ಅವರು ಜಸ್ಟಿಸ್ ಅಲ್ಲ, ಇನ್ ಜಸ್ಟಿಸ್ ನಾಗಮೋಹನದಾಸ್: ಸಚಿವ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ

Update: 2020-09-17 17:10 GMT

ಚಿಕ್ಕಮಗಳೂರು, ಸೆ.17: ಜಸ್ಟಿಸ್ ನಾಗಮೋಹನ ದಾಸ್ ದತ್ತಪೀಠದ ವಿಚಾರದಲ್ಲಿ ಅನ್ಯಾಯ ಮಾಡಿದ್ದಾರೆ. ಪೀಠದ ವಿಚಾರದಲ್ಲಿ ನ್ಯಾಯಾಧೀಶ ಎನ್ನುವ ಪದಕ್ಕೆ ಕಳಂಕ ಬರುವ ರೀತಿಯಲ್ಲಿ ಸರಕಾರಕ್ಕೆ ಈ ಹಿಂದೆಯೂ ವರದಿಯನ್ನು ನೀಡಿದ್ದಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ ವಿಚಾರದಲ್ಲಿ ಅವರು ಪೂರ್ವಾಗ್ರಹ ಪೀಡಿತವಾದ ವರದಿಯ ಸ್ಕ್ರಿಪ್ಟ್ಅನ್ನು ಮೊದಲೇ ತಯಾರು ಮಾಡಿಕೊಂಡು ನಾಟಕವಾಡಲು ಸಮೀಕ್ಷೆಗೆ ಹೋಗಿದ್ದಾರೆ ಎಂದು ದೂರಿದ ಸಚಿವ ಸಿ.ಟಿ.ರವಿ, ಅವರು ಜಸ್ಟಿಸ್ ಅಲ್ಲ, ಇನ್ ಜಸ್ಟಿಸ್ ನಾಗಮೋಹನದಾಸ್ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸಂಬಂಧ ಜಸ್ಟಿಸ್ ನಾಗಮೋಹನ್ ದಾಸ್ ನೇತೃತ್ವದ ಸತ್ಯಶೋಧನಾ ಸಮಿತಿಯ ವರದಿ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಸ್ಟಿಸ್ ನಾಗಮೋಹನದಾಸ್, ದತ್ತಪೀಠದ ವಿಚಾರದಲ್ಲಿ ಅನ್ಯಾಯ ಮಾಡಿದ್ದಾರೆ. ದತ್ತ ಪೀಠಕ್ಕೆ ಇನ್ ಜಸ್ಟಿಸ್ ನೀಡಿದ್ದಾರೆ. ಬಾಬಾ ಬುಡನಗಿರಿ ಬೇರೆ, ದತ್ತಪೀಠ ಬೇರೆ ಎಂದು ಸರಕಾರಿ ದಾಖಲೆಗಳೇ ಹೇಳುತ್ತವೆ. ಆದರೆ ಜಸ್ಟಿಸ್ ನಾಗಮೋಹನದಾಸ್ ಅವರು ದತ್ತಪೀಠದ ವಿಚಾರದಲ್ಲಿ ನ್ಯಾಯಾಧೀಶ ಎನ್ನುವ ಪದಕ್ಕೆ ಕಳಂಕ ಬರುವ ರೀತಿಯಲ್ಲಿ ಸರಕಾರಕ್ಕೆ ಈ ಹಿಂದೆ ವರದಿಯನ್ನು ನೀಡಿದ್ದಾರೆ. ಇಂತಹ ವ್ಯಕ್ತಿ ಡಿಜೆ ಹಳ್ಳಿ ಗಲಭೆಯ ವಿಚಾರದಲ್ಲಿ ಪೂರ್ವಾಗ್ರಹ ಪೀಡಿತವಾದ ವರದಿಯನ್ನು ಮೊದಲೇ ತಯಾರು ಮಾಡಿಕೊಂಡು ಸಮೀಕ್ಷೆ ಹೋಗಿದ್ದರು. ವರದಿಯ ಸ್ಕ್ರಿಪ್ಟ್ ಅನ್ನು ಮೊದಲೇ ತಯಾರು ಮಾಡಿಕೊಂಡು ನಾಟಕವಾಡಲು ಸಮೀಕ್ಷೆಗೆ ಹೋಗಿದ್ದಾರೆ ಎಂದು ಸಿ.ಟಿ.ರವಿ ಆರೋಪಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ನಿಂದನೆಯ ಪೋಸ್ಟ್ ಹಾಕಿದ ಮಾತ್ರಕ್ಕೆ ಯಾರದ್ದೋ ಮನೆಗೆ ಬೆಂಕಿ ಹಾಕುವುದನ್ನು ಜಸ್ಟಿಸ್ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಒಪ್ಪುತ್ತದೆಯೇ ಎಂದು ಪ್ರಶ್ನಿಸಿದ ಸಿ.ಟಿ.ರವಿ, ಈ ನೆಲದ ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಮಾತ್ರ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ಬೆಂಕಿ ಹಾಕುವ ಕೆಲಸಕ್ಕೆ ಬೆಂಬಲವನ್ನು ಯಾರೂ ಮಾಡಬಾರದು ಎಂದರು.

