ಮಳೆಯ ನಡುವೆಯೇ ಜಿಲ್ಲಾಡಳಿತ ಭವನದ ಮುಂದೆ ಏಕಾಂಗಿ ಪ್ರತಿಭಟನೆ ನಡೆಸಿದ ಶಾಸಕಿ ರೂಪ ಶಶಿಧರ್

Update: 2020-09-19 17:22 GMT

ಕೋಲಾರ, ಸೆ.19: ಬಹುಕಾಲದಿಂದ ನನೆಗುದಿಗೆ ಬಿದ್ದಿರುವ ಅಶೋಕ ನಗರ ರಸ್ತೆ ಅಗಲೀಕರಣ ಕಾಮಗಾರಿ ಮುಂದುವರಿಸಲು ಒತ್ತಾಯಿಸಿ ಶಾಸಕಿ ರೂಪ ಶಶಿಧರ್ ಅವರು ಜಿಲ್ಲಾಧಿಕಾರಿ ಕಚೇರಿ ಎದುರು ಸುರಿಯುವ ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸಿದರು.

ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿ ಮೌನ ಪ್ರತಿಭಟನೆ ನಡೆಸಿದ ಶಾಸಕಿ, ಕಾಣದ ಕೈಗಳ ಒತ್ತಡಕ್ಕೆ ಮಣಿದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ರಸ್ತೆ ಅಗಲೀಕರಣ ಕಾಮಗಾರಿ ನಡೆಸದೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದಾಗಿ ದೂರಿದರು.

ಕೆಜಿಎಫ್​ ನಗರದ ಅಶೋಕನಗರ ರಸ್ತೆ ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಹಾಗಾಗಿ ಸಮರ್ಪಕ ಉತ್ತರ ಸಿಗುವ ತನಕ  ಜಿಲ್ಲಾಧಿಕಾರಿ ಹಾಗೂ ಪಿಡಬ್ಲ್ಯೂಡಿ ಇಲಾಖೆ ವಿರುದ್ಧ ಪ್ರತಿಭಟನೆ ನಿಲ್ಲದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋರ್ಟ್​ ಆದೇಶವಿದ್ದರೂ 8 ತಿಂಗಳಿಂದ ಕಾಮಗಾರಿ ಮಾಡದ್ದಕ್ಕೆ ಆಕ್ರೋಶಗೊಂಡ ಶಾಸಕಿ ಈ ಹಿಂದೆಯೂ ಒಮ್ಮೆ ಮಳೆಯಲ್ಲೆ ನಿಂತು ಪ್ರತಿಭಟನೆ ಮಾಡಿ ಜಿಲ್ಲಾಡಳಿತದ ಗಮನ ಸೆಳೆದಿದ್ದರು.

ಶಾಸಕಿ ಸುಮಾರು 6 ಗಂಟೆಗಳ ನಿರಂತರವಾಗಿ ಪ್ರತಿಭಟನೆ ನಡೆಸಿದ್ದು, ಬಳಿಕ ಜಿಲ್ಲಾಧಿಕಾರಿ ಸತ್ಯಭಾಮ ಸ್ಥಳಕ್ಕಾಗಮಿಸಿದರು. ಈ ವೇಳೆ ಕ್ಷೇತ್ರದ ಸಮಸ್ಯೆ ಆಲಿಸಲು ನಿಮಗೆ ಸಮಯ ಇಲ್ಲ ಎಂದು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಕೆಲ ಸಮಯ ಪರಸ್ವರ ಮಾತಿನ ಚಕಮಕಿ ಉಂಟಾಯಿತು. ಬೇಕೆಂದೇ ರಸ್ತೆ ಕಾಮಗಾರಿ ವಿಚಾರವನ್ನು ಮೂಲೆಗುಂಪು ಮಾಡಲಾಗಿದೆ ಎಂದು ಶಾಸಕಿ ದೂರಿದರು.

ಇದಕ್ಕೆ ಜಿಲ್ಲಾಧಿಕಾರಿಗಳು, ನೀವು ಭಾವೋದ್ವೇಗಕ್ಕೆ ಒಳಗಾಗ ಬೇಡಿ. ಅದು ನನ್ನ ಜವಾಬ್ದಾರಿ. ನಾನು ಮಾಡುವೆ ಎನ್ನುತ್ತಿದ್ದಂತೆಯೇ ಕೆರಳಿದ ಶಾಸಕರು, ಜಿಲ್ಲಾಧಿಕಾರಿಯಾಗಿ ನೀವು ಎರಡು ಸಭೆ ನಡೆಸಿದ್ದೀರ. ಮತ್ತೆ ಗೊತ್ತಿಲ್ಲ ಎಂದು ಯಾಕೆ ಹೇಳುತ್ತೀರಿ ಎಂದು ಮರು ಪ್ರಶ್ನಿಸಿದರು.

ಮಾತಿನ ಚಕಮಕಿ ನಂತರ ಜಿಲ್ಲಾಧಿಕಾರಿ ಮುಂಗಾರು ಅಧಿವೇಶನ ಮುಗಿದ ನಂತರ ರಸ್ತೆ ತೆರವು ಕಾರ್ಯ ಹಾಗು ಕಾಮಗಾರಿಯನ್ನು ನಡೆಸುವ ಕುರಿತು ಭರವಸೆ ನೀಡಿದ್ದಾರೆ ಎನ್ನಲಾಗಿದ್ದು, ನಂತರ ಶಾಸಕಿ ಪ್ರತಿಭಟನೆ ಕೈ ಬಿಟ್ಟರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News