ಕೇಂದ್ರ, ರಾಜ್ಯ ಸರಕಾರಗಳ ರೈತ ವಿರೋಧಿ ನೀತಿ ಖಂಡಿಸಿ ವಿಧಾನಸೌಧಕ್ಕೆ ಮುತ್ತಿಗೆ: ಕೋಡಿಹಳ್ಳಿ ಚಂದ್ರಶೇಖರ್

Update: 2020-09-19 13:36 GMT

ಬೆಂಗಳೂರು, ಸೆ. 19: ರೈತರ ತೀವ್ರ ವಿರೋಧದ ಮಧ್ಯೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಮಸೂದೆ(ಅಧ್ಯಾದೇಶ)ಗಳನ್ನು ಕೇಂದ್ರ ಸರಕಾರ ಅನುಮೋದಿಸಿದೆ. ಅದೇ ರೀತಿಯಲ್ಲಿ ರಾಜ್ಯ ಸರಕಾರ ಜಾರಿಗೆ ಮುಂದಾಗಿರುವ ಭೂ ಸುಧಾರಣಾ ತಿದ್ದುಪಡಿ ಮತ್ತು ಎಪಿಎಂಸಿ ತಿದ್ದುಪಡಿ ಅಧ್ಯಾದೇಶಗಳನ್ನು ವಿರೋಧಿಸಿ ರಾಜ್ಯ ರೈತ ಸಂಘ ಸೆ.21ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರ ಈ ತೀರ್ಮಾನದಿಂದ ಕೃಷಿ ವಲಯದ ಅಪಾಯಕ್ಕೆ ಸಿಲುಕಲಿದ್ದು, ಕೃಷಿಗೆ ಸಂಬಂಧಿಸಿದ ಅಧ್ಯಾದೇಶಗಳನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ಸೆ.21ರ ಸೋಮವಾರ ಬೆಳಗ್ಗೆ 11:15 ಗಂಟೆಗೆ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧದ ವರೆಗೆ ರೈತರ ಬೃಹತ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

`ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ(ಉತ್ತೇಜನ ಮತ್ತು ನೆರವು), ಬೆಲೆ ಖಾತರಿ ಮಸೂದೆ ಹಾಗೂ ಬೇಸಾಯ ಸೇವೆಗಳಿಗೆ ರೈತರ ಒಪ್ಪಿಗೆ(ಸಶಕ್ತೀಕರಣ ಹಾಗೂ ರಕ್ಷಣೆ) ಮಸೂದೆ ಸೇರಿದಂತೆ ಮಸೂದೆಗಳನ್ನು ಕೇಂದ್ರ ಸರಕಾರ ಸೆ.18ರಂದು ಅಂಗೀಕರಿಸಿದೆ. ಮಸೂದೆ ತಿದ್ದುಪಡಿಯನ್ನು ವಿರೋಧಿಸಿದ ಕೇಂದ್ರ ಆಹಾರ ಸಂಸ್ಕರಣೆ ಉದ್ದಿಮೆ ಖಾತೆ ಸಚಿವೆ ಹರ್ಸಿಮ್ರತ್ ಕೌರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಇದರಿಂದ ಉಂಟಾಗಿರುವ ಪರಿಣಾಮವನ್ನು ಎದುರಿಸಲು ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ರೈತರ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಈ ತಿದ್ದುಪಡಿ ಕಾನೂನಿನಿಂದ ದೇಶದ ರೈತರು ಕೃಷಿಯನ್ನು ತೊರೆಯಬೇಕಾದ ಅನಿವಾರ್ಯತೆಯನ್ನು ಕೇಂದ್ರ ಸರಕಾರ ಸೃಷ್ಟಿಸಲಿದೆ. ಇದರ ಜೊತೆಗೆ ಈಗಾಗಲೆ ಕೃಷಿಯನ್ನು ನಂಬಿದ ರೈತರ ಬದುಕು ಮೂರಾಬಟ್ಟೆಯಾಗಲಿದ್ದು, ಭಾರತದ ಕೃಷಿ ಮಾರುಕಟ್ಟೆಯ ನೀತಿ ತಲೆಕೆಳಗಾಗಲಿದೆ. ಇದರ ಜೊತೆಗೆ ಕಾರ್ಪೋರೇಟ್ ಕಂಪೆನಿಗಳಿಗೆ ರತ್ನಗಂಬಳಿಯನ್ನು ಹಾಕಿ ಅವರನ್ನು ಬರಮಾಡಿಕೊಂಡು ಅವರುಗಳಿಗೆ ಕೃಷಿ ಮಾರುಕಟ್ಟೆಯನ್ನು ವರ್ಗಾಯಿಸುವ ಕಾರ್ಯಕ್ರಮ ಇದಾಗಿದೆ ಎಂದು ಕೋಡಿಹಳ್ಳಿ ಟೀಕಿಸಿದ್ದಾರೆ.

