ಕೇರಳ, ಪ.ಬಂಗಾಳದಲ್ಲಿ 9 ಮಂದಿ ಶಂಕಿತ ಅಲ್-ಖೈದಾ ಉಗ್ರರನ್ನು ಬಂಧಿಸಿದ ಎನ್‍ಐಎ

Update: 2020-09-19 08:03 GMT

ಹೊಸದಿಲ್ಲಿ: ದೇಶದ ವಿವಿಧೆಡೆಗಳಲ್ಲಿ ಉಗ್ರ ದಾಳಿ ನಡೆಸಲು ಸಂಚು ಹೂಡಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಏಜನ್ಸಿ  ಒಂಬತ್ತು ಮಂದಿ ಶಂಕಿತ ಅಲ್-ಖೈದಾ ಉಗ್ರರನ್ನು ಶನಿವಾರ ಬಂಧಿಸಿದೆ. ಪಾಕಿಸ್ತಾನದಲ್ಲಿರುವ ಉಗ್ರರ ಅಣತಿಯಂತೆ ಈ ಮಂದಿ ಕಾರ್ಯಾಚರಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಹಾಗೂ ಕೇರಳದ ಎರ್ಣಾಕುಳಂನಲ್ಲಿ ಇಂದು ಮುಂಜಾನೆ ನಡೆಸಿದ ಕಾರ್ಯಾಚರಣೆ ವೇಳೆ ಈ ಬಂಧನ ನಡೆದಿದೆ. ಬಂಧಿತರಿಂದ ದೇಶೀಯ ನಿರ್ಮಿತ ಪಿಸ್ತೂಲು, ದೇಹ ಕವಚ,  ಐಇಡಿ ತಯಾರಿಕೆ ಕುರಿತಾದ ಮಾಹಿತಿ ಪುಸ್ತಿಕೆ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಈ ತಂಡ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿರುವ ಕುರಿತ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಕಳೆದ ಹಲವಾರು ತಿಂಗಳು ಇವರ ಮೇಲೆ ನಿಗಾ ಇಟ್ಟಿದ್ದ ಏಜನ್ಸಿ ಇಂದು ಅವರನ್ನು ಬಂಧಿಸಿದೆ.

ಈ ಶಂಕಿತ ಉಗ್ರರ ತಂಡವನ್ನು ಎರ್ಣಾಕುಳಂನ ಮುರ್ಷೀದ್ ಹಸನ್ ಎಂಬಾತ ಮುನ್ನಡೆಸುತ್ತಿದ್ದು, ಕೇರಳ ಹಾಗೂ ಪಶ್ಚಿಮ ಬಂಗಾಳದ ವಿವಿಧೆಡೆ ಇದ್ದ ಈ ಗುಂಪಿನ ಸದಸ್ಯರು ಪರಸ್ಪರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

ಕೇರಳದಲ್ಲಿ ಬಂಧಿತ ಆರೋಪಿಗಳು ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು ಅವರು ಎರ್ಣಾಕುಳಂಗೆ ಕಾರ್ಮಿಕರಾಗಿ ತೆರಳಿದ್ದರು.  ಅವರೆಲ್ಲರೂ ಇತ್ತೀಚೆಗೆ ಬಾಂಬ್ ತಯಾರಿಗೆ ಅಗತ್ಯವಿರುವ ಬ್ಯಾಟರಿ, ಸ್ವಿಚ್, ವಯರ್ ಹಾಗೂ ಸುಡ್ಡುಮದ್ದುಗಳನ್ನು ಖರೀದಿಸಿದ್ದರು. ಹಾಗೂ ಪಟಾಕಿಯಲ್ಲಿನ ಪೊಟಾಶಿಯಂ ಕ್ಲೊರೇಟ್ ತೆಗೆದು ಅದನ್ನು ಸ್ಫೋಟಕ ತಯಾರಿಸಲು ಬಳಸುವ ಉದ್ದೇಶ ಹೊಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದಲ್ಲಿ ಬಂಧಿತರಾದವರನ್ನು ಮುರ್ಷಿದ್ ಹಸನ್, ಇಯಾಕೂಬ್ ಬಿಸ್ವ ಹಾಗೂ ಮೊಸರಫ್ ಹುಸೈನ್ ಎಂದು ಗುರುತಿಸಲಾಗಿದೆ. ಅವರಲ್ಲಿ ಇಬ್ಬರನ್ನು ಪೆರುಂಬವೋರ್ ಹಾಗೂ ಇನ್ನೊಬ್ಬನನ್ನು ಪಥಳಂ ಎಂಬಲ್ಲಿಂದ ಬಂಧಿಸಲಾಗಿದೆ. ಒಬ್ಬಾತ ಜವುಳಿ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ.

ಪಶ್ಚಿಮ ಬಂಗಾಳದಲ್ಲಿ ಬಂಧಿತರಾದವರನ್ನು ನಜ್ಮುಸ್ ಸಕೀಬ್, ಅಬು ಸುಫಿಯಾನ್, ಮೈನುಲ್ ಮೊಂಡಲ್, ಲಿಯು ಯೀನ್ ಅಹ್ಮದ್, ಅಲ್ ಮಮುನ್ ಕಮಲ್ ಹಾಗೂ ಅತಿತುರ್ ರಹ್ಮಾನ್ ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News