ಕೋಲಾರ: ಅಖಿಲ ಕರ್ನಾಟಕ ಕಲ್ಯಾಣಕ್ಕಾಗಿ ಜೆ‌ಡಿಯುನಿಂದ ಪಾದಯಾತ್ರೆಗೆ ಚಾಲನೆ

Update: 2020-09-19 04:35 GMT

ಕೋಲಾರ, ಸೆ.19: ಅಖಿಲ ಕರ್ನಾಟಕದ ಕಲ್ಯಾಣಕ್ಕಾಗಿ ಹಾಗೂ ಪರಿವಾರ ಸಂಯುಕ್ತ ಜನತಾದಳ ಪಕ್ಷದ ಪುನರ್ ಸಂಘಟನೆಗಾಗಿ ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್  ನೇತೃತ್ವದಲ್ಲಿ ಶುಕ್ರವಾರ ಕೋಲಾರದಿಂದ ಜನಜಾಗೃತಿ ಪಾದಯಾತ್ರೆ ಪ್ರಾರಂಭವಾಯಿತು.

ಕೋಲಾರ ನಗರದ ಗಾಂಧಿವನದಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆಗೆ ಹಾಗೂ ಬಂಗಾರಪೇಟೆ ವೃತ್ತದಲ್ಲಿರುವ ಡಾ:ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಮೊದಲ ಹಂತದ ಪಾದಯಾತ್ರೆಗೆ ಚಾಲನೆ ನೀಡಲಾಯಿತು. 

ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಮಾತನಾಡಿ, ಇಂದು ಪ್ರಾರಂಭವಾದ ಪಾದಯಾತ್ರೆ ಸೆ.21ರಂದು ಬೆಂಗಳೂರಿನ ಮೌರ್ಯ ವೃತ್ತದಲ್ಲಿರುವ ಗಾಂಧೀಜಿಯವರ ಪ್ರತಿಮೆ ಬಳಿ ಅಂತ್ಯಗೊಳ್ಳಲಿದೆ ಎಂದರು.

ರಾಜ್ಯದಲ್ಲಿ ಸುಮಾರು 2,000 ಕಿಲೋಮೀಟರ್ ಗಳಷ್ಟು ಪಾದಯಾತ್ರೆ ಮಾಡುವ ಮೂಲಕ ಜನಜಾಗೃತಿ ಮೂಡಿಸುವ ಗುರಿಯನ್ನು ಪಕ್ಷ ಹೊಂದಿದ್ದು,ಈ ಪಾದ ಯಾತ್ರೆಗೆ ಪಕ್ಷಾತೀತವಾಗಿ, ಜಾತ್ಯತೀತವಾಗಿ, ಭಾಷಾತೀತವಾಗಿ ಬೆಂಬಲ ನೀಡುವಂತೆ ಅವರು ಕೋರಿದರು.

ಕೋವಿಡ್ ಮಹಾಮಾರಿಗೆ ಸಿಲುಕಿ ಜನರ ಬದುಕು ಆರ್ಥಿಕವಾಗಿ ಜರ್ಜರಿತವಾಗಿದ್ದು, ಪರಿಹಾರ ಸಿಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆಂದು ಆರೋಪಿಸಿದ ಅವರು ಜನರ ಹಿತ ಕಾಪಾಡುವಲ್ಲಿ ಸರಕಾರ ಹಿನ್ನಡೆ ಅನುಭವಿಸಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಪರಿಹಾರ ನೀಡಬೇಕಾಗಿದ್ದ ರಾಜ್ಯ ಸರಕಾರ  ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣೆ ಕಾಯ್ದೆಗೆ ಸುಗ್ರೀವಾಜ್ಞೆ ತರುವುದರ ಮೂಲಕ ತಾನು ಉಳ್ಳವರ ಮತ್ತು ಉದ್ಯಮಿಗಳ ಪರವಾಗಿ ಇರುವುದನ್ನು ಸಾಬೀತುಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಮರಸವೇ ಜೀವನ’ ಎಂಬ ಸಂಕಲ್ಪದೊಂದಿಗೆ ನಡೆಯುವ ಈ ಪಾದಯಾತ್ರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಎರಡನೇ ಹಂತದ ಪಾದಯಾತ್ರೆ ಅಕ್ಟೋಬರ್ ಒಂದರಂದು ಪ್ರಾರಂಭವಾಗಲಿದೆ ಹಾಗೂ ಮೂರನೇ ಹಂತದ ಪಾದಯಾತ್ರೆ  ಹಾವೇರಿಯಿಂದ  ಕೂಡಲ ಸಂಗಮದವರೆಗೆ ನಡೆಯಲಿದೆ ಎಂದರು.

ಪಾದಯಾತ್ರೆಯಲ್ಲಿ ನಿರಂಜನ ದೇಸಿ ಕೇಂದ್ರದ ಸ್ವಾಮೀಜಿ, ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಡಾ:ನಾಗರಾಜ್, ಕೆ.ವಿ.ಶಿವರಾಂ, ಜಿ.ವಿ.ರಾಮಚಂದಯ್ಯ, ಯುವ ಘಟಕದ ಜಿಲ್ಲಾ ಅಧ್ಯಕ್ಷ ಗಂಗರಾಜು, ರಾಜ್ಯ  ಮುಖಂಡರುಗಳಾದ ಲಕ್ಕನ್,ಈ.ಆನಂದ್ , ಚಂದ್ರಶೇಖರ್ ಗಂಗೂರ್, ಧನಂಜಯ್, ಶೈಲಜಾ ಪಟೇಲ್, ಸುಮನ್, ದಯಾಳನ್, ಭವ್ಯಾ ವಿಶ್ವನಾಥ್, ಲಕ್ಷ್ಮಿ, ಕವಿತಾ, ಶಶಿಕುಮಾರ್ ಗೌಡ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News