ್ದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವನ್ನು ಬೀಳಿಸಿದ ರೀತಿಯ ಕಾರ್ಯತಂತ್ರವನ್ನು ಮಹಾರಾಷ್ಟ್ರ ರಾಜ್ಯದಲ್ಲೂ ಅಳವಡಿಸಿಕೊಳ್ಳುವ ಬಗ್ಗೆ ಫಡ್ನವಿಸ್ ಮತ್ತು ರಮೇಶ್ ಜಾರಕಿಹೊಳಿ ಚರ್ಚಿಸಿದ್ದು, ಆ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಲಾಗುವುದು ಎಂದು ರಮೇಶ ಜಾರಕಿಹೊಳಿ, ಫಡ್ನವಿಸ್ ಅವರಿಗೆ ಭರವಸೆ ನೀಡಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News