ಜಿಎಸ್‍ಟಿ ಪಾಲು, ನೆರೆ ಪರಿಹಾರಕ್ಕೆ ಒತ್ತಾಯ: ಸಂಸದ ತೇಜಸ್ವಿ ಸೂರ್ಯ ಕಚೇರಿ ಮುಂಭಾಗ ಸಿಪಿಎಂ ಪ್ರತಿಭಟನೆ

Update: 2020-09-19 13:04 GMT

ಬೆಂಗಳೂರು, ಸೆ.19: ಕೇಂದ್ರ ಸರಕಾರ ರಾಜ್ಯದ ಜಿಎಸ್‍ಟಿ ಪಾಲು ಮತ್ತು ನೆರೆ ಪರಿಹಾರ ನೀಡಬೇಕು ಹಾಗೂ ರೈತ-ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ವಾಪಸ್ಸಿಗೆ ಒತ್ತಾಯಿಸಿ ಸಿಪಿಎಂ ವತಿಯಿಂದ ನಗರದ ಸಂಸದರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕಚೇರಿ ಮುಂಭಾಗ ಸಿಪಿಎಂ ಮುಖಂಡ ಕೆ.ಎನ್.ಉಮೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ದೇಶದಲ್ಲಿ ಜಿಎಸ್‍ಟಿ ಜಾರಿಯಾದ ನಂತರ ರಾಜ್ಯ ಸರಕಾರದ ಜಿಎಸ್‍ಟಿ ಪಾಲು ಕೇಂದ್ರ ಸರಕಾರಕ್ಕೆ ಸಂದಾಯವಾಗುತ್ತಿದ್ದು, ಅದನ್ನು ರಾಜ್ಯಕ್ಕೆ ಹಿಂದಿರುಗಿಸಬೇಕಾಗಿತ್ತು. ಹಾಗೂ ಜಿಎಸ್‍ಟಿ ಜಾರಿಯಾದ ಪ್ರಾರಂಭದ ಐದು ವರ್ಷಗಳ ಕಾಲ ರಾಜ್ಯಕ್ಕೆ ಕೇಂದ್ರ ಸರಕಾರವು ನೀಡಬೇಕಿರುವ ಪರಿಹಾರವು ಪೂರ್ಣ ಪ್ರಮಾಣದಲ್ಲಿ ರಾಜ್ಯಕ್ಕೆ ಬಂದಿಲ್ಲ. ಇದನ್ನು ರಾಜ್ಯಕ್ಕೆ ದೊರಕಿಸಿಕೊಡಬೇಕಾದದ್ದು ರಾಜ್ಯದ ಸಂಸದರ ಜವಾಬ್ದಾರಿ ಎಂದು ತಿಳಿಸಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳು ಅತಿವೃಷ್ಟಿಗೆ ತುತ್ತಾಗಿ ಕೃಷಿ ಬೆಳೆಗಳನ್ನು ಕಳೆದುಕೊಂಡು ಸಮಸ್ಯೆಗೆ ಸಿಲುಕಿದ್ದಾರೆ. ಮೂಲಭೂತ ಸೌಲಭ್ಯಗಳು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲವೂ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರಿಗೆ ಗೊತ್ತಿಲ್ಲದ ವಿಚಾರವಲ್ಲ. ಆದರೂ ರೈತರ, ಜನಸಾಮಾನ್ಯರ ಪರವಾಗಿ ಧ್ವನಿಯೆತ್ತಲು ಹಿಂದೇಟು ಹಾಕುತ್ತಿದ್ದು, ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದ್ದಾರೆಂದು ಕೆ.ಎನ್.ಉಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತ-ಕಾರ್ಮಿಕರ ಬದುಕನ್ನು ನಾಶ ಮಾಡುವಂತಹ ಕಾಯ್ದೆಗಳನ್ನು ಕೇಂದ್ರ ಸರಕಾರ ಜಾರಿ ಮಾಡುತ್ತಿದೆ. ರೈತ-ಕಾರ್ಮಿಕ ಸಮುದಾಯದೊಂದಿಗೆ ಸಮಾಲೋಚನೆ ನಡೆಸದ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡುತ್ತಿರುವ ಕಾಯ್ದೆಗಳು ಜನಪರವಾಗಿರಲು ಸಾಧ್ಯವೇ. ಈ ಕಾಯ್ದೆಗಳ ವಾಪಸ್ಸಾಗಲು ರಾಜ್ಯದ ಸಂಸದರು ಸಂಸತ್‍ನ ಅಧಿವೇಶನದಲ್ಲಿ ಧ್ವನಿಯೆತ್ತಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News