ಗಡಿ ನಿಯಂತ್ರಣ ರೇಖೆಯಲ್ಲಿ ಕಳೆದ 8 ತಿಂಗಳಲ್ಲಿ ಪಾಕಿಸ್ತಾನದಿಂದ 3,000 ಬಾರಿ ಕದನ ವಿರಾಮ ಉಲ್ಲಂಘನೆ

Update: 2020-09-19 16:03 GMT

ಶ್ರೀನಗರ, ಸೆ. 19: ಜಮ್ಮುವಿನ ಗಡಿ ನಿಯಂತ್ರಣ ರೇಖೆಯಲ್ಲಿ ಕಳೆದ 8 ತಿಂಗಳಲ್ಲಿ (ಜನವರಿ 1ರಿಂದ ಸೆಪ್ಟಂಬರ್ 7) ಪಾಕಿಸ್ತಾನ 3,186 ಬಾರಿ ಕದನ ವಿರಾಮ ಉಲ್ಲಂಘಿಸಿದೆ ಎಂದು ಕೇಂದ್ರ ಸರಕಾರ ಈ ವಾರ ಸಂಸತ್ತಿಗೆ ತಿಳಿಸಿದೆ.

2003ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮಾಡಿಕೊಂಡ ಕದನ ವಿರಾಮ ಒಪ್ಪಂದದ ಬಳಿಕ 17 ವರ್ಷಗಳಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಕದನ ವಿರಾಮ ಉಲ್ಲಂಘನೆ ನಡೆದಿರುವುದು ಈ ವರ್ಷ. ಇದಲ್ಲದೆ, ಪಾಕಿಸ್ತಾನದೊಂದಿಗಿನ ಅಂತಾರಾಷ್ಟ್ರೀಯ ಗಡಿಯ ಜಮ್ಮು ವಲಯದಲ್ಲಿ ಗಡಿಯಾಚೆಯಿಂದ ಗುಂಡು ಹಾರಾಟ (ಜನವರಿ 1ರಿಂದ ಆಗಸ್ಟ್ 31)ದ 242 ಘಟನೆಗಳು ನಡೆದಿವೆ ಎಂದು ರಕ್ಷಣಾ ಖಾತೆಯ ಸಹಾಯಕ ಸಚಿವ ಶ್ರೀಪಾದ್ ನಾಯಕ್ ರಾಜ್ಯಸಭೆಗೆ ತಿಳಿಸಿದರು.

‘‘ಗಡಿಯಾಚೆಯಿಂದ ಹಾರಿಸಿದ ಗುಂಡಿಗೆ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡಿತ್ತು. ಸ್ಥಾಪಿತ ಮಾಧ್ಯಮ ಹಾಗೂ ಶಿಷ್ಟಾಚಾರಗಳ ಮೂಲಕ ಪಾಕಿಸ್ತಾನಕ್ಕೆ ಈ ಎಲ್ಲ ಕದನ ವಿರಾಮ ಉಲ್ಲಂಘನೆಯ ಮಾಹಿತಿ ನೀಡಲಾಗಿತ್ತು’’ ಎಂದು ಅವರು ತಿಳಿಸಿದ್ದಾರೆ.

ಈ ವರ್ಷ ಕದನ ವಿರಾಮ ಉಲ್ಲಂಘನೆಗಳ ಸಂದರ್ಭ ನಮ್ಮ ದೇಶಕ್ಕಾಗಿ 8 ಮಂದಿ ಸೇನಾ ಸಿಬ್ಬಂದಿ ಪ್ರಾಣ ಅರ್ಪಿಸಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದಾರೆ. ಮಹಿಳೆಯರು, ಪುರುಷರು ಹಾಗೂ ಮಕ್ಕಳು ಸೇರಿದಂತೆ ದೊಡ್ಡ ಸಂಖ್ಯೆ ಅಮಾಯಕ ನಾಗರಿಕರು ಹತ್ಯೆಯಾಗಿದ್ದಾರೆ. ಅಸಂಖ್ಯಾತ ಮನೆಗಳು ಹಾಗೂ ಕಟ್ಟಡಗಳು ನಾಶವಾಗಿವೆ ಎಂದು ಮೂಲಗಳು ತಿಳಿಸಿವೆ. 2019ರಲ್ಲಿ ಕೇವಲ 2000 ಕದನ ವಿರಾಮ ಉಲ್ಲಂಘನೆಯ ಪ್ರಕರಣಗಳು ನಡೆದಿವೆ. ಚೀನಾದೊಂದಿಗಿನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆ ಸೃಷ್ಟಿಯಾದ ಸಂದರ್ಭ ಕೂಡ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ ಎಂದು ಅವು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News