ದೇಶ ನಡೆಸಲು ಮೋದಿಗಿಂತ ಬುದ್ದಿವಂತರು ಯಾರಿದ್ದಾರೆ?: ಸಾಹಿತಿ ಎಸ್.ಎಲ್.ಭೈರಪ್ಪ

Update: 2020-09-17 16:38 GMT

ಮೈಸೂರು,ಸೆ.17: ಪ್ರಧಾನಿ ನರೇಂದ್ರ ಮೋದಿಯವರ 6 ವರ್ಷದ ಆಡಳಿತ ತೃಪ್ತಿ ತಂದಿದೆ. ವಿಶ್ವವನ್ನೇ ತಲ್ಲಣಗೊಳಿಸಿದ ಕೊರೋನವನ್ನು ಪ್ರಧಾನಿ ಮೋದಿ ಅವರು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಾಹಿತಿ ಎಸ್.ಎಲ್ ಭೈರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ 70ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಿದ್ದ ಸೇವಾದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶ ನಡೆಸಲು ಮೋದಿಗಿಂತ ಬುದ್ದಿವಂತರು ಯಾರಿದ್ದಾರೆ. ರಾಜ್ಯದ ಪಾಲಿನ ಜಿಎಸ್‌ಟಿ ಹಣವನ್ನು ಬೇರೆ ಬೇರೆ ರೂಪದಲ್ಲಿ ಕೊಟ್ಟಿದ್ದಾರೆ. ಜಿಎಸ್‌ಟಿ ಕೊಟ್ಟಿಲ್ಲ ಅಂತ ಯಾಕೆ ದೂಷಿಸಬೇಕು. ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರದು ಎಂದು ಹೇಳಿದರು. 

ಡ್ರಗ್ಸ್ ಸೇವನೆಯಿಂದ ಯುವಕರು ದಾರಿ ತಪ್ಪುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಾಹಿತಿ ಎಸ್.ಎಲ್ ಭೈರಪ್ಪ, ಯುವಕರು ಮೋದಿ ಅವರನ್ನು ಮಾಡೆಲ್ ಆಗಿ ಇಟ್ಟುಕೊಳ್ಳಬೇಕು. ಯುವಕರು ದಿನದಲ್ಲಿ 18 ಗಂಟೆ ಕೆಲಸ ಮಾಡಬೇಕು. ಡ್ರಗ್ಸ್ ನಿಂದ ಯುವಕರು ಹಾಳಾಗುವುದಕ್ಕೂ ಮೋದಿಗೂ ಸಂಬಂಧವಿಲ್ಲ. ಮೋದಿ ಏನೇ ಮಾಡಿದರೂ ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ. ಮೊನ್ನೆ ರಾಹುಲ್ ಗಾಂಧಿ ಚೀನಾ ಗಡಿ ವಿಚಾರದಲ್ಲಿ ಟೀಕೆ ಮಾಡಿದ್ದಾರೆ ಎಂದು ಎಸ್.ಎಲ್ ಭೈರಪ್ಪ ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮಾಜಿ ವಿಧಾನಪರಿಷತ್ ಸದಸ್ಯ ತೋಂಟಧಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News