ಅಗತ್ಯ ವಸ್ತುಗಳ ಕಾಯ್ದೆಯ ಕೆಳಗಡೆ ತಿದ್ದುಪಡಿಯ ಪರಿಣಾಮದಿಂದ ಎಫ್‍ಸಿಐ(ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ) ಕಳೆದು ಹೋಗಲಿದೆ. ಆಹಾರದ ಸರಬರಾಜು ಮತ್ತು ಶೇಖರಣೆ ಆಹಾರದ ಭದ್ರತೆಯ ವಿಷಯಲ್ಲಿ (ಫಿಡಿಎಫ್)ಸಾರ್ವಜನಿಕ ವಿತರಣಾ ಪದ್ದತಿಗಳು ನೆನಗುಂದಿಗೆ ಬೀಳಲಿವೆ. ಹಾಗೆಯೇ ಕೃಷಿ ವಲಯದ ಎಣ್ಣೆ ಕಾಳುಗಳು, ದ್ವಿದಳ ಧಾನ್ಯಗಳು, ಈರುಳ್ಳಿ, ಆಲೂಗೆಡ್ಡೆ ಹಾಗೂ ಸಿರಿಧಾನ್ಯಗಳು ಅಗತ್ಯ ವಸ್ತು ಕಾಯ್ದೆಯಿಂದ ದೂರವಾಗಿ ಕಾರ್ಪೋರೇಟ್ ಕಂಪೆನಿಗಳ ದಾಸ್ತಾನು (ಸ್ಟಾಕ್ ಮಾರ್ಕೆಟ್) ಮಾರುಕಟ್ಟೆಗೆ ಸೇರಲಿದೆ. ಕೇಂದ್ರ ಸರಕಾರ ಬೆಲೆ ಭದ್ರತೆಗೆ ಸಂಬಂಧಿಸಿದ ನೀತಿಯನ್ನು ಸಂಸತ್ ಅಂಗೀಕರಿಸಿದೆ. ಇದರಿಂದ (ಎಂಎಸ್‍ಪಿ) ಕನಿಷ್ಠ ಬೆಂಬಲ ಬೆಲೆ ಇದಕ್ಕೆ ಸಂಬಂಧಪಟ್ಟಂತಹ ನೀತಿಗಳು ನಿಧಾನವಾಗಿ ರೈತರ ಕೈತಪ್ಪಿ ಹೋಗಲಿವೆ. ಈ ನೀತಿಗಳನ್ನು ಜಾರಿಗೊಳಿಸಿದ ಉದ್ದೇಶ ರೈತರ ವಿರುದ್ಧವಾದಂತ ಕಾನೂನು ಜಾರಿಗೊಳ್ಳಲಿದೆ. ಆದರೆ, ಪ್ರಧಾನಿ ಮೋದಿ ಮಾತ್ರ ಇದು ವಿರೋಧ ಪಕ್ಷದವರ ಅಪಪ್ರಚಾರ ಎಂಬ ತೋರಿಕೆಯ ಮಾತುಗಳನ್ನು ಆಡುತ್ತಿದ್ದಾರೆ ಎಂದು ಕೋಡಿಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಟ್ಟ ಮಾತು ಉಳಿಸಿಕೊಳ್ಳಿ: ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವಾಗ `ನನ್ನದು ರೈತ ಪರ ಸರಕಾರ, ನಾನು ರೈತರ ಸಮಸ್ಯೆಗಳನ್ನು ದೂರಮಾಡುತ್ತೇನೆ, ರೈತರ ಸಾಲಮನ್ನಾ ಮಾಡುತ್ತೇನೆ, ರೈತರ ನೆಮ್ಮದಿಯ ಬದುಕಿಗೆ ಸಹಾಯ ಮಾಡುತ್ತೇನೆ ಮತ್ತು ರೈತರ ಬೆಳೆಗಳಿಗೆ ಯೋಗ್ಯ ಬೆಲೆ ನೀಡುತೇನೆ' ಎಂದು ಹೇಳಿದ್ದರು. ಆದರೆ, ಅವರು ಇದೀಗ ಮಾಡುತ್ತಿರುವುದೇನು? ಎಂದು ಕೋಡಿಹಳ್ಳಿ ಪ್ರಶ್ನಿಸಿದ್ದಾರೆ.

`ಭೂ ಸುಧಾರಣಾ ಕಾಯ್ದೆ-1961ರಲ್ಲಿ ಕೃಷಿ ಭೂಮಿಯನ್ನು ರಕ್ಷಿಸುವ ಮುಂದಿನ ತಲೆಮಾರುಗಳಿಗೆ ಸುರಕ್ಷಿತವಾಗಿ ಹಸ್ತಾಂತರಿಸುವ ಮತ್ತು ಕೃಷಿ ಹೆಸರಿನಲ್ಲಿ ಕೃಷಿ ಭೂಮಿಗೆ ಆಗುವ ಅನಾಚಾರ ತಪ್ಪಿಸಲು ಕೃಷಿ ಭೂಮಿ ನಮ್ಮೆಲ್ಲರ ಅನ್ನ ನೀಡುವ ಊಟದ ಬಟ್ಟಲು ಎಂದು ಪರಿಗಣಿಸಿ ಇದರ ಜೋಪಾನ ಮತ್ತು ಇದರ ಹಕ್ಕನ್ನು ಕೃಷಿಕನಿಗೆ ನೀಡಲಾಯಿತು' ಇದೀಗ ಕೃಷಿ ಭೂಮಿಯನ್ನು ವ್ಯಾಪಾರದ ವಸ್ತು ರೀತಿಯಲ್ಲಿ ಕಾರ್ಪೋರೇಟ್, ಬಹುರಾಷ್ಟ್ರೀಯ ಕಂಪೆನಿಗಳಿಗೆ ಕೃಷಿ ಭೂಮಿಯನ್ನು ಹಸ್ತಾಂತರಿಸುವಂತೆ ಕೇಂದ್ರದ ನಿರ್ದೇಶನದಂತೆ ರಾಜ್ಯ ಸರಕಾರ ತೆಗೆದುಕೊಂಡಿರುವ ತೀರ್ಮಾನ ರಾಜ್ಯದ ಕೃಷಿಕರ ದುರಂತವೇ ಸರಿ. ಹೀಗಾಗಿ ರೈತ ವಿರೋಧಿ ಕಾನೂನುಗಳ ತಿದ್ದುಪಡಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ವಿಧಾನಸೌಧ ಮುತ್ತಿಗೆ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News