ಮೈಸೂರು: ಸಚಿವ ಸೋಮಶೇಖರ್ ಕಾರು ಅಡ್ಡಗಟ್ಟಿ ಮುತ್ತಿಗೆ ಹಾಕಿದ ರೈತರು

Update: 2020-09-19 08:47 GMT

ಮೈಸೂರು, ಸೆ.19: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ರೈತರು ಮುತ್ತಿಗೆ ಹಾಕಿ ಘೇರಾವ್ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

 ನಗರದ ಗನ್‌ಹೌಸ್ ಬಳಿ ಇರುವ ಶಂಕರಮಠದಲ್ಲಿ ಶನಿವಾರ ಮಾಧ್ಯಮ ಕೊರೋನ ಯೋಧರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಚಿವ ಸೋಮಶೇಖರ್ ಕಾರಿಗೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ರೈತರು ಅಡ್ಡಗಟ್ಟಿ ಮುತ್ತಿಗೆ ಹಾಕಿದರು. ಸಚಿವರು ಮತ್ತು ಸರಕಾರರದ ವಿರುದ್ಧ ರೈತರು ಧಿಕ್ಕಾರ ಕೂಗಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಕುರುಬೂರು ಶಾಂತಕುಮಾರ್ ಮಾತನಾಡಿ, ರೈತರ ಸಮಸ್ಯೆ ಆಲಿಸಲು ಜಿಲ್ಲಾ ಮಟ್ಟದ ಸಭೆ ಕರೆಯುವಂತೆ ಸೆ.8ರಂದೇ ಮನವಿ ಮಾಡಿದ್ದರೂ ನಿರ್ಲಕ್ಷ ಮಾಡಿದ್ದೀರಿ, ಕೊರೋನ, ರಸಗೊಬ್ಬರದ ಸಮಸ್ಯೆ, ನೆರೆಹಾವಳಿ, ಬೆಳೆ ಹಾನಿ ಸೇರಿದಂತೆ ಹಲವಾರು ಸಮಸ್ಯೆಗಳನ್ನು ರೈತರು ಎದುರಿಸುತಿದ್ದಾರೆ. ನಿಮಗೆ ರೈತರ ಬಗ್ಗೆ ಕಾಳಜಿ ಇಲ್ಲ, ಸೆ.21 ರಿಂದ ಅಧಿವೇಶನ ಪ್ರಾರಂಭವಾಗಲಿದೆ. ರೈತರ ಸಮಸ್ಯೆಯೇ ಗೊತ್ತಿಲ್ಲದಿದ್ದ ಮೇಲೆ ಅಧಿವೇಶನದಲ್ಲಿ ರೈತರ ಬಗ್ಗೆ ಏನು ಮಾತನಾಡುತ್ತೀರಿ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು.

ನಿಮ್ಮ ಸರಕಾರ ರೈತ ವಿರೋಧಿ ಆಡಳಿತ ನಡೆಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಭೂಸುಧಾರಣೆ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ಸೇರಿದಂತೆ ಹಲವಾರು ರೈತರ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದ್ದೀರಿ. ನಿಮಗೆ ರೈತರ ಸಮಸ್ಯೆಗಿಂತ ಉದ್ಯಮಿಗಳು, ರಿಯಲ್ ಎಸ್ಟೇಟ್‌ನವರ ಕಾಳಜಿಯೇ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಸೋಮಶೇಖರ್, ಈಗಾಗಲೇ ರೈತರ ಸಭೆ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸೆ.26ರಂದು ರೈತರ ಸಭೆ ನಿಗದಿಪಡಿಸಲಾಗಿದೆ. ನಿಮಗೂ ಇದರ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಅಷ್ಟರಲ್ಲಿ ನೀವು ಪ್ರತಿಭಟನೆ ನಡೆಸುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಪೊಲೀಸರು ಪ್ರತಿಭಟನಾನಿರತ ರೈತರನ್ನು ಸಮಾಧಾನಪಡಿಸಿ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟರು. ಪ್ರತಿಭಟನೆಯಲ್ಲಿ ಅತ್ತಹಳ್ಳಿ ದೇವರಾಜು, ಕಿರಗಸೂರು ಶಂಕರ್, ಹಾಡ್ಯ ರವಿ, ಸುಖೇಶ್, ಕೃಷ್ಣಪ್ಪ, ಶಿವರಾಜು, ಪ್ರಶಾಂತ್ ನಾಯಕ್, ರವಿ ಕೃಷೇಗೌಡ, ರವೀಂದ್ರ, ಮಂಜುನಾಥ್ ಸೇರಿದಂತ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News