ಕಲಬುರಗಿ-ಬೀದರ್ ನಲ್ಲಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ 3000 ಕೋಟಿ ರೂ.: ಸಿಎಂ ಬಿಎಸ್‌ವೈ

Update: 2020-09-17 14:40 GMT

ಕಲಬುರಗಿ, ಸೆ.17: ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ 3,000 ಕೋಟಿ ರೂ.ಗಳ ವೆಚ್ಚದಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ ಕಾಗಿಣಾ ನದಿಗೆ ಹೊಂದಿಕೊಂಡು 10 ಏತ ನೀರಾವರಿ ಯೋಜನೆಯ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾಗಿದ್ದು, ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಗುರುವಾರ ಕಲಬುರಗಿ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತ ಹಾಗೂ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಮಿತಿಯಿಂದ ಆಯೋಜಿಸಿದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ವಿವಿಧ ತುಕಡಿಗಳ ಪರಿವೀಕ್ಷಣೆ ಕೈಗೊಂಡು ಗೌರವ ವಂದನೆ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

ಈ ಯೋಜನೆಗಳಿಂದ ಬೀದರ್ ಮತ್ತು ಕಲಬುರಗಿ ಜಿಲ್ಲೆಯ ರೈತರ ಲಕ್ಷಾಂತರ ಎಕರೆ ಭೂಮಿಗೆ ನೀರಿನ ಪೂರೈಕೆ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರಕಾರ ಕಟಿಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಇಂದು ಸುಮಾರು 1115.32 ಕೋಟಿ ರೂ.ಗಳ ಬೃಹತ್ ಮೊತ್ತದ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ಮಾಡಲಾಗಿದೆ ಎಂದು ಅವರು ಹೇಳಿದರು.

ದೇಶಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕಿದ್ದರೂ, ಕಲ್ಯಾಣ ಕರ್ನಾಟಕ ಪ್ರದೇಶ ಮಾತ್ರ ಸ್ವಾತಂತ್ರ್ಯದಿಂದ ಮರೀಚಿಕೆಯಾಗಿತ್ತು. ಸರ್ದಾರ್ ವಲ್ಲಭಭಾಯಿ ಪಟೇಲರ ಅಚಲ ನಿರ್ಧಾರದಿಂದಾಗಿ ಹೈದರಾಬಾದ್ ಕರ್ನಾಟಕ ಪ್ರದೇಶವು 1948ರ ಸೆ.17 ರಂದು ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನವಾಯಿತು ಅವರು ತಿಳಿಸಿದರು.

ನಿಝಾಮರ ಹಿಡಿತದಿಂದ ಈ ಪ್ರದೇಶವನ್ನು ಮುಕ್ತಗೊಳಿಸಲು ಬಹುದೊಡ್ಡ ಹೋರಾಟವೇ ನಡೆಯಿತು. ಆ ಹೋರಾಟದಲ್ಲಿ ತ್ಯಾಗ ಮತ್ತು ಬಲಿದಾನ ಮಾಡಿದ ಎಲ್ಲ ಮಹನೀಯರನ್ನು ಈ ಸಂದರ್ಭದಲ್ಲಿ ಸ್ಮರಿಸಿ ಗೌರವ ಸಮರ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೆ ಕಳೆದ ವರ್ಷ ಇದೇ ದಿನ ಹೈದರಾಬಾದ್-ಕರ್ನಾಟಕ ಪ್ರದೇಶವನ್ನು “ಕಲ್ಯಾಣ ಕರ್ನಾಟಕ” ಎಂದು ಮರು ನಾಮಕರಣ ಮಾಡಿ ಇಲ್ಲಿನ ಬಹುಜನರ ಒತ್ತಾಸೆಯನ್ನು ಈಡೇರಿಸಿತು. ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪನೆಗೊಂಡಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಇದಲ್ಲದೆ ಪ್ರದೇಶದ ವ್ಯಾಪ್ತಿಯಲ್ಲಿ ಕೃಷಿ, ಶಿಕ್ಷಣ, ಸಾಹಿತ್ಯ, ಸ್ವಯಂ ಉದ್ಯೋಗ, ಆರೋಗ್ಯ, ಯುವಜನ ಮತ್ತು ಮಹಿಳಾ ಸಬಲೀಕರಣ, ಗ್ರಾಮ ಸಬಲೀಕರಣ ಹೀಗೆ ನಾನಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲೆಂದೇ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಕಚೇರಿ ಸ್ಥಾಪಿಸಿದ್ದು, ಸಂಘದ ಚಟುವಟಿಕೆ ತೀವ್ರಗೊಳಿಸಲು 300 ಕೋಟಿ ರೂ. ಅನುದಾನ ಬಿಡುಗಡೆಗೆ ಅನುಮೋದನೆ ನೀಡಿ ಈಗಾಗಲೆ 100 ಕೋಟಿ ರೂ. ಸಂಘಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ಕೊಪ್ಪಳ ಜಿಲ್ಲೆಯಲ್ಲಿ ಚೀನಾ ದೇಶದ ಮಾದರಿಯಲ್ಲಿ ವಿಶ್ವಮಟ್ಟದ ಗೊಂಬೆ ತಯಾರಿಕಾ ಸಾಮರ್ಥ್ಯವುಳ್ಳ ಕೈಗಾರಿಕೆಗಳನ್ನು ಆಕರ್ಷಿಸಲು ‘ಗೊಂಬೆ ತಯಾರಿಕಾ ಕ್ಲಸ್ಟರ್’ನ್ನು ಸ್ಥಾಪಿಸಲಾಗುತ್ತಿದೆ. ಕೊಪ್ಪಳದಲ್ಲಿ 400 ಎಕರೆ ಪ್ರದೇಶದಲ್ಲಿ ಗೊಂಬೆ ತಯಾರಿಕಾ ವಿಶೇಷ ಆರ್ಥಿಕ ವಲಯ ಮತ್ತು ದೇಶಿಯ ಉತ್ಪಾದನಾ ವಲಯ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ 1500 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಮುಂದಿನ 3 ರಿಂದ 5 ವರ್ಷಗಳಲ್ಲಿ 20,000 ಜನರಿಗೆ ಉದ್ಯೋಗ ಕಲ್ಪಿಸಲಿದೆ ಎಂದು ಅವರು ಹೇಳಿದರು.

