ಸಚಿವ ಸ್ಥಾನದ ರೇಸ್‍ನಲ್ಲಿ ನಾನಿಲ್ಲ: ಮೇಲ್ಮನೆ ಸದಸ್ಯ ಸಿ.ಪಿ.ಯೋಗೇಶ್ವರ್

Update: 2020-09-19 13:27 GMT

ಬೆಂಗಳೂರು, ಸೆ.19: ಸಚಿವ ಸ್ಥಾನದ ರೇಸ್‍ನಲ್ಲಿ ನಾನು ಇಲ್ಲ. ಆದರೆ, ಸಚಿವ ಸಂಪುಟದಲ್ಲಿ ಅವಕಾಶ ನೀಡಿದರೆ ಸಮರ್ಥವಾಗಿ ಕೆಲಸ ನಿರ್ವಹಿಸುತ್ತೇನೆ. ಇಲ್ಲವಾದರೆ ಪಕ್ಷ ಸಂಘಟನೆ ಮೂಲಕ ನನ್ನನ್ನು ನಾನು ಗುರುತಿಸಿಕೊಳ್ಳುತ್ತೇನೆ ಎಂದು ಸಚಿವ ಸ್ಥಾನದ ಆಕಾಂಕ್ಷಿ ಹಾಗೂ ಮೇಲ್ಮನೆ ಸದಸ್ಯ ಸಿ.ಪಿ.ಯೋಗೇಶ್ವರ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ನಿಶ್ಚಿತ. ಆದರೆ, ಈ ಬಗ್ಗೆ ನನಗೆ ಯಾವುದೇ ನಿಖರ ಮಾಹಿತಿ ಇಲ್ಲ. ಸಂಪುಟ ವಿಸ್ತರಣೆ ವಿಧಾನ ಮಂಡಲ ಅಧಿವೇಶನಕ್ಕೆ ಮೊದಲು ಅಥವಾ ನಂತರ ಎಂಬುದು ಗೊತ್ತಿಲ್ಲ. ಇತ್ತೀಚೆಗೆ ನಾನು ಹೊಸದಿಲ್ಲಿಗೂ ಮುಖಂಡರ ಭೇಟಿ ನಿಮಿತ್ತ ಹೋಗಿ ಬಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಅಪ್ರಸ್ತುತ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಅಂತಹ ಯಾವುದೇ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿಲ್ಲ. ವರಿಷ್ಠರ ಮಟ್ಟದಲ್ಲಿಯೂ ಈ ವಿಚಾರ ಚರ್ಚೆಗೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ ಯೋಗೇಶ್ವರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗಳು ಅಪ್ರಸ್ತುತ. ಅವರಿಬ್ಬರೂ ನಮ್ಮ ಪಕ್ಷದ ನಾಯಕರುಗಳಲ್ಲ ಎಂದರು.

ನನಗೆ ಸಚಿವ ಸ್ಥಾನ ನೀಡುವುದು ಅಥವಾ ಬಿಡುವುದು ನಮ್ಮ ಪಕ್ಷದ ವರಿಷ್ಠರಿಗೆ ಬಿಟ್ಟದ್ದು, ಎಚ್‍ಡಿಕೆ, ಡಿಕೆಶಿ ಅವರು ನನಗೆ ಸಿಗುವ ಸ್ಥಾನ ತಪ್ಪಿಸಲು ಸಾಧ್ಯವಿಲ್ಲ. ನಮ್ಮ ಪಕ್ಷದ ಮೇಲೆ ಪ್ರಭಾವ ಬೀರುವ ಶಕ್ತಿ ಅವರಿಬ್ಬರಿಗೂ ಇಲ್ಲ ಎಂದು ತಿರುಗೇಟು ನೀಡಿದ ಯೋಗೇಶ್ವರ್, ಯಾರಿಗೆ ಸಚಿವ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರ ವರಿಷ್ಟರೊಂದಿಗೆ ಚರ್ಚಿಸಿ ತೀರ್ಮಾನಿಸಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News