ಕ್ರಿಶ್ಚಿಯನ್ ಮಿಷೆಲ್, ರಾಜೀವ ಸಕ್ಸೇನಾ, 15 ಜನರ ವಿರುದ್ಧ ಪೂರಕ ಆರೋಪಪಟ್ಟಿ ದಾಖಲು

Update: 2020-09-19 18:13 GMT

 ಹೊಸದಿಲ್ಲಿ,ಸೆ.19: ಸಿಬಿಐ 3,727 ಕೋ.ರೂಗಳ ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಪೂರಕ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು,ಬ್ರಿಟಿಷ್ ಮಧ್ಯವರ್ತಿ ಕ್ರಿಶ್ಚಿಯನ್ ಮಿಷೆಲ್ ಜೇಮ್ಸ್,ರಾಜಕಾರಣಿಗಳು,ಸರಕಾರಿ ಅಧಿಕಾರಿಗಳು ಮತ್ತು ಭಾರತೀಯ ವಾಯುಪಡೆ (ಐಎಎಫ್)ಯ ಅಧಿಕಾರಿಗಳಿಗೆ ಕಮಿಷನ್ ಹಣ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನೆನ್ನಲಾದ ರಾಜೀವ ಸಕ್ಸೇನಾ ಸೇರಿದಂತೆ 15 ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ಶುಕ್ರವಾರ ಸಲ್ಲಿಸಲಾದ ಈ ಎರಡನೇ ಆರೋಪಪಟ್ಟಿಯಲ್ಲಿ ಯಾವುದೇ ರಾಜಕಾರಣಿ ಅಥವಾ ಹಿರಿಯ ಅಧಿಕಾರಿಗಳನ್ನು ಈವರೆಗೆ ಹೆಸರಿಸಲಾಗಿಲ್ಲ. ಸೆಪ್ಟಂಬರ್ 2017ರಲ್ಲಿ ಸಲ್ಲಿಸಲಾದ ಮೊದಲ ಆರೋಪಪಟ್ಟಿಯಲ್ಲಿ ಮಾಜಿ ಐಎಎಫ್ ಮುಖ್ಯಸ್ಥ ಎಸ್.ಪಿ.ತ್ಯಾಗಿಯವರನ್ನು ಆರೋಪಿಯೆಂದು ಹೆಸರಿಸಲಾಗಿತ್ತು.

ಪ್ರಕರಣದಲ್ಲಿ ಮಾಜಿ ರಕ್ಷಣಾ ಕಾರ್ಯದರ್ಶಿ ಹಾಗೂ ಮಾಜಿ ಸಿಎಜಿ ಶಶಿಕಾಂತ ಶರ್ಮಾ,ಏರ್ ವೈಸ್ ಮಾರ್ಷಲ್ (ನಿವೃತ್ತ)ಜಸ್ಬೀರ್ ಸಿಂಗ್ ಪನೇಸರ್ ಮತ್ತು ಇತರ ಮೂವರು ಐಎಎಫ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿಬಿಐ ಕಳೆದ ಮಾರ್ಚ್‌ನಲ್ಲಿ ಸರಕಾರದ ಅನುಮತಿಯನ್ನು ಕೋರಿತ್ತು. ಆದರೆ ರಕ್ಷಣಾ ಸಚಿವಾಲಯದಿಂದ ಅನುಮತಿ ಇನ್ನೂ ಲಭಿಸದ ಹಿನ್ನೆಲೆಯಲ್ಲಿ ಸಿಬಿಐ ಪ್ರಸಕ್ತ ಆರೋಪ ಪಟ್ಟಿಯಲ್ಲಿ ಅವರನ್ನು ಆರೋಪಿಗಳೆಂದು ಹೆಸರಿಸಿಲ್ಲ. ಅನುಮತಿ ಲಭಿಸಿದ ಬಳಿಕ ಶರ್ಮಾ ಮತ್ತು ಇತರರ ವಿರುದ್ಧ ಇನ್ನೊಂದು ಆರೋಪಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2019 ಜನವರಿಯಲ್ಲಿ ದುಬೈನಿಂದ ಭಾರತಕ್ಕೆ ಗಡಿಪಾರಾಗಿದ್ದ ಸಕ್ಸೇನಾನನ್ನು ಜಾರಿ ನಿರ್ದೇಶನಾಲಯ (ಈ.ಡಿ)ವು ಪ್ರಕರಣದಲ್ಲಿ ಮಾಫಿ ಸಾಕ್ಷಿದಾರನಾಗಿಸಿತ್ತು. ಆದರೆ ಆತ ತನಿಖಾ ಅಧಿಕಾರಿಗಳ ದಾರಿ ತಪ್ಪಿಸಿದ್ದಾನೆ ಎಂಬ ಕಾರಣ ನೀಡಿ ಬಳಿಕ ಅದರಿಂದ ಹಿಂದೆ ಸರಿದಿತ್ತು. ಆತ ಹವಾಲಾ ದಲ್ಲಾಳಿಯಾಗಿದ್ದಾನೆ ಮತ್ತು ಪ್ರಮುಖ ಮಾಹಿತಿಗಳನ್ನು ಬಚ್ಚಿಟ್ಟಿದ್ದಾನೆ ಎಂದು ಅದು ಆರೋಪಿಸಿತ್ತು.