ರಾಯಚೂರು ಜಿಲ್ಲೆಯ ಗೋಲಪಲ್ಲಿಯಲ್ಲಿ 1,200 ಮೆಗಾ ವ್ಯಾಟ್ ಸಾಮರ್ಥ್ಯದ 10,000 ಕೋಟಿ ರೂ.ಗಳ ವೆಚ್ಚದಲ್ಲಿ ಜಲ ವಿದ್ಯುತ್ ಯೋಜನೆಯು ಪರಿಶೀಲನಾ ಹಂತದಲ್ಲಿದ್ದು, ನೆರೆ ರಾಜ್ಯದ ಜೊತೆ ಮಾತುಕತೆ ನಡೆದಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಲಬುರಗಿ ಶಾಖೆಯ 300 ಹಾಸಿಗೆ ಸಾಮರ್ತ್ಯದ ಆಸ್ಪತ್ರೆ ಸಂಕೀರ್ಣ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ಮಾಡಲಾಗಿದೆ. 7.15 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಈ ಆಸ್ಪತ್ರೆ ನಿರ್ಮಾಣಕ್ಕೆ 150 ಕೋಟಿ ರೂ. ವ್ಯಯ ಮಾಡಲಾಗುತ್ತಿದೆ. ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತವಾದ ಆಸ್ಪತ್ರೆ ಇದಾಗಲಿದ್ದು, ಕಲಬುರಗಿ ಭಾಗದ ಜನರಿಗೆ ಬಹಳ ಉಪಯುಕ್ತವಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಲು ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಲು ಬೆಂಗಳೂರಿನ ರೂಪೇನ ಅಗ್ರಹಾರದಲ್ಲಿ 1 ಎಕರೆ ಪ್ರದೇಶದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ವಸತಿ ನಿಲಯ ನಿರ್ಮಿಸಲು ಉದ್ದೇಶಿಸಿ ಇಂದು ನಿವೇಶನ ಹಂಚಿಕೆ ಪತ್ರವನ್ನು ಕೆ.ಕೆ.ಆರ್.ಡಿ.ಬಿ. ಮಂಡಳಿಗೆ ವಿತರಿಸಿದೆ. ಮುಂದಿನ ಒಂದು ವರ್ಷದಲ್ಲಿ ಕಟ್ಟಡವನ್ನು ಮಂಡಳಿಯಿಂದ ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಭಾರತ ಸರಕಾರದ ‘ಬಲ್ಕ್ ಡ್ರಗ್ ಪಾರ್ಕ್ ಉತ್ತೇಜನ’ ಯೋಜನೆಯಡಿ ಯಾದಗಿರಿ ಜಿಲ್ಲೆಯ ಕಡೆಚೂರು ಕೈಗಾರಿಕಾ ಪ್ರದೇಶದ 1510 ಎಕರೆ ಪ್ರದೇಶದಲ್ಲಿ ಬಲ್ಕ್ ಡ್ರಗ್ ಪಾರ್ಕ್‍ನ್ನು ಸ್ಥಾಪಿಸುವ ಕುರಿತು ಭಾರತ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈ ಯೋಜನೆಯ ಅಭಿವೃದ್ಧಿ ವೆಚ್ಚವು 1446 ಕೋಟಿ ರೂ.ಗಳೆಂದು ಅಂದಾಜಿಸಲಾಗಿದ್ದು, ಅದರಲ್ಲಿ ಭಾರತ ಸರಕಾರದ ಪಾಲು 1000 ಕೋಟಿ ರೂ.ಸಿಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಮುಂಬರುವ ನಾಲ್ಕು ತಿಂಗಳಲ್ಲಿ ಬಸವ ಕಲ್ಯಾಣ ಪ್ರಾಧಿಕಾರದ ಆಶ್ರಯದಲ್ಲಿ, ಎಲ್ಲ ಕಾನೂನಿನ ಪ್ರಕ್ರಿಯೆ ಪೂರ್ಣಗೊಳಿಸಿ, ಅನುಭವ ಮಂಟಪ ಕಾರ್ಯಾರಂಭ ಮಾಡಲಾಗುವುದು ಎಂದ ಅವರು, ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಪ್ರದೇಶದಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯುಳ್ಳ ಕೈಪಿಡಿಯನ್ನು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯ್‍ ಸಿಂಗ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಸಂಸದ ಡಾ.ಉಮೇಶ್ ಜಾಧವ್ ಸೇರಿದಂತೆ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ

ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಲಬುರಗಿ ನಗರದ ಎಸ್.ವಿ.ಪಿ. ವೃತ್ತದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News