'ನನಗೆ ಡಿಸಿಎಂ ಸ್ಥಾನ ನೀಡು' ಎಂದು ದೇವಿಗೆ ಪತ್ರ ಬರೆದ ಆರೋಗ್ಯ ಸಚಿವ ಶ್ರೀರಾಮುಲು !

Update: 2020-09-17 16:05 GMT

ಯಾದಗಿರಿ, ಸೆ.17: ನನಗೆ ಕಡ್ಡಾಯವಾಗಿ ಡಿಸಿಎಂ ಸ್ಥಾನ ನೀಡು ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೇದುರ್ಗಾದೇವಿಗೆ ಇಂಗ್ಲೀಷ್‍ನಲ್ಲಿ ಪತ್ರ ಬರೆದಿದ್ದಾರೆ.

ಈ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡಿರುವ ಶ್ರೀರಾಮುಲು ಅವರು, ನನ್ನ ಮನಸ್ಸಿನಲ್ಲಿರುವುದನ್ನು ದೇವಿಯ ಬಳಿ ಬೇಡಿಕೊಂಡಿದ್ದೇನೆ. ದೇವಿ ಬಳಿ ಕೇಳಿಕೊಂಡಿದ್ದನ್ನು ಬಹಿರಂಗವಾಗಿ ಹೇಳಬಾರದು ಎಂದು ಹೇಳಿದ್ದಾರೆ.

ಗಡೇದುರ್ಗಾದೇವಿ ದರ್ಶನದಿಂದ ಒಳ್ಳೆಯದಾಗುತ್ತೆ ಎಂದು ಸ್ನೇಹಿತರು ಹೇಳಿದ್ದರು. ದೇವಿಯ ದರ್ಶನ ಪಡೆದಿದ್ದೇನೆ. ಡಿಸಿಎಂ ಮಾಡುವುದು ಬಿಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಡಿಸಿಎಂ ಪಟ್ಟದ ಬಗ್ಗೆ ಮಾತನಾಡುವ ಸಂದರ್ಭ ಇದಲ್ಲ. ಕೊರೋನ ಸೋಂಕಿನ ವಿರುದ್ಧ ಹೋರಾಡುವ ಸಂದರ್ಭವಿದು ಎಂದು ಹೇಳಿದ್ದಾರೆ.

ದುರ್ಗಾದೇವಿಗೆ ಬರೆದಿರುವ ಪತ್ರದಲ್ಲಿ Sriramulu, Deputy Chief Minister Of karnataka compulsory (ಶ್ರೀರಾಮುಲು- ಡೆಪ್ಯುಟಿ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ & ಕಂಪಲ್ಸರಿ) ಎಂದು ಕೋರಿದ್ದಾರೆ.

ಈ ಹಿಂದೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಗೋನಾಲ ಗ್ರಾಮಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದರು. ಅವರೂ ಸಹ ತಮ್ಮನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವಂತೆ ಪತ್ರ ಬರೆದಿದ್ದರು ಎನ್ನಲಾಗಿದೆ. ಪತ್ರದ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಅವರಿಗೆ ಅಧ್ಯಕ್ಷ ಪಟ್ಟ ಲಭಿಸಿತು ಅನ್ನುವುದು ಭಕ್ತರ ನಂಬಿಕೆ. ಇದೀಗ ಶ್ರೀರಾಮುಲು ಅವರು ಸಹ ದೇವಿಯ ದರ್ಶನ ಪಡೆದು ತಮ್ಮನ್ನ ಡಿಸಿಎಂ ಮಾಡುವಂತೆ ಕೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News