ಗಲಭೆಗೆ ಸಂಬಂಧಿಸಿದಂತೆ ನವೀನ್ ಎಂಬಾತನ ಪೋಸ್ಟ್ ವಿಚಾರವನ್ನು ಜಸ್ಟಿಸ್ ನಾಗಮೋಹನ್ ದಾಸ್ ನೇತೃತ್ವದ ಸಮಿತಿಯ ಸತ್ಯಶೋಧನಾ ವರದಿಯಲ್ಲಿ ಒತ್ತಿ ಹೇಳಲಾಗಿದೆ. ಆದರೆ ನವೀನ್ ಆ ರೀತಿಯಲ್ಲಿ ಪೋಸ್ಟ್ ಹಾಕಲು ಕಾರಣವಾದ ಬೇರೆ ಧರ್ಮದವರು ಹಾಕಿದ್ದ ಮತ್ತೊಂದು ಪೋಸ್ಟ್ ಬಗ್ಗೆ ಕಣ್ಣುಮುಚ್ಚಿಕೊಂಡಿದೆ. ಹಿಂದೂ ಧರ್ಮವನ್ನು ಅವಮಾನಿಸಿದರೆ ಜಸ್ಟಿಸ್ ನಾಗಮೋಹನ್ ದಾಸ್ ನಂತವರಿಗೆ ಏನೂ ಅನಿಸುವುದಿಲ್ಲ. ಹಿಂದೂ ಧರ್ಮವನ್ನು ಅವಮಾನಿಸಿದ್ದಕ್ಕೆ ಇರುವ ಸತ್ಯದ ಬಗ್ಗೆ ಪ್ರತಿಕ್ರಿಯಾತ್ಮಕವಾಗಿ ನವೀನ್ ಪೋಸ್ಟ್ ಹಾಕಿದರೆ, ಅದಕ್ಕೆ ಪ್ರತಿಕ್ರಿಯೆ ತೋರಲು ಬೆಂಕಿ ಹಾಕಿ ಎಂದು ನಾಗಮೋಹನದಾಸ್ ಹೇಳುತ್ತಾರಾ ಎಂದು ಸಿ.ಟಿ.ರವಿ ಅಸಮಾಧಾನ ವ್ಯಕ್ತಪಡಿಸಿದರು.

ನವೀನನ ಪೋಸ್ಟ್ ವಿರುದ್ಧ ಪೊಲೀಸರಿಗೆ ದೂರು ನೀಡಲು ಹೋದವರು ಗಂಟೆ ಕಳೆಯುವ ಮುನ್ನವೇ ಗುಂಪು ಸೇರಿಕೊಂಡು ಬೆಂಕಿ ಹಾಕಿದ್ದಾರೆ. ಈ ಸತ್ಯವನ್ನ ಸುಳ್ಳು ಎನ್ನುತ್ತಿದ್ದಾರೆ. ಜಸ್ಟಿಸ್ ನಾಗಮೋಹನದಾಸ್ ನೇತೃತ್ವದ ಸಮಿತಿ ಸತ್ಯಶೋಧನ ಸಮಿತಿಯೇ ಅಲ್ಲ, ಸುಳ್ಳನ್ನು ಸತ್ಯ ಎಂದು ಹೇಳಲು ಹೊರಟಿರುವ ಷಡ್ಯಂತ್ರದ ಸಮಿತಿಯಾಗಿದೆ. ಸ್ಕ್ರಿಪ್ಟ್ ಅನ್ನು ಮೊದಲೇ ಬರೆದುಕೊಂಡು ಸಮೀಕ್ಷೆಗೆ ಹೋದ ನಾಗಮೋಹನದಾಸ್ ಜಸ್ಟಿಸ್ ಅಲ್ಲ, ಇನ್ ಜಸ್ಟಿಸ್ ನಾಗಮೋಹನದಾಸ್ ಆಗಿದ್ದಾರೆ. ದತ್ತಪೀಠದ ವಿಚಾರದಲ್ಲೂ ಇದೇ ಅನ್ಯಾಯ ಮಾಡಿದ್ದಾರೆ. ದತ್ತ ಪೀಠ ಎನ್ನುವುದಕ್ಕೆ ಸಾಕ್ಷಿಯ ದಾಖಲೆಯನ್ನು ನಾಗಮೋಹನದಾಸ್ ಅವರಿಗೆ ನೀಡಿದ್ದೆವು. ಆದರೆ ಹಿಂದುಗಳಿಗೆ ಇನ್ ಜಸ್ಟಿಸ್ ತೀರ್ಪು ಕೊಟ್ಟರು. ನಾಗಮೋಹನದಾಸ್ ಈ ಸಂಬಂಧ ಸಾರ್ವಜನಿಕ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಸಿ.ಟಿ.ರವಿ, ಕಮ್ಯೂನಿಸ್ಟ್ ಅಜೆಂಡಾವನ್ನು ರಾಜ್ಯದ ಮೇಲೆ ಹೇರಲು ರಾಜ್ಯದಲ್ಲಿ ಕೆಲವರು ಮಂಚೂಣಿಯಲ್ಲಿದ್ದಾರೆ. ಅವರಲ್ಲಿ ನಾಗಮೋಹನದಾಸ್ ಕೂಡ ಒಬ್ಬರು ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News