​ದೇಶದ ಇತರೆಡೆಗಳಿಗೆ ಇರುವ ಹಕ್ಕು ಕಾಶ್ಮೀರಕ್ಕೂ ಬೇಕು: ಫಾರೂಕ್ ಅಬ್ದುಲ್ಲಾ

Update: 2020-09-20 03:43 GMT

ಹೊಸದಿಲ್ಲಿ : ಜಮ್ಮು ಕಾಶ್ಮೀರದಲ್ಲಿ ಪ್ರಗತಿಯಾಗುತ್ತಿಲ್ಲ. ದೇಶದ ಇತರೆಡೆಗಳಂತೆ ಈ ಪ್ರದೇಶಕ್ಕೆ 4ಜಿ ಇಂಟರ್‌ನೆಟ್ ಸೌಲಭ್ಯ ಇಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಬಂಧನದಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಲೋಕಸಭೆಯಲ್ಲಿ ಮಾತನಾಡಿದ ಅವರು, "ಜಮ್ಮು ಕಾಶ್ಮೀರದ ಸ್ಥಿತಿ ಹೇಗಿದೆಯೆಂದರೆ ಪ್ರಗತಿಯಾಗಬೇಕಾದಲ್ಲಿ ಪ್ರಗತಿ ಇಲ್ಲ. ಇಂದು ದೇಶದ ಇತರೆಡೆಗಳಲ್ಲಿ ಇರುವಂತೆ ನಮ್ಮ ಮಕ್ಕಳಿಗೆ, ಅಂಗಡಿಯವರಿಗೆ 4ಜಿ ಸೌಲಭ್ಯ ಇಲ್ಲ. ಪ್ರತಿಯೊಂದೂ ಇಂಟರ್‌ನೆಟ್ ಸೌಲಭ್ಯವನ್ನು ಅವಲಂಬಿಸಿರುವಾಗ ಅವರು ಹೇಗೆ ಓದಬೇಕು, ಶಿಕ್ಷಣ ಪಡೆಯಬೇಕು?" ಎಂದು ಪ್ರಶ್ನಿಸಿದರು.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಕಾಶ್ಮೀರ ಪ್ರಗತಿ ಸಾಧಿಸಬೇಕಾದರೆ ದೇಶದ ಇತರೆಡೆಗಳಂತೆ ಎಲ್ಲ ಹಕ್ಕುಗಳು ಲಭ್ಯವಾಗಬೇಕು. "ಭಾರತ ಇಂದು ಪ್ರಗತಿ ಸಾಧಿಸುತ್ತಿದ್ದರೆ, ದೇಶದ ಇತರ ಭಾಗಗಳಂತೆ ಅಭಿವೃದ್ಧಿಯಾಗುವ ಹಕ್ಕು ಜಮ್ಮು ಮತ್ತು ಕಾಶ್ಮೀರಕ್ಕೆ ಇಲ್ಲವೇ" ಎಂದು ಕೇಳಿದರು.

ಸೋಪಿಯಾನ್ ಎನ್‌ಕೌಂಟರ್‌ನಲ್ಲಿ ಮೂವರು ಪ್ರಮಾದವಶಾತ್ ಬಲಿಯಾಗಿದ್ದಾರೆ ಎಂದು ಸೇನೆ ಒಪ್ಪಿಕೊಂಡಿದೆ. ಆದ್ದರಿಂದ ಸರ್ಕಾರ ದೊಡ್ಡ ಮೊತ್ತದ ಪರಿಹಾರ ನೀಡಬೇಕು ಎಂದು ಶ್ರೀನಗರ ಸಂಸದರೂ ಆಗಿರುವ ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News