 ಮಿಷೆಲ್‌ನನ್ನು ಡಿಸೆಂಬರ್ 2018ರಲ್ಲಿ ದುಬೈನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಭಾರತೀಯ ವಾಯುಪಡೆಗೆ 12 ವಿವಿಐಪಿ ಹೆಲಿಕಾಪ್ಟರ್‌ಗಳ ಮಾರಾಟ ವ್ಯವಹಾರವನ್ನು ಕುದುರಿಸಲು ರಾಜಕಾರಣಿಗಳು,ಸರಕಾರಿ ಅಧಿಕಾರಿಗಳು ಮತ್ತು ಐಎಎಫ್ ಅಧಿಕಾರಿಗಳಿಗೆ ಲಂಚ ನೀಡಲು ಆಂಗ್ಲೋ-ಇಟಾಲಿಯನ್ ಕಂಪನಿ ಆಗಸ್ಟಾ ವೆಸ್ಟ್‌ಲ್ಯಾಂಡ್ ಮಿಷೆಲ್‌ಗೆ 42 ಮಿ.ಯುರೋ (295 ಕೋ.ರೂ.)ಗಳನ್ನು ಪಾವತಿಸಿತ್ತೆನ್ನಲಾಗಿದೆ.

ಆಗಾಗ್ಗೆ ಭಾರತಕ್ಕೆ ಭೇಟಿ ನೀಡುತ್ತಿದ್ದ ಮಿಷೆಲ್ ಐಎಎಫ್ ಮತ್ತು ರಕ್ಷಣಾ ಸಚಿವಾಲಯದಲ್ಲಿಯ ತನ್ನ ಜಾಲದ ಮೂಲಕ ರಕ್ಷಣಾ ಖರೀದಿಗಳಲ್ಲಿ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ರಕ್ಷಣಾ ಖರೀದಿ ಕಡತಗಳ ಚಲನವಲನಗಳ ಮೇಲೆ ನಿಗಾಯಿಡುತ್ತಿದ್ದ ಆತ ಆಗಸ್ಟಾ ವೆಸ್ಟ್‌ಲ್ಯಾಂಡ್‌ನೊಂದಿಗೆ ಸಂಪರ್ಕ ಹೊಂದಿದ್ದ ಆರೋಪಿಗಳಿಗೆ ನಿಯಮಿತವಾಗಿ ಮಾಹಿತಿಗಳನ್ನು ಒದಗಿಸುತ್ತಿದ್ದ ಎಂದು ಸಿಬಿಐ ಅಧಿಕಾರಿಯೋರ್ವರು ತಿಳಿಸಿದರು.

