ಚಿನ್ನ ಕಳ್ಳ ಸಾಗಾಟ ಪ್ರಕರಣ: ಎನ್ಐಎ ಮುಂದೆ ಹಾಜರಾದ ಸಚಿವ ಜಲೀಲ್

Update: 2020-09-17 14:45 GMT
ಪೊಟೊ ಕೃಪೆ : facebook.com

 ಕೊಚ್ಚಿ, ಸೆ. 17: ರಾಜತಾಂತ್ರಿಕ ವಾಹಿನಿ ಮೂಲಕ ಚಿನ್ನ ಕಳ್ಳ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಉನ್ನತ ಶಿಕ್ಷಣದ ಸಚಿವ ಕೆ.ಟಿ. ಜಲೀಲ್ ವಿಚಾರಣೆ ಎದುರಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಕೊಚ್ಚಿಯಲ್ಲಿರುವ ಕಚೇರಿಗೆ ಗುರುವಾರ ಬೆಳಗ್ಗೆ ಆಗಮಿಸಿದರು.

 ಜುಲೈ 5ರಂದು ತಿರುವನಂತಪುರದಲ್ಲಿ ಬೇಧಿಸಲಾದ ಚಿನ್ನ ಕಳ್ಳ ಸಾಗಾಟ ಜಾಲಕ್ಕೆ ಸಂಬಂಧಿಸಿದ ಸರಣಿ ಆರೋಪದ ಹಿನ್ನೆಲೆಯಲ್ಲಿ ಸಚಿವರನ್ನು ವಿಚಾರಣೆ ನಡೆಸಲು ಎನ್‌ಐಎ ಸಮನ್ಸ್ ಕಳುಹಿಸಿತ್ತು. ಜಲೀಲ್ ಅವರು ಮಾಜಿ ಸಿಪಿಎಂ ಶಾಸಕರ ಕಾರೊಂದರಲ್ಲಿ ಗುರುವಾರ ಬೆಳಗ್ಗೆ 6 ಗಂಟೆಗೆ ಕೊಚ್ಚಿಯಲ್ಲಿರುವ ಎನ್‌ಐಎ ಕಚೇರಿಗೆ ಆಗಮಿಸಿದರು. ಎನ್‌ಐಎ ಅಧಿಕಾರಿಗಳು ಜಲೀಲ್ ಅವರನ್ನು ಅಪರಾಹ್ನ 1 ಗಂಟೆಗಳ ವರೆಗೆ ವಿಚಾರಣೆ ನಡೆಸಿದರು.

ಈ ನಡುವೆ ಜಲೀಲ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇರಳದಾದ್ಯಂತ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರತಿಭಟನೆ ನಡೆಸಿದೆ. ಪಾಲಕ್ಕಾಡ್, ಕೊಲ್ಲಂ, ಕೋಝಿಕ್ಕೋಡ್, ಕೊಟ್ಟಾಯಂ ಹಾಗೂ ಕಣ್ಣೂರು ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಸರಕಾರಿ ಕಚೇರಿಗಳಿಗೆ ರ್ಯಾಲಿ ನಡೆಸಿದ ಯೂತ್ ಕಾಂಗ್ರೆಸ್, ಭಾರತೀಯ ಜನತಾ ಯುವ ಮೋರ್ಚಾ, ಕೆಎಸ್‌ಯುನ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದೆ.

ಸಚಿವರಾಗಿ ಶಿಷ್ಟಾಚಾರ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಲೀಲ್ ಅವರನ್ನು ಸಂಪುಟದಿಂದ ವಜಾಗೊಳಿಸಿ ಎಂದು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಆಗ್ರಹಿಸಿದ್ದಾರೆ. ಎಲ್‌ಡಿಎಫ್ ಸರಕಾರ ಅಧಿಕಾರದಲ್ಲಿ ಮುಂದುವರಿಯಲು ಅರ್ಹತೆ ಇಲ್ಲ ಆದುದರಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡುವಂತೆ ಚೆನ್ನಿತ್ತಲ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News