ದೇವರಾಜ ಅರಸು ಅವರಿಗೆ 'ಭಾರತ ರತ್ನ' ನೀಡಲು ಆಗ್ರಹಿಸಿ ಪ್ರಧಾನಿಗೆ ಪತ್ರ

Update: 2020-09-19 15:06 GMT

ಬೆಂಗಳೂರು, ಸೆ.19: ಮಾಜಿ ಮುಖ್ಯಮಂತ್ರಿ ಹಾಗೂ ಭೂ ಸುಧಾರಣಾ ಹರಿಕಾರ ಡಿ.ದೇವರಾಜ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಡಾ.ಮನೋಹರ ಲೋಹಿಯಾ ಚಿಂತಕರ ವೇದಿಕೆ ಪ್ರಧಾನಿಗೆ ಪತ್ರ ಬರೆದಿದೆ.

ಸ್ವಾತಂತ್ರ್ಯೋತ್ತರ ಭಾರತದ ನಿರ್ಮಾಣದಲ್ಲಿ ದೇವರಾಜ ಅರಸು ಅವರು ಮಹತ್ವದ ಪಾತ್ರ ವಹಿಸಿದ್ದರು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಜಾರಿಗೊಳಿಸಿದ ‘ಕರ್ನಾಟಕ ಭೂ ಸುಧಾರಣಾ ಕಾಯ್ದೆ–1961’ ರಾಜ್ಯದಲ್ಲಿ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ರೈತಾಪಿ ವರ್ಗದಲ್ಲಿ ಭೂಹಿಡುವಳಿಯ ಸ್ವರೂಪದ ಬದಲಾವಣೆಗೆ ಈ ಐತಿಹಾಸಿಕ ಕಾಯ್ದೆ ಕಾರಣವಾಗಿದೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ, ಸಾಹಿತಿ ಬರಗೂರು ರಾಮಚಂದ್ರಪ್ಪ, ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ಡಾ. ರಾಮ ಮನೋಹರ ಲೋಹಿಯಾ ಚಿಂತಕರ ವೇದಿಕೆ ಅಧ್ಯಕ್ಷ ಬಿ.ಎಸ್. ಶಿವಣ್ಣ, ವಕೀಲ ಲಕ್ಷ್ಮಿನಾರಾಯಣ್, ಚಿಂತಕ ಬಂಜಗೆರೆ ಜಯಪ್ರಕಾಶ್, ವಕೀಲ ಇಸ್ಮಾಯಿಲ್ ಝಬಿವುಲ್ಲಾ ಮತ್ತು ಶಿಕ್ಷಣ ತಜ್ಞ ಭೀಮಣ್ಣ ಮೇಟಿ ಪ್ರಧಾನಿಗೆ ಶನಿವಾರ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದೇವರಾಜ ಅರಸು ತಮ್ಮ ಕಾಲವನ್ನು ಮೀರಿ ಯೋಚನೆ ಮಾಡಿ ಆಡಳಿತದಲ್ಲಿ ತಂತ್ರಜ್ಞಾನವನ್ನು ಅಳವಡಿಸಿದ್ದರು. ಅಲ್ಲದೆ, ಜನಪರವಾಗಿ, ರೈತರ ಪರವಾಗಿ ಸದಾ ತುಡಿಯುತ್ತಿದ್ದ ಅವರು, ಅವರ ಪರವಾದ ಕಾಯ್ದೆಗಳನ್ನು ಜಾರಿ ಮಾಡಿದ್ದಾರೆ. ಅಮಾನುಷ ಪದ್ಧತಿಯಾದ ಜೀತ ಪದ್ಧತಿಯನ್ನು ನಿಷೇಧಿಸಿದರು. ಅಲ್ಲದೆ, ಭೂರಹಿತ ಕಾರ್ಮಿಕರ ಮಕ್ಕಳಿಗಾಗಿ ವಿದ್ಯಾರ್ಥಿ ನಿಲಯಗಳ ಆರಂಭ, ಭಿಕ್ಷುಕರ ಪುನರ್ವಸತಿ, ಋಣಮುಕ್ತ ಯೋಜನೆ, ವಲಸೆ ಕಾರ್ಮಿಕರಿಗಾಗಿ ಆಶ್ರಯ ತಾಣಗಳನ್ನು ನಿರ್ಮಿಸುವ ಯೋಜನೆಗಳನ್ನು ಜಾರಿಗೊಳಿಸಿದ್ದರು ಎಂದು ಪತ್ರದಲ್ಲಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಅರಸು ಇಡೀ ದೇಶವೇ ಮೆಚ್ಚುವಂತಹ ನಾಯಕರಾಗಿದ್ದಾರೆ. ಹೀಗಾಗಿ, ಅವರ ಸಾಧನೆಯನ್ನು ಗಣನೆಗೆ ತೆಗೆದುಕೊಂಡು ಅವರಿಗೆ ಮರಣೋತ್ತರ ಭಾರತ ರತ್ನ ನೀಡುವುದು ನ್ಯಾಯವಾಗಿದೆ ಎಂದು ಪತ್ರದ ಮೂಲಕ ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News