 ಇತರ ಇಬ್ಬರು ಮಧ್ಯವರ್ತಿಗಳಾದ ರಾಲ್ಫ್ ಗಿಡೊ ಹ್ಯಾಷ್ಕೆ ಮತ್ತು ಕಾರ್ಲೊ ಜೆರೋಸಾ ಅವರಿಗೆ ಹೆಲಿಕಾಪ್ಟರ್‌ಗಳ ಬಗ್ಗೆ ನಿರ್ದಿಷ್ಟ ಜ್ಞಾನವಿಲ್ಲದ್ದರಿಂದ ಅವರ ಮೇಲಿನ ನಿಯಂತ್ರಣವನ್ನು ಮಿಷೆಲ್‌ಗೆ ನೀಡಲಾಗಿತ್ತು ಎಂದು ಇನ್ನೋರ್ವ ಸಿಬಿಐ ಅಧಿಕಾರಿ ಹೇಳಿದರು.

ವಿವಿಐಪಿ ಹೆಲಿಕಾಪ್ಟರ್‌ಗಳ ಖರೀದಿಯಲ್ಲಿ ಅಕ್ರಮ ಕಮಿಷನ್ ಅನ್ನು ಕಾನೂನುಬದ್ಧಗೊಳಿಸಲು ಮಿಷೆಲ್ ತನ್ನ ಎರಡು ಸಂಸ್ಥೆಗಳ ಮೂಲಕ ಆಗಸ್ಟ್ ವೆಸ್ಟ್‌ಲ್ಯಾಂಡ್,ಅದರ ಮಾತೃಸಂಸ್ಥೆ ಇಟಲಿಯ ಫಿನ್‌ಮೆಕ್ಯಾನಿಕಾ,ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ಸ್ ಯುಕೆ ಇತ್ಯಾದಿಗಳೊಂದಿಗೆ 12 ಒಪ್ಪಂದಗಳನ್ನು ಮಾಡಿಕೊಂಡಿದ್ದ ಮತ್ತು ಲಂಚದ ಹಣವಾಗಿ 295 ಕೋ.ರೂ.ಗಳನ್ನು ಈ ಸಂಸ್ಥೆಗಳಿಗೆ ಪಾವತಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಮಿಷೆಲ್ ತಯಾರಿಸಿದ್ದ ಟಿಪ್ಪಣಿಯೊಂದರಲ್ಲಿ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ಸಲ್ಲಬೇಕಿದ್ದ ಲಂಚದ ಹಣವನ್ನು ಉಲ್ಲೇಖಿಸಿದ್ದ. ಟಿಪ್ಪಣಿಯಲ್ಲಿ ಆತ ಅವರನ್ನು ಸಂಕೇತಾಕ್ಷರಗಳಿಂದ ಗುರುತಿಸಿದ್ದ. ಮಧ್ಯವರ್ತಿಗಳ ಮೂಲಕ ಭಾರತೀಯರಿಗೆ ನೀಡಲಾದ ಶಂಕಿತ 452 ಕೋ.ರೂ.ಲಂಚದ ಪೈಕಿ 415 ಕೋ.ರೂ.ಗಳ ಜಾಡನ್ನು ತಾನು ಗುರುತಿಸಿದ್ದೇನೆ ಎಂದು ಸಿಬಿಐ ತನ್ನ ಮೊದಲ ಆರೋಪಪಟ್ಟಿಯಲ್ಲಿ ತಿಳಿಸಿತ್ತು.

ಆಗಸ್ಟ್ಟಾ ವೆಸ್ಟ್‌ಲ್ಯಾಂಡ್‌ಗೆ 3,726.9 ಕೋ.ರೂ.ಗಳ ಗುತ್ತಿಗೆ ನೀಡುವಲ್ಲಿ ಅಕ್ರಮಗಳಿಂದಾಗಿ ಸರಕಾರಕ್ಕೆ ಅಂದಾಜು 2,666 ಕೋ.ರೂ.ಗಳ ನಷ್ಟ ಉಂಟಾಗಿದೆ ಎಂದು ಸಿಬಿಐ ಹೇಳಿದೆ.

ಆಗಸ್ಟಾ ವೆಸ್ಟ್‌ಲ್ಯಾಂಡ್‌ನೊಂದಿಗಿನ ಗುತ್ತಿಗೆಯನ್ನು ಜನವರಿ,2014ರಲ್ಲಿ ರದ್ದುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News