19 ದಿನಗಳ ಕೋವಿಡ್ ಚಿಕಿತ್ಸೆಗೆ 9.25 ಲಕ್ಷ ರೂ. ಬಿಲ್ ನೀಡಿದ ಖಾಸಗಿ ಆಸ್ಪತ್ರೆ: ಆರೋಪ

Update: 2020-09-17 16:11 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಸೆ.17: ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಕೋವಿಡ್-19 ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ಮಾಡಿದ ಬಿಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕೇವಲ 19 ದಿನದ ಚಿಕಿತ್ಸೆಗೆ 9,25,601 ರೂ. ಬಿಲ್ ಮಾಡಿದ್ದಾರೆಂದು ಆರೋಪಿಸಿ ಮೃತ ಸೋಂಕಿತ ವ್ಯಕ್ತಿಯ ಸಂಬಂಧಿಯೊಬ್ಬರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಕಡೂರು ತಾಲೂಕಿನ ಪಿಳ್ಳೇನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಆ.24ರಂದು ಅನಾರೋಗ್ಯದ ಕಾರಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ.25ರಂದು ತಪಾಸಣೆ ನಡೆಸಿದ ವೈದ್ಯರು ದೇಹದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿದೆ ಎಂದು ಐಸಿಯು ವಾರ್ಡ್ ಗೆ ದಾಖಲಿಸಿದ್ದಾರೆ. ನಂತರ ಆಂಟಿಜನ್ ಕಿಟ್ ವರದಿಯಲ್ಲಿ ಕೊರೋನ ನೆಗೆಟಿವ್ ಬಂದಿದೆ ಎಂದು ತಿಳಿಸಿ, ಜನರಲ್ ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ.

ಅದೇ ದಿನ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೈದ್ಯರು ಆಕ್ಸಿಜನ್ ಕೊರತೆ ಇದೆ ಎಂದು ಮತ್ತೆ ಐಸಿಯು ಕೋವಿಡ್ ವಾರ್ಡ್‍ಗೆ ದಾಖಲಿಸಿದ್ದಾರೆ. ಸ್ವಲ್ಪ ದಿನಗಳ ನಂತರ ಪಿಸಿಆರ್ ಟೆಸ್ಟ್ ನಲ್ಲಿ ಕೋವಿಡ್19 ಪಾಸಿಟಿವ್ ಇದೆ, ಸುಧಾರಣೆ ಕಂಡು ಬರುತ್ತಿದೆ ಎಂದು ತಿಳಿಸಿದ ವೈದ್ಯರು, ಚಿಕಿತ್ಸೆ ಮುಂದುವರಿಸಿರುವುದಾಗಿ ಹೇಳಿದ್ದರೆಂದು ಸಂಬಂಧಿಕರು ದೂರಿನಲ್ಲಿ ಆರೋಪ ಮಾಡಿದ್ದಾರೆ.

ಆಸ್ಪತ್ರೆಗೆ ದಾಖಲಾದ ದಿನದಿಂದಲೂ ಆರೋಗ್ಯದಲ್ಲಿ ಸುಧಾರಣೆಯಾಗುವ ಭರವಸೆ ನೀಡಿ, ಬೇರೆ ಆಸ್ಪತ್ರೆಗೆ ದಾಖಲಿಸಲು ಬಿಡದೆ ನಾವೇ ಗುಣಪಡಿಸುತ್ತೇವೆಂದು ಭರವಸೆ ನೀಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೆ.11ರಂದು ಕೋವಿಡ್‍ಗೆ ತನ್ನ ಮಾವ ಮೃತಪಟ್ಟಿದ್ದಾರೆಂದು ದೂರುದಾರರು ದೂರಿದ್ದಾರೆ. 

ಮೃತರ ಶವವನ್ನು ನೀಡುವಾಗ ಆಸ್ಪತ್ರೆ ಹಾಗೂ ಮೆಡಿಕಲ್ ಬಿಲ್ ಸೇರಿದಂತೆ 9,25,601 (ಒಂಬತ್ತು ಲಕ್ಷದ ಇಪ್ಪತೈದು ಸಾವಿರದ ಆರುನೂರ ಒಂದು ರೂ,) ಹಣ ಕಟ್ಟದಿದ್ದರೆ ಮೃತದೇಹ ನೀಡುವುದಿಲ್ಲ ಎಂದು ತಿಳಿಸಿದ್ದು, ಹಣ ಹೊಂದಿಸಿ ಪಾವತಿಸಿದ್ದೇವೆ. ಆಸ್ಪತ್ರೆಯವರು ತಮ್ಮಿಂದ ಭಾರೀ ಮೊತ್ತದ ಬಿಲ್ ಪಡೆದಿದ್ದು, ಸರಕಾರ ನಿಗದಿ ಪಡಿಸಿರುವುದಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿರುವ ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಕ್ರಮಕೈಗೊಳ್ಳಬೇಕು. ವಸೂಲಿ ಮಾಡಿದ ಹೆಚ್ಚುವರಿ ಹಣವನ್ನು ಮರುಪಾವತಿಸಬೇಕೆಂದು ಕುಟುಂಬಸ್ಥರು ದೂರಿನಲ್ಲಿ ಆಗ್ರಹಿಸಿದ್ದಾರೆ.

ಕೊರೋನ ಸೋಂಕಿತ ವ್ಯಕ್ತಿಯನ್ನು 19 ದಿನ ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಿದ್ದೇವೆ. ವ್ಯಕ್ತಿಯನ್ನು ಹೇಗಾದರೂ ಮಾಡಿ ಉಳಿಸಿಕೊಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದರಿಂದ ವೆಂಟಿಲೇಟರ್ ಇಲ್ಲದಿದ್ದರೂ 15 ಲಕ್ಷ ಖರ್ಚು ಮಾಡಿ ವೆಂಟಿಲೇಟರ್ ಅಳವಡಿಸಿ ಅವರಿಗೆ ಚಿಕಿತ್ಸೆ ನೀಡಿದ್ದೇವೆ. ವೈದ್ಯರು ಬಹಳಷ್ಟು ಶ್ರಮಿಸಿ ವ್ಯಕ್ತಿಯನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಸರ್ಕಾರದ ಮಾರ್ಗಸೂಚಿಯಂತೆ ಸರ್ಕಾರಿ ಅಂಬ್ಯಲೆನ್ಸ್ ತರಿಸಿ ದೇಹ ಹಸ್ತಾಂತರ ಮಾಡಲಾಗಿದೆ. ಪ್ರತೀ ದಿನ 4 ಶಿಫ್ಟ್ ಗಳಲ್ಲಿ ನಮ್ಮ ವೈದ್ಯರು ಕರ್ತವ್ಯ ನಿರ್ವಹಿಸಿದ್ದಾರೆ. ಆದರೂ ಸೋಂಕಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈಗ ಕುಟುಂಬಸ್ಥರು ಹೆಚ್ಚುವರಿ ಹಣ ವಸೂಲು ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದು, ಇದು ಸತ್ಯಕ್ಕೆ ದೂರವಾದ ಆರೋಪವಾಗಿದೆ.

- ಡಾ.ವಿಜಯಕುಮಾರ್, ಆಸ್ಪತ್ರೆಯ ಮುಖ್ಯಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News