ರಾಜ್ಯದ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಂದಿದ್ದೇನೆ: ದಿಲ್ಲಿಯಲ್ಲಿ ಸಿಎಂ ಯಡಿಯೂರಪ್ಪ

Update: 2020-09-17 15:28 GMT

ಹೊಸದಿಲ್ಲಿ, ಸೆ.17: ರಾಜ್ಯ ಸರಕಾರವು ಅತಿವೃಷ್ಟಿ, ಕೊರೋನ ಹಾವಳಿಯ ನಡುವೆಯೂ ಒಂದು ವರ್ಷವನ್ನು ಪೂರೈಸಿದ್ದು, ಇದೀಗ ಸಚಿವ ಸಂಪುಟಕ್ಕೆ ಸರ್ಜರಿ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆ.

ಸಚಿವ ಸಂಪುಟದಲ್ಲಿ ಖಾಲಿಯಿರುವ ಆರು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳುವುದೋ ಅಥವಾ ನಾಲ್ಕರಿಂದ ಐವರು ಹಾಲಿ ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಮಣೆ ಹಾಕುವುದೋ ಎಂಬುದರ ಕುರಿತು ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲು ಯಡಿಯೂರಪ್ಪ ಸುಮಾರು 6 ತಿಂಗಳ ಬಳಿಕ ಇದೇ ಮೊದಲ ಬಾರಿ ಹೊಸದಿಲ್ಲಿಗೆ ಭೇಟಿ ನೀಡಿದ್ದಾರೆ.

ಹೊಸದಿಲ್ಲಿಯ ಇಂದಿರಾ ಗಾಂಧಿ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿಯನ್ನು ರಾಜ್ಯ ಸರಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜ್ಯದ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತಾನು ದಿಲ್ಲಿಗೆ ಆಗಮಿಸಿರುವುದಾಗಿ ತಿಳಿಸಿದರು.

ಎರಡು ದಿನಗಳ ತಮ್ಮ ಭೇಟಿಯ ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಳಗೊಂಡಂತೆ ಪ್ರಮುಖ ಕೇಂದ್ರ ಸಚಿವರನ್ನು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೂ ಸೇರಿದಂತೆ ಪಕ್ಷದ ಮುಖಂಡರನ್ನು ಭೇಟಿ ಮಾಡುತ್ತೇನೆ. ಅಲ್ಲದೆ, ರಾಜ್ಯ ಸಚಿವ ಸಂಪುಟದ ವಿಸ್ತರಣೆ ಕುರಿತಂತೆಯೂ ಚರ್ಚೆ ನಡೆಸುವುದಾಗಿ ಯಡಿಯೂರಪ್ಪ ತಿಳಿಸಿದರು.

ಸಂಪುಟ ವಿಸ್ತರಣೆ, ಅತಿವೃಷ್ಟಿ ಪರಿಹಾರ ಕಾರ್ಯಗಳಿಗೆ ಹೆಚ್ಚಿನ ನೆರವು ಮತ್ತು ಕೋವಿಡ್ ನಿರ್ವಹಣೆಗೆ ಹೆಚ್ಚಿನ ಅನುದಾನ ಪಡೆಯುವ ಸಂಬಂಧ ಚರ್ಚೆ ನಡೆಸಲಾಗುವುದು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನಗಳು, ಬಾಕಿ ಯೋಜನೆಗಳಿಗೆ ಅನುಮತಿ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.

ಸೆ.21ರಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತಿದ್ದು, ಅದಕ್ಕೂ ಮುನ್ನವೆ ಸಚಿವ ಸಂಪುಟ ವಿಸ್ತರಣೆ ಮಾಡಬೇಕೆ ಅಥವಾ ಪುನರ್ ರಚನೆ ಮಾಡಬೇಕೆ ಎಂಬುದರ ಕುರಿತು ಯಡಿಯೂರಪ್ಪ ಚರ್ಚೆ ನಡೆಸಲಿದ್ದಾರೆ. ಬಿಜೆಪಿ ಸರಕಾರ ರಚನೆಗೆ ಕಾರಣಕರ್ತರಾದ ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್ ಗೆ ಸಚಿವ ಸ್ಥಾನ ನೀಡುವುದಾಗಿ ಸ್ವತಃ ಯಡಿಯೂರಪ್ಪ ಮಾತುಕೊಟ್ಟಿದ್ದು, ಅದನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ.

ಈ ನಡುವೆ ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಹಾಗೂ ಸಿ.ಪಿ.ಯೋಗೇಶ್ವರ್ ಗೂ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೆಚ್ಚಾಗಿದೆ. ಸಚಿವ ಸಂಪುಟದಲ್ಲಿ ಈಗ ಆರು ಸ್ಥಾನಗಳು ಖಾಲಿ ಇದ್ದು, ಈ ಪೈಕಿ 2 ಸ್ಥಾನಗಳನ್ನು ಬಾಕಿ ಉಳಿಸಿಕೊಂಡು ನಾಲ್ಕು ಸ್ಥಾನಗಳನ್ನು ತುಂಬಲು ಮುಖ್ಯಮಂತ್ರಿ ಬಯಸಿದ್ದಾರೆ.

ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‍ರನ್ನು ಭೇಟಿ ಮಾಡಿ ನೆರೆ ಹಾಗೂ ಮಳೆಯಿಂದ ಆಗಿರುವ ಹಾನಿಗೆ ಹೆಚ್ಚಿನ ನೆರವು ಒದಗಿಸುವಂತೆ ಕೋರಿರುವ ಮುಖ್ಯಮಂತ್ರಿ, ಜಿಎಸ್‍ಟಿ ಪರಿಹಾರ ಬಿಡುಗಡೆ ಸಂಬಂಧ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.

ರಾಜ್ಯದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಗಜೇಂದ್ರ ಸಿಂಗ್ ಶೆಖಾವತ್ ಸೇರಿದಂತೆ ಇನ್ನಿತರರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ದೆಹಲಿಗೆ ತೆರಳಿರುವ ಮುಖ್ಯಮಂತ್ರಿಗಳು, ಇಂದು ಮತ್ತು ನಾಳೆ ಅಲ್ಲಿಯೇ ವಾಸ್ತವ್ಯ ಹೂಡಿ ಶನಿವಾರ ನಗರಕ್ಕೆ ವಾಪಸ್ಸಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News