ಸರಕಾರದಿಂದ ಅತಿಥಿ ಶಿಕ್ಷಕರ ಸಮಸ್ಯೆಗೆ ಸುಳ್ಳಿನ ಭರವಸೆ: ಎಸ್.ಆರ್.ಹಿರೇಮಠ ಆರೋಪ

Update: 2020-09-19 16:55 GMT

ಬೆಂಗಳೂರು, ಸೆ.19: ರಾಜ್ಯ ಸರಕಾರ ಸಂಕಷ್ಟದಲ್ಲಿರುವ ಅತಿಥಿ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುವುದನ್ನು ಬಿಟ್ಟು ಕೇವಲ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಕಾಲ ದೂಡುತ್ತಿದೆ ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಆರೋಪಿಸಿದ್ದಾರೆ.

ಅತಿಥಿ ಶಿಕ್ಷಕರ ಹೋರಾಟ ಸಮಿತಿ ಹಾಗೂ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಸರಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಆನ್‍ಲೈನ್ ಸಮಾವೇಶದ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ನಾಗರಿಕರನ್ನು ಸೃಷ್ಟಿ ಮಾಡುವಂತಹ ಶಿಕ್ಷಕರಿಗೆ ನೆಮ್ಮದಿಯ ಹಾಗೂ ಸೃಜನಶೀಲ ವಾತಾವರಣ ನಿರ್ಮಾಣ ಮಾಡಬೇಕಿರುವುದು ಸರಕಾರದ ಆದ್ಯ ಕರ್ತವ್ಯವಾಗಬೇಕಿತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲವೆಂದು ವಿಷಾದಿಸಿದರು.

ಇಂದಿನ ಸರಕಾರಗಳು ಜನಗಳಿಗೆ ಅಗತ್ಯವಿರುವುದನ್ನು ಬಿಟ್ಟು ಜನವಿರೋಧಿ ನೀತಿಗಳನ್ನು ಜಾರಿ ಮಾಡುವಲ್ಲಿ ನಿರತವಾಗಿದೆ. ದೇಶದಲ್ಲಿ ದಿನಕಳೆದಂತೆ ನಿರುದ್ಯೋಗ ಹೆಚ್ಚಳ, ದೇಶದ ಆರ್ಥಿಕತೆ ಕುಂಠಿತವಾಗುತ್ತಿದೆ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಿಂಚಿತ್ತೂ ಯೋಚಿಸುತ್ತಿಲ್ಲ. ಬದಲಿಗೆ, ಬಂಡವಾಳಶಾಹಿಗಳ ಪರವಾದ ನೀತಿಗಳನ್ನು ಜಾರಿ ಮಾಡುವಲ್ಲಿ ಮಗ್ನವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಂತಕ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ಸರಕಾರಗಳು ಏಕಸ್ವಾಮ್ಯವಾಗಿ ಜಾರಿ ಮಾಡುತ್ತಿರುವ ಜನವಿರೋಧಿ ನೀತಿಗಳನ್ನು ಪ್ರಶ್ನಿಸುವವರನ್ನು ಬಂಧಿಸಿ ಜೈಲು ಹಾಕಲಾಗುತ್ತಿದೆ. ಇವತ್ತಿನ ವ್ಯವಸ್ಥೆಯಲ್ಲಿ ಹಣವುಳ್ಳವರು ತಮಗೆ ಬೇಕಾದ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ತರಲಾಗಿದೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಕೆ.ವೀರಭದ್ರಪ್ಪ, ಚಿತ್ರಲೇಖ, ಶೃತಿ ಉಡುಪಿ, ವೀರಣ್ಣಗರಗ, ತಿರುಮಲ ಡಿ.ಜಿ., ಗಣಪತಿ ಕೊಳ್ಳಿ, ಶ್ರೀದೇವಿ ಮಲ್ಕಂಡಿ ಸೇರಿದಂತೆ ಹಲವರು ಮಾತನಾಡಿದರು. 25 ಜಿಲ್ಲೆಗಳಿಂದ ನೂರಾರು ಅತಿಥಿ ಶಿಕ್ಷಕರು ಭಾಗವಹಿಸಿದ್ದರೆಂದು ಶಿಕ್ಷಣ ಉಳಿಸಿ ಸಮಿತಿಯ ರಾಜೇಶ್ ಭಟ್ ತಿಳಿಸಿದ್ದಾರೆ.

ದೇಶದಲ್ಲಿ ಸುಮಾರು 40 ಲಕ್ಷದಷ್ಟು ಶಿಕ್ಷಕರ ಹುದ್ದೆಯಲ್ಲಿ 10ರಿಂದ 12ಲಕ್ಷದಷ್ಟು ಹುದ್ದೆಗಳು ಖಾಲಿಯಿವೆ. ಕರ್ನಾಟಕದಲ್ಲಿ 25 ಸಾವಿರಕ್ಕಿಂತ ಹೆಚ್ಚಿನ ಹುದ್ದೆಗಳು ಪ್ರಾಥಮಿಕ ಶಾಲೆಯಲ್ಲಿ ಖಾಲಿಯಿದೆ. ಇಂದಿಗೂ ಶೇ.29ರಷ್ಟು ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿರುವುದು. ಉಳಿದ  ಶೇ.71ರಷ್ಟು ವಿದ್ಯಾರ್ಥಿಗಳು ವಿವಿಧ ಹಂತಗಳಲ್ಲಿ ಶಾಲಾ-ಕಾಲೇಜು ಬಿಡುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಬೇಕಾದ ಸರಕಾರಗಳು ಶಿಕ್ಷಣ ಕ್ಷೇತ್ರವನ್ನು ವೈದಿಕತೆಯ ವೈಭವೀಕರಣ ಮಾಡಲುತೊಡಗಿವೆ.

-ಪುರುಷೋತ್ತಮ ಬಿಳಿಮಲೆ, ಚಿಂತಕರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News