ಹಿಂದಿ ಹೇರಿಕೆಯನ್ನು ಒಪ್ಪಲು ಸಾಧ್ಯವಿಲ್ಲ: ಸಂಸತ್ ನಲ್ಲಿ ಆಕ್ರೋಶ ಹೊರಹಾಕಿದ ಸುಮಲತಾ ಅಂಬರೀಶ್

Update: 2020-09-19 14:08 GMT

ಹೊಸದಿಲ್ಲಿ, ಸೆ. 19: `ಹಿಂದಿ ಭಾಷೆಯನ್ನು ನಾವು ಗೌರವಿಸುತ್ತೇವೆ. ಆದರೆ, ನಮ್ಮ ಮಾತೃಭಾಷೆ ಕನ್ನಡಕ್ಕೂ ಅಷ್ಟೇ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ಹಿಂದಿ ಭಾಷೆ ಹೇರಿಕೆಯನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಲೋಕಸಭೆಯಲ್ಲಿ ಹಿಂದಿ ಭಾಷೆ ಹೇರಿಕೆಗೆ ಮುಂದಾಗಿರುವ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಲೋಕಸಭೆಯ ಶೂನ್ಯ ವೇಳೆಯಲ್ಲಿ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಸುಮಲತಾ ಅಂಬರೀಶ್ ಅವರು, ನಮ್ಮ ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಇಲ್ಲಿನ ಭಾಷಾ ವೈವಿಧ್ಯತೆಗಳಿಂದಾಗಿ ಇಡೀ ವಿಶ್ವದಲ್ಲೇ ಒಂದು ಗುಣಮಟ್ಟದ ದೇಶವಾಗಿದೆ. ಕರ್ನಾಟಕ ರಾಜ್ಯವು ಬಹುತ್ವದ ಪರಂಪರೆ ಮತ್ತು ಸಂಪ್ರದಾಯವನ್ನು ಮೈಗೂಡಿಸಿಕೊಂಡಿದ್ದು, ಅದನ್ನು ನಾವೆಲ್ಲರೂ ಗೌರವಿಸುತ್ತಿದ್ದೇವೆ ಎಂದು ಹೇಳಿದರು.

ನಮ್ಮ ರಾಜ್ಯ ಭಾಷೆ ಕನ್ನಡ, ಸಾವಿರಾರು ವರ್ಷಗಳ ಅತ್ಯಂತ ಪುರಾತನ ಭಾಷೆಯಾಗಿದೆ. ಜೊತೆಗೆ ಕೇಂದ್ರ ಸರಕಾರವು ಕನ್ನಡ ಭಾಷೆಗೆ `ಶಾಸ್ತ್ರೀಯ ಭಾಷೆ' ಸ್ಥಾನಮಾನದ ಗೌರವವನ್ನು ನೀಡಿದೆ. ದೇಶದ ಗಡಿಯಾಚೆಗೆ ನಮ್ಮ ಸಂಪ್ರದಾಯ ಮತ್ತು ಪ್ರಾದೇಶಿಕ ಭಾಷೆ ವಿಸ್ತರಿಸಿಕೊಂಡಿದೆ ಎಂದ ಅವರು, ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ದಕ್ಷಿಣ ಭಾರತದ ಲಕ್ಷಾಂತರ ಮಂದಿಯ ಪರವಾಗಿ ನಾನು ಇಲ್ಲಿ ಮಾತನಾಡುತ್ತಿದ್ದೇನೆ. ಹಿಂದಿ ಭಾಷೆ ಸಂವಹನಕ್ಕೆ ಪ್ರಮುಖ ಭಾಷೆಯಾಗಿದ್ದರೂ ಇದರ ಜೊತೆಗೆ ಪ್ರಾದೇಶಿಕ ಭಾಷೆಗಳಿಗೂ ಆದ್ಯತೆ ನೀಡಬೇಕು. ಹಿಂದಿ ಭಾಷೆಯನ್ನು ನಾವು ಗೌರವಿಸುತ್ತೇವೆ. ಆದರೆ, ನಮ್ಮ ಮಾತೃಭಾಷೆ ಕನ್ನಡಕ್ಕೂ ಆದ್ಯತೆ ನೀಡಬೇಕು. `ನಾವು ಕನ್ನಡಿಗರು, ಭಾರತೀಯರು' ಎಂದು ಕನ್ನಡದಲ್ಲೇ ಪ್ರಸ್ತಾಪಿಸಿದ ಸುಲಮತಾ ಅವರು, ಈ ವಿಷಯವನ್ನು ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದರು.

ಹಿಂದಿ ಹೇರಿಕೆಯಿಂದ ಸ್ಥಳೀಯ ಪ್ರಾದೇಶಿಕ ಭಾಷೆಗಳಿಗೆ ಸೂಕ್ತ ಆದ್ಯತೆ ಸಿಗುತ್ತಿಲ್ಲ. ಹೀಗಾಗಿ ಕೇಂದ್ರ ಸರಕಾರ ಹಲವು ಮಹತ್ವದ ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ನೀತಿ-ನಿರೂಪಣೆಯಲ್ಲಿ ಪ್ರಾದೇಶಿಕ ಭಾಷೆಗಳನ್ನು ಉಳಿಸುವ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಆಸ್ಥೆ ವಹಿಸಬೇಕು ಎಂದು ಸುಮಲತಾ ಅಂಬರೀಶ್ ಇದೇ ವೇಳೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News