ಅಸ್ಸಾಂ ವೈದ್ಯರಿಗೆ ಕೋವಿಡ್-19 ಮರು ಸೋಂಕು; ಹೆಚ್ಚಿದ ಆತಂಕ

Update: 2020-09-19 03:49 GMT

ಗುವಾಹತಿ, ಸೆ.19: ಅಸ್ಸಾಂನ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಕನಿಷ್ಠ ಆರು ಮಂದಿ ವೈದ್ಯರಿಗೆ ಕರ್ತವ್ಯದಲ್ಲಿದ್ದಾಗ ಕೊರೋನ ವೈರಸ್ ಸೋಂಕು ತಗಲಿದ್ದು, ಬಳಿಕ ತಪಾಸಣೆ ನಡೆಸಿದಾಗ ನೆಗೆಟಿವ್ ಫಲಿತಾಂಶ ಬಂದಿದೆ. ಆದರೆ ಮತ್ತೆ ಕೋವಿಡ್-19 ಲಕ್ಷಣ ಕಂಡುಬಂದಿದ್ದು, ಪಾಸಿಟಿವ್ ಫಲಿತಾಂಶ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಅಸ್ಸಾಂನ ದಿಬ್ರೂಗಢ ಜಿಲ್ಲೆಯ ಲಹೋವಾಲ್‌ನಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಈಶಾನ್ಯ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಇವು ಮರು ಸೋಂಕಿನ ಪ್ರಕರಣಗಳೇ ಅಥವಾ ಅಲ್ಲವೇ ಎನ್ನುವುದನ್ನು ಪತ್ತೆ ಮಾಡಲು ರಕ್ತದ ಮಾದರಿ ಸಂಗ್ರಹಿಸಲಾಗುತ್ತಿದೆ.

ಅಸ್ಸಾಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಕನಿಷ್ಠ ಆರು ಮಂದಿ ವೈದ್ಯರಿಗೆ ಎರಡನೇ ಬಾರಿ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದ್ದು, ಗುವಾಹತಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲೂ ಇಂಥದ್ದೇ ಪ್ರಕರಣಗಳು ವರದಿಯಾಗಿವೆ ಎಂದು ಐಸಿಎಂಆರ್ ಮೂಲಗಳು ಹೇಳಿವೆ.
ಇಂಥ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಸ್ಸಾಂ ಆರೋಗ್ಯ ಕಾರ್ಯದರ್ಶಿ ಸಮೀರ್ ಸಿನ್ಹಾ ವಿವರಿಸಿದ್ದಾರೆ.

"ಆರ್‌ಟಿ-ಪಿಸಿಆರ್ ಪರೀಕ್ಷೆಗಳು ಸೂಕ್ಷ್ಮ ಪರೀಕ್ಷೆಗಳಾಗಿದ್ದು, ತಪ್ಪಾಗಿ ಪಾಸಿಟಿವ್ ಫಲಿತಾಂಶ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಅಥವಾ ಕಡಿಮೆ ಪ್ರತಿರೋಧ ಕಣಗಳಿರುವ ರೋಗಿಗಳಲ್ಲಿ ಮರು ಸೋಂಕಿನ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಇದಲ್ಲದಿದ್ದರೆ ಹಲವು ಪ್ರಕರಣಗಳಲ್ಲಿ ಪ್ರತಿರೋಧ ಶಕ್ತಿ ಅಭಿವೃದ್ಧಿಯಾಗದಿರುವ ಸಾಧ್ಯತೆಯೂ ಇದೆ. ಇತರ ವೈರಸ್‌ಗಳಂತೆ ಇಲ್ಲಿ ಕೂಡಾ ಮರು ಸೊಂಕು ಸಾಧ್ಯ. ಆದರೆ ಪ್ರಮಾಣ ಕಡಿಮೆ. ಶೇಕಡ ಒಂದರಷ್ಟು ಕೋವಿಡ್-19 ರೋಗಿಗಳಲ್ಲಿ ಮಾತ್ರ ಮರು ಸೋಂಕು ಕಂಡುಬಂದಿದೆ" ಎಂದು ಐಸಿಎಂಆರ್‌ನ ಹಿರಿಯ ವೈರಾಣು ತಜ್ಞರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News